ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಖಾಸಗಿ ವಲಯಕ್ಕೆ ಖರ್ಜೂರದ ಹೋಳಿಗೆ !
ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ಕಾರಣಕ್ಕೆ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಕೇಂದ್ರ ಸರಕಾರವು ಖಾಸಗಿ ವಲಯದಿಂದ ಹೆಚ್ಚಿನ ಬಂಡವಾಳ ಹರಿದು ಬರುವಂತೆ ಮಾಡಲು ಹೊಸದಾಗಿ ತೆರಿಗೆ ವಿನಾಯಿತಿ ನೀಡಲು ಮನಸ್ಸು ಮಾಡುವ ಸಾಧ್ಯತೆಯಿದೆ. ಅದರಲ್ಲೂ ಉತ್ಪಾದನಾ ವಲಯಕ್ಕೆ ಹೆಚ್ಚು ಬಂಡವಾಳ ಬರಬೇಕು ಎಂಬುದು ಉದ್ದೇಶ.
ಉದ್ಯೋಗ ಸೃಷ್ಟಿಗಾಗಿಯೇ ಹಲವು ದಾರಿಗಳನ್ನು ಕೇಂದ್ರ ಸರಕಾರ ಹುಡುಕುತ್ತಿದೆ. ಈ ವಿಚಾರವಾಗಿ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ್ ಪ್ರಭು ಕೂಡ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹೂಡಿಕೆ ಪ್ರೋತ್ಸಾಹಕ್ಕೆ ಅಂತಲೇ ಮಷೀನ್ ಗಳ ಮೇಲೆ ಮಾಡುವ ಹೊಸ ಹೂಡಿಕೆಗೆ ತೆರಿಗೆ ಅನುಕೂಲ ನೀಡುವ ಚಿಂತನೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಅಲ್ಪಾವಧಿಯ ತೆರಿಗೆ ವಿನಾಯಿತಿ ನೀಡಿದರೆ ಒಂದು ಅನಿಶ್ಚಿತತೆ ಇರುತ್ತದೆ ಎಂಬ ಕಾರಣಕ್ಕೆ ದೀರ್ಘಾವಧಿಯ ತೆರಿಗೆ ಅನುಕೂಲ ನೀಡಲು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಐದು ವರ್ಷದ ಹಿಂದೆ ಇಂಥದ್ದೇ ಅನುಕೂಲ ಮಾಡಿಕೊಡಲಾಗಿತ್ತು. ನೂರು ಕೋಟಿಗೂ ಹೆಚ್ಚು ಮೊತ್ತವನ್ನು ಪ್ಲಾಂಟ್ ಮತ್ತು ಮಷಿನರಿ ಮೇಲೆ ಹೂಡಿಕೆ ಮಾಡಿದರೆ ಎರಡು ವರ್ಷ ತೆರಿಗೆ ಇನಾಯ್ತಿ ನೀಡಲಾಗಿತ್ತು.

ಮತ್ತೊಮ್ಮೆ ಪ್ರಸ್ತಾವ ಮುಂದಿಟ್ಟ ಸುರೇಶ್ ಪ್ರಭು
ಹೊಸ ಆಸ್ತಿ ಖರೀದಿ ವೆಚ್ಚದ ಮೇಲೆ ವಿನಾಯ್ತಿ ಎಂದು ಶೇ 15ರಷ್ಟು ನೀಡಲಾಗಿತ್ತು. ಈ ಯೋಜನೆಯ ದುರುಪಯೋಗ ಆಗದಂತೆ ಆ ನಂತರ ಮಾರ್ಚ್ 2017ರವರೆಗೆ ವಿಸ್ತರಿಸಲಾಗಿತ್ತು. ಆದರೆ ಹೂಡಿಕೆಯನ್ನು ರು. 25 ಕೋಟಿಗೆ ಇಳಿಸಲಾಗಿತ್ತು. ಇದೀಗ ಅದೇ ಮಾದರಿಯ ಪ್ರಸ್ತಾವವನ್ನು ಸುರೇಶ್ ಪ್ರಭು ಮತ್ತವರ ಸಚಿವಾಲಯ ಮುಂದಿಟ್ಟಿದೆ.

