Sachin Tendulkar: ಕೇವಲ ₹5 ಕೋಟಿ ಹೂಡಿಕೆ.. ಗಳಿಸಿದ್ದು ₹26.5 ಕೋಟಿ, ಹೇಗೆ ಸಾಧ್ಯ?- ಇಲ್ಲಿದೆ ಮಾಹಿತಿ
ಕ್ರಿಕೆಟ್ ದೇವರು ಅಂತಲೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಬರೀ ಕ್ರಿಕೆಟ್‌ನಲ್ಲಿ ಅಪಾರ ಸಾಧನೆಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇದೀಗ ಇನ್ನಿತರ ಕ್ಷೇತ್ರಗಳಲ್ಲೂ ಕೂಡ ಮುಂದಿದ್ದಾರೆ. ಅವರು 9 ತಿಂಗಳ ಹಿಂದಷ್ಟೇ ಒಂದು ಕಂಪನಿಯಲ್ಲಿ 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದೀಗ ಈ ಹೂಡಿಕೆಯಿಂದ ಅವರು ಶೇಕಡಾ 531ರಷ್ಟು ಆದಾಯ ಗಳಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ದರ ಪಡೆದ ಮಿಚೆಲ್ ಸ್ಟಾರ್ಕ್ ಅವರನ್ನೂ ತೆಂಡೂಲ್ಕರ್ ಅವರು ಮೀರಿಸಿದ್ದಾರೆ.
ಗುರುವಾರ (ಡಿಸೆಂಬರ್ 28) ಹೈದರಾಬಾದ್ ಮೂಲದ ಆಜಾದ್ ಇಂಜಿನಿಯರಿಂಗ್ ಕಂಪನಿ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಶೇಕಡಾ 37ರಷ್ಟು ಪ್ರೀಮಿಯಂ ದರದಲ್ಲಿ ಲಿಸ್ಟಿಂಗ್ ಆಗಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್‌ರಂತಹ ಹೂಡಿಕೆದಾರರಿಗೆ ಭಾರೀ ಆದಾಯ ನೀಡಿದೆ. ಸಚಿನ್ ತೆಂಡೂಲ್ಕರ್ 9 ತಿಂಗಳ ಹಿಂದೆ ಅವರು ಆಜಾದ್ ಇಂಜಿನಿಯರಿಂಗ್‌ನ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಖರೀದಿಸಿದ್ದರು.

ಇದೀಗ ಐಪಿಒದಲ್ಲಿ ಕಂಪನಿಯ ಷೇರುಗಳು ಭಾರೀ ಏರಿಕೆ ಕಂಡಿದ್ದರಿಂದ ಅವರು 26.5 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಇದು ಐಪಿಎಲ್‌ನ ಅತ್ಯಂತ ದುಬಾರಿ ಕ್ರಿಕೆಟ್ ಆಟಗಾರ ಮಿಚೆಲ್ ಸ್ಟಾರ್ಕ್ ಅವರ ಇತ್ತೀಚಿನ ದಾಖಲೆಯ ಡೀಲ್ 24.75 ಕೋಟಿ ರೂಪಾಯಿಗಿಂತಲೂ ಹೆಚ್ಚಳ ಆಗಿದೆ. ಈ ಮೂಲಕ ಕ್ರಿಕೆಟ್ ಆಡದೇ ಭರ್ಜರಿ ಹಣ ಗಳಿಸಿದ್ದಾರೆ ಸಚಿನ್ ತೆಂಡೂಲ್ಕರ್.
ಐಪಿಒಗಿಂತ ಮೊದಲೇ ಪ್ರತಿ ಷೇರಿಗೆ ಸರಾಸರಿ 114 ರೂಪಾಯಿ ಸ್ವಾಧೀನ ವೆಚ್ಚದಲ್ಲಿ ಒಟ್ಟು 4,38,210 ಷೇರುಗಳನ್ನು ತೆಂಡೂಲ್ಕರ್ ಅವರು ಖರೀದಿಸಿದ್ದರು. ನಂತರ ಷೇರು ವಿಭಜನೆ ಮತ್ತು ಬೋನಸ್ ವಿತರಣೆಯೂ ನಡೆದಿತ್ತು. 740 ಕೋಟಿ ರೂಪಾಯಿ ಮೊತ್ತದ ಐಪಿಒ ವೇಳೆ ತನ್ನ ಪಾಲನ್ನು ಹಿಂತೆಗೆದುಕೊಳ್ಳದಿರಲು ತೀರ್ಮಾನಿಸಿದ ತೆಂಡೂಲ್ಕರ್ ಜಾಣತನ ಮೆರೆದಿದ್ದರು.
ಇದೀಗ ಇಂದು (ಡಿಸೆಂಬರ್ 28) ಅಜಾದ್ ಇಂಜಿನಿಯರಿಂಗ್ ಷೇರುಗಳು ಎನ್‌ಎಸ್‌ಇಯಲ್ಲಿ ಬರೋಬ್ಬರಿ 720 ರೂಪಾಯಿನಂತೆ ಲಿಸ್ಟಿಂಗ್ ಆಗಿವೆ. ಐಪಿಒದಲ್ಲಿ ಹೂಡಿಕೆದಾರರಿಗೆ ಪ್ರತಿ ಷೇರಿಗೆ 524 ರೂಪಾಯಿ ದರದಲ್ಲಿ ಷೇರುಗಳನ್ನು ವಿತರಣೆ ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ ಶೇಕಡಾ 37.4ರಷ್ಟು ಪೀಮಿಯಂ ದರದಲ್ಲಿ ಷೇರುಗಳು ಪಟ್ಟಿಯಾಗಿದ್ದು, ಹೂಡಿಕೆದಾರರಿಗೆ ಬಂಪರ್ ಲಾಭ ತಂದುಕೊಟ್ಟಿವೆ.
ಈ ಸಂಸ್ಥೆಯ ಐಪಿಒ ಯಶಸ್ಸು ತೆಂಡೂಲ್ಕರ್ ಅವರನ್ನು ಶ್ರೀಮಂತರನ್ನಾಗಿ ಮಾಡಿದ್ದು ಮಾತ್ರವಲ್ಲದೆ, ತಲಾ 1 ಕೋಟಿ ರೂಪಾಯಿ ಹೂಡಿಕೆ ಮಾಡಿದ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ವಿವಿಎಸ್ ಲಕ್ಷ್ಮಣ್, ತೆಂಡೂಲ್ಕರ್ ಅವರಿಗೂ ಲಾಭ ಮಾಡಿಕೊಟ್ಟಿದೆ. ಆದರೆ, ಇವರೆಲ್ಲರೂ ತೆಂಡೂಲ್ಕರ್ಗಿಂತ ದುಪ್ಪಟ್ಟು ಬೆಲೆಗೆ ಷೇರುಗಳನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಇವರು ಪ್ರತಿ ಷೇರಿಗೆ 228.17 ರೂಪಾಯಿ ಬೆಲೆ ನೀಡಿದ್ದು, ಈಗ ಶೇಕಡಾ 215% ಲಾಭ ಮಾಡಿಕೊಂಡಿದ್ದಾರೆ. ಅವರ ಒಂದು ಕೋಟಿ ರೂಪಾಯಿ ಹೂಡಿಕೆಯು 3.15 ಕೋಟಿ ರೂಪಾಯಿಗೆ ಏರಿದೆ.












Click it and Unblock the Notifications