ಅಕ್ರಮ ಹಣ ವರ್ಗಾವಣೆ ಪ್ರಕರಣ: ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಬಂಧನ
ನವದೆಹಲಿ, ಜುಲೈ 14; ಅಕ್ರಮ ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಎಸ್‌ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಚಿತ್ರಾ ರಾಮಕೃಷ್ಣ ಬಂಧನಕ್ಕೆ ದೆಹಲಿ ನ್ಯಾಯಾಲಯ ಅನುಮತಿ ನೀಡಿತ್ತು. ವಿಶೇಷ ನ್ಯಾಯಾಧೀಶ ಸುನೈನಾ ಶರ್ಮಾ ಚಿತ್ರಾ ರಾಮಕೃಷ್ಣರನ್ನು ನಾಲ್ಕು ದಿನಗಳ ಕಾಲ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ನ್ಯಾಯಾಧೀಶರು ನೀಡಿದ ಆದೇಶದ ಮೇರೆಗೆ ಮಾಜಿ ಎನ್‌ಎಸ್‌ಇ ಎಂಡಿಯನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಧೀಶರು ಆರೋಪಿಗಳ ವಿರುದ್ಧ ಪ್ರೊಡಕ್ಷನ್ ವಾರಂಟ್ ಹೊರಡಿಸಿದ್ದರು.
ಆರೋಪಿಯನ್ನು ಹಾಜರುಪಡಿಸಿದ ಬಳಿಕ ಆಕೆಯನ್ನು ವಿಚಾರಣೆಗೆ ಒಳಪಡಿಸಲು ಇಡಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿತು. ನಂತರ, ಅಸಹಕಾರದ ಆಧಾರದ ಮೇಲೆ ಚಿತ್ರಾ ರಾಮಕೃಷ್ಣರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು. ಚಿತ್ರಾ ರಾಮಕೃಷ್ಣರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂಬತ್ತು ದಿನಗಳ ಕಸ್ಟಡಿ ವಿಚಾರಣೆಗೆ ಒತ್ತಾಯಿಸಿತು. ಆದರೆ ನ್ಯಾಯಾಲಯ ನಾಲ್ಕು ದಿನಗಳ ಕಾಲ ವಶಕ್ಕೆ ನೀಡಿತು.

ಏನಿದು ಪ್ರಕರಣ?
ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣ ಮತ್ತು ಷೇರು ವಿನಿಮಯ ಕೇಂದ್ರದ ಉದ್ಯೋಗಿಗಳ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ, ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಮತ್ತು ಮತ್ತು ರವಿ ನಾರಾಯಣ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.
2002ರ ಮನಿ ಲಾಂಡರಿಂಗ್ ತಡೆ ಕಾಯ್ದೆಗೆ (PMLA), ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಜಾರಿ ಸಂಸ್ಥೆಯು ಪ್ರಕರಣವನ್ನು ದಾಖಲಿಸಿದೆ. ಕೇಂದ್ರೀಯ ತನಿಖಾ ದಳ (CBI) ಚಿತ್ರ ರಾಮಕೃಷ್ಣ, ರವಿ ನಾರಾಯಣ್ ಮತ್ತು ಸಂಜಯ್ ಪಾಂಡೆ ವಿರುದ್ಧ ದೂರು ದಾಖಲಿಸಿದ ಒಂದು ವಾರದ ನಂತರ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.

ಫೋನ್ ಕದ್ದಾಲಿಸಲು 4.45 ಕೋಟಿ ರುಪಾಯಿ ಪಾವತಿ
ಇತ್ತೀಚಿನ ಎಫ್‌ಐಆರ್‌ನಲ್ಲಿ, ರವಿ ನಾರಾಯಣ್ ಮತ್ತು ಚಿತ್ರಾ ರಾಮಕೃಷ್ಣ ಮುಂಬೈನ ನಿವೃತ್ತ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಅವರು ಸ್ಥಾಪಿಸಿದ ಐಎಸ್‌ಇಸಿ ( iSEC) ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.
ಸ್ಟಾಕ್ ಎಕ್ಸ್‌ಚೇಂಜ್ ಉದ್ಯೋಗಿಗಳ ಫೋನ್ ಅನ್ನು ಅಕ್ರಮವಾಗಿ ಕದ್ದಾಲಿಕೆ ಮಾಡಿದ್ದಕ್ಕಾಗಿ ಸಂಜಯ್ ಪಾಂಡೆ ಅವರ ಕಂಪನಿಯು 4.45 ಕೋಟಿ ರುಪಾಯಿ ಹಣ ಪಾವತಿಸಿದೆ ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ. ಫೋನ್ ಟ್ಯಾಪಿಂಗ್ ಅನ್ನು ಎನ್‌ಎಸ್‌ಇಯಲ್ಲಿ "ಸೈಬರ್ ದುರ್ಬಲತೆಗಳ ಆವರ್ತಕ ಅಧ್ಯಯನ" ಎಂದು ಮರೆಮಾಚಲಾಗಿದೆ ಎಂದು ಎಫ್‌ಐಆರ್ ಹೇಳಿದೆ.
ಫೋನ್ ಕದ್ದಾಲಿಕೆ ಮಾತ್ರವಲ್ಲ, ಸಂಜಯ್ ಪಾಂಡೆ ಅವರ ಕಂಪನಿಯು ಸ್ಟಾಕ್ ಮಾರುಕಟ್ಟೆಯ ಹಿರಿಯ ಮ್ಯಾನೇಜ್‌ಮೆಂಟ್‌ಗೆ ಧ್ವನಿಮುದ್ರಿತ ಸಂಭಾಷಣೆಗಳ ಪ್ರತಿಗಳನ್ನು ಸಹ ನೀಡಿದೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ.

ಎಫ್‌ಐಆರ್ ಯಾರ ಯಾರ ಹೆಸರು ದಾಖಲು
"ಎನ್‌ಎಸ್‌ಇಯ ಉನ್ನತ ಅಧಿಕಾರಿಗಳು ಖಾಸಗಿ ಕಂಪನಿಯ ಪರವಾಗಿ ಒಪ್ಪಂದ ಮತ್ತು ಕೆಲಸದ ಆದೇಶಗಳನ್ನು ಹೊರಡಿಸಿದ್ದಾರೆ ಮತ್ತು ಭಾರತೀಯ ಟೆಲಿಗ್ರಾಫ್ ಕಾಯಿದೆಯಡಿಯಲ್ಲಿ ನಿಬಂಧನೆಗಳಿಗೆ ವಿರುದ್ಧವಾಗಿ ಯಂತ್ರಗಳನ್ನು ಅಳವಡಿಸುವ ಮೂಲಕ ಅದರ ಉದ್ಯೋಗಿಗಳ ಫೋನ್ ಕರೆಗಳನ್ನು ಅಕ್ರಮವಾಗಿ ತಡೆಹಿಡಿದಿದ್ದಾರೆ" ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. "ಈ ವಿಷಯದಲ್ಲಿ ಎನ್‌ಎಸ್‌ಇ ಉದ್ಯೋಗಿಗಳ ಒಪ್ಪಿಗೆಯನ್ನು ಸಹ ತೆಗೆದುಕೊಂಡಿಲ್ಲ" ಸಿಬಿಐ ತಿಳಿಸಿದೆ.
ಕೇಂದ್ರ ತನಿಖಾ ಸಂಸ್ಥೆಯು ಎಫ್‌ಐಆರ್‌ನಲ್ಲಿ ಸಂಜಯ್ ಪಾಂಡೆ, ಅವರ ದೆಹಲಿ ಮೂಲದ ಕಂಪನಿ, ಎನ್‌ಎಸ್‌ಇಯ ಮಾಜಿ ಎಂಡಿ ಮತ್ತು ಸಿಇಒಗಳಾದ ನರೈನ್ ಮತ್ತು ರಾಮಕೃಷ್ಣ, ಕಾರ್ಯನಿರ್ವಾಹಕ ಉಪಾಧ್ಯಕ್ಷ ರವಿ ವಾರಣಾಸಿ ಮತ್ತು ಮುಖ್ಯಸ್ಥ ಮಹೇಶ್ ಹಲ್ದಿಪುರ್ ಅವರ ಹೆಸರುಗಳನ್ನು ದಾಖಲಿಸಿದೆ.

18 ನಗರಗಳಲ್ಲಿ ಶೋಧ ಕಾರ್ಯಾಚರಣೆ
ರಹಸ್ಯ ಕಣ್ಗಾವಲಿನ ಆರೋಪದ ಅಕ್ರಮಗಳನ್ನು ಜಾರಿ ನಿರ್ದೇಶನಾಲಯ ಕಂಡುಹಿಡಿದ ನಂತರ ಅದು ಗೃಹ ವ್ಯವಹಾರಗಳ ಸಚಿವಾಲಯಕ್ಕೆ (ಎಂಎಚ್‌ಎ) ವರದಿ ಮಾಡಿತು, ಇದು ಆರೋಪಗಳ ತನಿಖೆಯನ್ನು ಸಿಬಿಐಗೆ ವಹಿಸಿದೆ.
ಕೇಂದ್ರ ಗೃಹ ಸಚಿವಾಲಯದ ಉಲ್ಲೇಖದ ಮೇರೆಗೆ ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ಶುಕ್ರವಾರ ಜುಲೈ 8 ರಂದು 18 ನಗರಗಳಲ್ಲಿ ಸಂಘಟಿತ ಶೋಧ ಕಾರ್ಯಾಚರಣೆ ಪ್ರಾರಂಭಿಸಿತು.












Click it and Unblock the Notifications