ಆರ್ ಬಿಐನಿಂದ ರೆಪೋ ದರ ಇಳಿಕೆ, ಸಾಲದ ಬಡ್ಡಿದರ ಇಳಿಕೆ ಸಾಧ್ಯತೆ!
ಮುಂಬೈ, ಆಗಸ್ಟ್ 2: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಅಲ್ಪಕಾಲೀನ ಸಾಲ ದರವನ್ನು (ರೆಪೋ ದರ) 0.25 ಮೂಲಾಂಶವನ್ನು ಇಳಿಸುವ ಮೂಲಕ ಶೇ 6ಕ್ಕೆ ಇಳಿಕೆ ಮಾಡಲಾಗಿದೆ. ಮೂರನೇ ದ್ವೈಮಾಸಿಕ ನೀತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ದೇಶದ ಚಿಲ್ಲರೆ ಹಣದುಬ್ಬರ ದರವು ಜೂನ್ ನಲ್ಲಿ ದಾಖಲೆಯ ಶೇಕಡಾ 1.54ಕ್ಕೆ ಇಳಿದಿತ್ತು. ಇದರಿಂದ ಬಡ್ಡಿದರವು ಕಡಿಮೆ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಇದೀಗ ಸಾಲದ ಮೇಲಿನ ಬಡ್ಡಿದರವು ಗಮನಾರ್ಹವಾಗಿ ಕಡಿಮೆ ಆಗುವುದು ಖಚಿತವಾಗಿದೆ. ಈ ಬಾರಿ ರೆಪೋದರ ಕಡಿಮೆ ಆಗುತ್ತದೆ ಎಂಬ ನಿರೀಕ್ಷೆಯು ನಿಜವಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮೂಲಾಂಕ 0.25 ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿತ್ತು. ಅದನ್ನು ಮುಂಚಿತವಾಗಿಯೇ ಗುರುತಿಸಿ, ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು 0.50ಯಷ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಳಿಕೆ ಮಾಡಿತು. ಈಗ ಮಾಡಿದ್ದರೆ ವಿರೋಧ ವ್ಯಕ್ತವಾಗುತ್ತಿತ್ತು ಎಂದು ಅಭಿಪ್ರಾಯ ಪಡುತ್ತಾರೆ ಮಾರುಕಟ್ಟೆ ತಜ್ಞರಾದ ಕೆ.ಜಿ.ಕೃಪಾಲ್.
ಈಗ ರೆಪೋದರ 25 ಮೂಲಾಂಶ ಇಳಿಸಿದರೆ ಪೂರ್ತಿ ಅನುಕೂಲ ಗ್ರಾಹಕರಿಗೆ ಸಿಗುವುದಿಲ್ಲ. ಆ ಪೈಕಿ ಸ್ವಲ್ಪ ಮಟ್ಟಿಗೆ ಬ್ಯಾಂಕ್ ಗಳು ಗ್ರಾಹಕರಿಗೆ ನೀಡಬಹುದು, ನೀಡದೆಯೂ ಇರಬಹುದು. ಸಾಲದ ಮೇಲಿನ ಬಡ್ಡಿದರ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಬಹುದಷ್ಟೇ. ಆದರೆ ಸಾಮಾನ್ಯ ಗ್ರಾಹಕರ ಉಳಿತಾಯ ಮಾರ್ಗದ ಬಾಗಿಲುಗಳು ಒಂದೊಂದಾಗಿ ಮುಚ್ಚುತ್ತಿವೆ. ಇನ್ನೂ ಕೆಲಕಾಲ ಇದೇ ಸ್ಥಿತಿ ಇರಲಿದೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications