ಕರ್ನಾಟಕದಲ್ಲಿ ಹೂಡಿಕೆ, ಉದ್ಯೋಗ ಹೆಚ್ಚಿಸಲಿರುವ ಸ್ವೀಡನ್, ಬೊಮ್ಮಾಯಿ ಜೊತೆ ಚರ್ಚೆ
ಬೆಂಗಳೂರು, ಸೆಪ್ಟಂಬರ್30: ಸ್ವೀಡನ್‍ನ ರಾಯಭಾರಿ ಕ್ಲಾಸ್ ಮೊಲಿನ್ ಮತ್ತು ಹೊಸ ವಾಣಿಜ್ಯ ಕಮಿಷನರ್ ಸೆಸಿಲಿಯಾ ಒಸ್ಕರ್ಸನ್ ನೇತೃತ್ವದ ನಿಯೋಗವು ಸಿಲಿಕಾನ್ ಸಿಟಿ ಬೆಂಗಳೂರಿಗೆ ಭೇಟಿ ನೀಡಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಂಡವಾಳ ವ್ಯವಸ್ಥೆ ಕುರಿತಾದ ಕಾರ್ಯಾಗಾರದಲ್ಲಿ ಈ ನಿಯೋಗವು ಪಾಲ್ಗೊಂಡಿತ್ತು. ಎರಡು ದಿನಗಳ ಈ ಭೇಟಿಯ ಸಂದರ್ಭದಲ್ಲಿ ಕೈಗಾರಿಕೆ ಸಚಿವರು ಮತ್ತು ಕರ್ನಾಟಕ ಸರ್ಕಾರದ ವಿವಿಧ ಅಧಿಕಾರಿಗಳೊಂದಿಗೆ ರಾಜ್ಯದಲ್ಲಿ ಹೂಡಿಕೆ ಮಾಡುವ ಕುರಿತು ಮಾತುಕತೆ ನಡೆಸಲಾಯಿತು. ಈ ನಿಯೋಗವು ವಿಪ್ರೋ ಸಂಸ್ಥೆಗೂ ಭೇಟಿ ನೀಡಿ ಸ್ವೀಡಿಶ್ ಮತ್ತು ಭಾರತೀಯ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಿತು.
ಸೋಮವಾರ ಹಲವಾರು ಸ್ವೀಡಿಶ್ ಕಂಪನಿಗಳ ಮುಖ್ಯಸ್ಥರೊಂದಿಗೆ ಸ್ವೀಡಿಶ್ ನಿಯೋಗವು ಕರ್ನಾಟಕ ಸರ್ಕಾರದ ಕೈಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹೂಡಿಕೆ ಸೌಲಭ್ಯಗಳ ಕುರಿತಾದ ಕಾರ್ಯಾಗಾರದಲ್ಲಿ ಪಾಲ್ಗೊಂಡಿತು. ಈ ಸಂದರ್ಭದಲ್ಲಿ ಕಂಪನಿ ನಾಯಕರು ಕರ್ನಾಟಕದಲ್ಲಿ ವ್ಯವಹಾರಗಳನ್ನು ನಡೆಸುತ್ತಿರುವ ಬಗ್ಗೆ ಮತ್ತು ಹೂಡಿಕೆ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, "ಸ್ವೀಡಿಶ್ ಮತ್ತು ಭಾರತ ಉತ್ತಮ ಪಾಲುದಾರ ರಾಷ್ಟ್ರಗಳಾಗಿದ್ದು, ಈ ಪಾಲುದಾರಿಕೆಯನ್ನು ಮತ್ತಷ್ಟು ಸಶಕ್ತಗೊಳಿಸುವ ಅಗತ್ಯವಿದೆ. ಕರ್ನಾಟಕ ಸರ್ಕಾರವು ಸುಸ್ಥಿರ ಬೆಳವಣಿಗೆ ಮತ್ತು ಹೂಡಿಕೆಗಳಿಗೆ ಆದ್ಯತೆ ನೀಡುತ್ತಿದೆ ಮತ್ತು ಹೊಸ ತಂತ್ರಜ್ಞಾನಗಳ ಸಹಭಾಗಿತ್ವವನ್ನು ಮಾಡಿಕೊಳ್ಳಲು ಸದಾ ಆಸಕ್ತಿ ತೋರುತ್ತಾ ಬಂದಿದೆ. ಭವಿಷ್ಯದಲ್ಲಿ ಆರ್ & ಡಿ ಗೆ ಆದ್ಯತೆ ನೀಡಲಾಗುತ್ತದೆ ಮತ್ತು ಆರ್ & ಡಿ ನಲ್ಲಿ ಹೂಡಿಕೆ ಮಾಡಲು ಕೈಗಾರಿಕೆಗಳಿಗೆ ಪ್ರೋತ್ಸಾಹವನ್ನು ಪರಿಚಯಿಸಲಾಗುತ್ತದೆ. ಉದ್ಯೋಗ, ಹೂಡಿಕೆ ಮತ್ತು ನಾವೀನ್ಯತೆ ಈ ಮೂರು ಮಾರ್ಗದರ್ಶನ ತತ್ತ್ವಗಳಾಗಿವೆ'' ಎಂದು ಹೇಳಿದರು.