ದೊಡ್ಡ ಫಾಯಿದೆ ಆಗಲ್ಲ
ಆದರೂ ಅಂತಿಮ ರೂಪುರೇಷೆ ಗೊತ್ತಾಗುವುದು ಫೆಬ್ರವರಿ ಒಂದರಂದೇ. ಮೂಲಗಳ ಪ್ರಕಾರ, ತೆರಿಗೆ ವಿನಾಯಿತಿಯಿಂದ ದೊಡ್ಡ ಮಟ್ಟದ ಫಾಯಿದೆ ಏನೂ ಆಗಲ್ಲ. ಹಲವು ಕಾರ್ಖಾನೆಗಳು ಅವುಗಳ ಸಾಮರ್ಥ್ಯದ ಶೇ ಎಪ್ಪತ್ತರಷ್ಟು ಉತ್ಪಾದನೆ ಮಾತ್ರ ಮಾಡುತ್ತಿವೆ. ಇದೀಗ ಹೊಸ ಹೂಡಿಕೆ ಮಾಡಲು ಮುಂದೆ ಬರುವುದಿಲ್ಲ. ಜತೆಗೆ ಈಗಾಗಲೇ ಪಡೆದ ಸಾಲಗಳ ಮೇಲೆ ಬಡ್ಡಿ ಕಟ್ಟುತ್ತಿರುತ್ತಾರೆ. ಆದ್ದರಿಂದ ಹೊಸ ಹೂಡಿಕೆ ನಿರೀಕ್ಷೆ ಸಾಧ್ಯವಿಲ್ಲ.

ಬ್ಯಾಡ್ ಲೋನ್ ಎಂಬ ಪೆಡಂಭೂತ
ಇನ್ನು ವಿವಿಧ ವಲಯಗಳಲ್ಲಿ ಬ್ಯಾಡ್ ಲೋನ್ (ಕೊಟ್ಟ ಸಾಲ ವಾಪಸ್ ಬರುವ ಸಾಧ್ಯತೆ ಇಲ್ಲದಿರುವಂಥದ್ದು) ವಿಪರೀತ ಹೆಚ್ಚಾಗಿದೆ. ತೆರಿಗೆ ವಿನಾಯ್ತಿ ಅನ್ನೋ ಕೊಡುಗೆ ಕೊಟ್ಟ ಮಾತ್ರಕ್ಕೆ ಬಂಡವಾಳ ಹರಿದುಬರುತ್ತದೆ ಎಂದುಕೊಳ್ಳುವುದು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಗೆ ಒಂದೇ ವರ್ಷ ಅಷ್ಟೇ ಸಮಯ ಇದೆ. ಅಷ್ಟರಲ್ಲಿ ಉದ್ಯೋಗ ಸೃಷ್ಟಿ ಮಾಡಿರುವುದಾಗಿ ಸಾಬೀತು ಮಾಡಬೇಕಾಗುತ್ತದೆ.

ರಸ್ತೆ, ರೈಲ್ವೆ, ನೀರಾವರಿ ಮೇಲೆ ಹೂಡಿಕೆ
ಆರ್ಥಿಕ ಚಟುವಟಿಕೆಗೆ ಜೀವ ತುಂಬುವ ದಾರಿ ಎಂದು ಕೇಂದ್ರ ಸರಕಾರ ಸಾರ್ವಜನಿಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಾ ಬಂದಿದೆ. ಅದರಲ್ಲಿ ರಸ್ತೆ, ರೈಲ್ವೆ, ನೀರಾವರಿ ಯೋಜನೆಗಳಿಗೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದೆ. ಆದರೆ ಆರ್ಥಿಕತೆಯು ನಿರೀಕ್ಷೆ ಮಟ್ಟದಲ್ಲಿ ಚೇತರಿಕೆ ಕಂಡಿಲ್ಲ.












Click it and Unblock the Notifications