ಕ್ರಿಪ್ಟೋಕರೆನ್ಸಿ ಬಳಸಲು ಅನುಮತಿ ನೀಡಿದ ಸುಪ್ರೀಂಕೋರ್ಟ್
ನವದೆಹಲಿ, ಮಾರ್ಚ್ 4: ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ.
ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಅವರಿದ್ದ ತ್ರಿಸದಸ್ಯ ಪೀಠವು ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಬುಧವಾರದಂದು(ಮಾರ್ಚ್ 4) ರದ್ದುಗೊಳಿಸಿದೆ. ಡಿಜಿಟಲ್ ಕರೆನ್ಸಿಯಾಗಿರುವ ಕ್ರಿಪ್ಟೋಕರೆನ್ಸಿಯಲ್ಲಿ ಎನ್ಕ್ರಿಪ್ಷನ್ ತಂತ್ರಜ್ಞಾನ ಬಳಸಿ ಕರೆನ್ಸಿ ಯೂನಿಟ್ ಗಳನ್ನು ಸೃಷ್ಟಿಸಲಾಗುತ್ತದೆ, ಪ್ರತಿ ವ್ಯವಹಾರವೂ ಸುರಕ್ಷಿತವಾಗಿದ್ದು, ಆರ್ ಬಿಐ ಸಂಪರ್ಕವಿಲ್ಲದೆ, ಸ್ವತಂತ್ರವಾಗಿ ವ್ಯವಹರಿಸಬಹುದಾಗಿದೆ.
2018ರ ಏಪ್ರಿಲ್ 6ರಂದು ಅಧಿಸೂಚನೆ ಹೊರಡಿಸಿದ ಆರ್ ಬಿಐ, ಕ್ರಿಪ್ಟೋಕರೆನ್ಸಿ ಬಳಕೆ, ವ್ಯವಹಾರ, ಪ್ರಚಾರ ಎಲ್ಲಕ್ಕೂ ನಿಷೇಧ ಹೇರಿತ್ತು. ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿತ್ತು.
|
ನಿಯಂತ್ರಣ ರಹಿತ ಬಿಟ್ ಕಾಯಿನ್ ವ್ಯವಹಾರ
ನಿಯಂತ್ರಣ ರಹಿತ ಬಿಟ್ ಕಾಯಿನ್ ವ್ಯವಹಾರದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವ್ಯವಹರಿಸುತ್ತಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂರು ವರ್ಷಗಳ ಹಿಂದೆ ಅಂದಾಜಿಸಿತ್ತು. ಲಕ್ಷಾಂತರ ಮಂದಿಗೆ ನಿಷೇಧಿತ ಕರೆನ್ಸಿ ವ್ಯವಹಾರದಲ್ಲಿ ತೊಡಗಿದ್ದವರಿಗೆ ನೋಟಿಸ್ ಜಾರಿ ಮಾಡಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

20 ಲಕ್ಷ ಜನರು ನೋಂದಣಿ?
"ಅಧಿಕಾರಿಗಳ ಮಾಹಿತಿ ಪ್ರಕಾರ ದೇಶದಲ್ಲಿ ಈ ರೀತಿ ಬಿಟ್ ಕಾಯಿನ್ ವ್ಯವಹಾರ ನಡೆಸಲು 20 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದು ಇವರಲ್ಲಿ 4-5 ಲಕ್ಷ ಜನರು ಮಾತ್ರ ಹೂಡಿಕೆ, ವ್ಯವಹಾರ ನಡೆಸುತ್ತಿದ್ದರು. ತೆರಿಗೆ ವಂಚನೆ ಪ್ರಕರಣ ದಾಖಲಿಸಿ ಇವರಿಗೆ ನೋಟಿಸ್ ನೀಡಲಾಗಿದೆ. ಇದೀಗ ಬಿಟ್ ಕಾಯಿನ್ ಹೂಡಿಕೆ ಮತ್ತು ವ್ಯವಹಾರದ ಬಗ್ಗೆ ಇವರೆಲ್ಲಾ ತೆರಿಗೆ ಕಟ್ಟಬೇಕಾಗಿದೆ," ಎಂದು ಅಧಿಕಾರಿ ಹೇಳಿದ್ದಾರೆ.

ಯಾವುದೇ ನಿಯಂತ್ರಣ ಸಂಸ್ಥೆಗಳಿಲ್ಲ
ದೇಶದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರಕ್ಕೆ ಯಾವುದೇ ನಿಯಂತ್ರಣ ಸಂಸ್ಥೆಗಳಿಲ್ಲ. ಸದ್ಯ ಈಗಿರುವ ಕಾನೂನುಗಳ ಮೇಲೆ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಕೆಂಪ್‍ಫೋರ್ಟ್ ಮಾಲ್‍ನಲ್ಲಿ ಯುನೊಕಾಯಿನ್ ಕಂಪನಿಯ ಹೆಸರಿನಲ್ಲಿ ಎಟಿಎಂ ಕಿಯಾಸ್ಕೋ ಅಳವಡಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು 2018ರಲ್ಲಿ ಬಂಧಿಸಲಾಗಿತ್ತು.

ಬೆಂಗಳೂರು ಪ್ರಕರಣ
ತುಮಕೂರು ಮೂಲದ 37 ವರ್ಷ ವಯಸ್ಸಿನ ಹರೀಶ್ ಬಿವಿ ಎಂಬಾತನನ್ನು ಎಚ್ಎಎಲ್ ಠಾಣೆ ಹಾಗೂ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದರು. ರಾಜಾಜಿನಗರದಲ್ಲಿ ಕಚೇರಿ ಹೊಂದಿರುವ ಯುನೋಕಾಯಿನ್ ಟೆಕ್ನಾಲಜೀಸ್ ಕಂಪನಿ ಸ್ಥಾಪಕ ಸಾತ್ವಿಕ್ ವಿಶ್ವನಾಥ್ ಪ್ರತಿಕ್ರಿಯಿಸಿ, ಬಿಟ್ ಕಾಯಿನ್ ಮಾದರಿ ಕ್ರಿಪ್ಟೋ ಕರೆನ್ಸಿ ಬಳಕೆಗೆ ಭಾರತದಲ್ಲಿ ಕಾನೂನು ಮಾನ್ಯತೆ ಇಲ್ಲ, ಆದರೆ, ಎಟಿಎಂ ಇನ್ನೂ ಪರೀಕಾರ್ಥವಾಗಿ ಬಳಸಲಾಗುತ್ತಿತ್ತು. ಯಾವ ಗ್ರಾಹಕರು ಇದನ್ನು ಉಪಯೋಗಿಸಿರಲಿಲ್ಲ. ನಮ್ಮ ಕಂಪನಿ ಎಟಿಎಂ ಹಾಗೂ ಬಿಟ್ ಕಾಯಿನ್ ಬಗ್ಗೆ ಅನೇಕ ತಪ್ಪು ಮಾಹಿತಿ ಇದೆ ಎಂದಿದ್ದರು.












Click it and Unblock the Notifications