2,00,000 ಜನರಿಗೆ ಉದ್ಯೋಗ
ಪ್ರಸ್ತುತ ಭಾರತದಲ್ಲಿ 200 ಕ್ಕೂ ಹೆಚ್ಚು ಸ್ವೀಡಿಶ್ ಕಂಪನಿಗಳು ಇದ್ದು, 2,00,000 ಜನರಿಗೆ ಉದ್ಯೋಗ ಕಲ್ಪಿಸಿವೆ. ಕರ್ನಾಟಕ ಒಂದರಲ್ಲೇ 96 ಸ್ವೀಡಿಶ್ ಕಂಪನಿಗಳು 42,000 ಜನರಿಗೆ ಉದ್ಯೋಗ ನೀಡಿವೆ. 40 ಕಂಪನಿಗಳು ಕರ್ನಾಟಕದಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿದ್ದು, 14 ಕಂಪನಿಗಳು ಉತ್ಪಾದನಾ ಘಟಕಗಳನ್ನು ಹೊಂದಿವೆ.

ರಾಯಭಾರಿ ಕ್ಲಾಸ್ ಮೊಲಿನ್
ರಾಯಭಾರಿ ಕ್ಲಾಸ್ ಮೊಲಿನ್ ಅವರು ಮಾತನಾಡಿ, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಾವು ನಡೆಸಿದ ಮಾತುಕತೆಯು ರಚನಾತ್ಮಕ ಮತ್ತು ಫಲಪ್ರದವಾಗಿತ್ತು. ಎಬಿಬಿ ಮತ್ತು ವೋಲ್ವೋ, ಎಚ್ & ಎಂ ಮತ್ತು ಐಕೆಇಎಯಂತಹ ಸ್ವೀಡಿಶ್ ಕಂಪನಿಗಳು ಇಲ್ಲಿದ್ದು, ಇದೀಗ ಟ್ರೂಕಾಲರ್ ಮತ್ತು ಹಲವಾರು ಸ್ಟಾರ್ಟಪ್‍ಗಳು ಕರ್ನಾಟಕದತ್ತ ಒಲವು ತೋರುತ್ತಿವೆ. ಸಾಂಕ್ರಾಮಿಕದಿಂದ ಎದುರಾದ ಸವಾಲುಗಳನ್ನು ಎದುರಿಸಲು ಬೆಂಬಲ ನೀಡುತ್ತಿದ್ದು, ಈ ಕಂಪನಿಗಳು ಹೂಡಿಕೆ, ವಿಸ್ತರಣೆಯನ್ನು ಮುಂದುವರಿಸಲಿವೆ'' ಎಂದು ಹೇಳಿದರು.

ರಿಶದ್ ಪ್ರೇಮ್‍ಜಿ ಜೊತೆ ಭೇಟಿ
ಈ ನಿಯೋಗವು ವಿಪ್ರೋ ಅಧ್ಯಕ್ಷ ರಿಶದ್ ಪ್ರೇಮ್‍ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತಲ್ಲದೇ, ಸ್ವೀಡಿಶ್ ಗೇಮಿಂಗ್ ಕಂಪನಿಯಾದ ಮಾಡರ್ನ್ ಟೈಮ್ಸ್ ಗ್ರೂಪ್ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಪ್ಲೇಸಿಂಪಲ್‍ಗೂ ಭೇಟಿ ನೀಡಿ ಮಾತುಕತೆ ನಡೆಸಿತು. ಅಲ್ಲದೇ, ಐಐಎಂ ಬೆಂಗಳೂರು, ವೋಲ್ವೋದ ಕಾಂಪ್‍ಎಕ್ಸ್, ಆರ್ಟ್‍ಪಾರ್ಕ್ ಮತ್ತು ಇಸ್ರೋಗೂ ಭೇಟಿ ನೀಡಿತು.

ಕರ್ನಾಟಕದ ಕೈಗಾರಿಕಾ ನೀತಿ ಸಹಕಾರಿ
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಬಂಡವಾಳ ಹೂಡಿಕೆಗೆ ಮುಂದಾಗುತ್ತಿವೆ. ಆದರೆ, ರಾಜ್ಯದ ಇತರ ಎರಡನೇ ಹಾಗೂ ಮೂರನೇ ಹಂತದ ಜಿಲ್ಲೆಗಳಲ್ಲೂ ಬಂಡವಾಳ ಆಕರ್ಷಿಸಲು ಅನುಕೂಲ ಮಾಡಿಕೊಡುವಂತಹ ಕ್ರಾಂತಿಕಾರಿ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಲಾಗಿದೆ. ಇದು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಿದೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಕೈಗಾರಿಕೆಗಳ ಸ್ಥಾಪನೆ ಹಾಗೂ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಉತ್ತಮ ಸಾರಿಗೆ ಸಂಪರ್ಕ, ಉತ್ತಮ ಮಾನವ ಸಂಪನ್ಮೂಲ ಸೇರಿದಂತೆ ಹಲವಾರು ಸೌಲಭ್ಯಗಳನ್ನು ರಾಜ್ಯ ಸರಕಾರ ನೀಡುತ್ತಿದೆ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದರು.












Click it and Unblock the Notifications