TCS CEO Rajesh Gopinathan: ಟಿಸಿಎಸ್ ಸಿಇಒ, ಎಂಡಿ ಸ್ಥಾನಕ್ಕೆ ರಾಜೇಶ್ ಗೋಪಿನಾಥನ್ ರಾಜೀನಾಮೆ, ಕೆ ಕೃತಿವಾಸನ್ ನೇಮಕ
ಟಿಸಿಎಸ್‌ನಲ್ಲಿ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ) ಬಿಸಿನೆಸ್ ಗ್ರೂಪ್‌ನ ಅಧ್ಯಕ್ಷರಾಗಿರುವ ಕೆ ಕೃತಿವಾಸನ್ ಹೊಸ ಸಿಇಒ
ನವದೆಹಲಿ, ಮಾರ್ಚ್ 16: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೋಪಿನಾಥನ್ ಅವರು ರಾಜೀನಾಮೆ ನೀಡಿದ್ದಾರೆ. ಟಿಸಿಎಸ್‌ನೊಂದಿಗೆ 22 ವರ್ಷಗಳ ವೃತ್ತಿ ಸಂಬಂಧವಿರಿಸಿಕೊಂಡಿರುವ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ ಎಂದು ಕಂಪನಿ ಪ್ರಕಟಿಸಿದೆ.
ಕಂಪನಿಯ ನಾಯಕತ್ವ ಬದಲಾವಣೆಯನ್ನು ಪ್ರಕಟಿಸಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್, ಟಿಸಿಎಸ್‌ನಲ್ಲಿ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ) ಬಿಸಿನೆಸ್ ಗ್ರೂಪ್‌ನ ಅಧ್ಯಕ್ಷರಾಗಿರುವ ಕೆ ಕೃತಿವಾಸನ್ ಅವರನ್ನು ಮಾರ್ಚ್ 16, 2023 ರಿಂದ ಹೊಸ ಸಿಇಒ ಆಗಿ ನಿಯೋಜಿಸಲಾಗಿದೆ. ಕೆ ಕೃತಿವಾಸನ್ ಅವರು ಮುಂದಿನ ಹಣಕಾಸು ವರ್ಷದಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ" ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ನೂತನ ಸಿಇಒ ಕೆ. ಕೃತಿವಾಸನ್ 1989 ರಲ್ಲಿ ಟಿಸಿಎಸ್‌ಗೆ ಸೇರಿದರು.

"ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೋಪಿನಾಥನ್ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ನಿರ್ದೇಶಕರ ಮಂಡಳಿಯು ಅವರ ಮನವಿಯನ್ನು ಪರಿಗಣಿಸಿ ರಾಜೀನಾಮೆ ಸ್ವೀಕರಿಸಿದೆ. ಮಂಡಳಿಯು 16ನೇ ಮಾರ್ಚ್ 2023 ರಿಂದ ಜಾರಿಗೆ ಬರುವಂತೆ ಕೆ ಕೃತಿವಾಸನ್ ಅವರನ್ನು ಸಿಇಒ ಹುದ್ದೆಗೆ ನಾಮನಿರ್ದೇಶನ ಮಾಡಿದೆ. ಗೋಪಿನಾಥನ್ ತಮ್ಮ ಅಧಿಕಾರ ಹಸ್ತಾಂತರ ಮಾಡಲು ಮತ್ತು ಬೆಂಬಲ ನೀಡಲು ಸೆಪ್ಟೆಂಬರ್ 15, 2023 ರವರೆಗೆ ಕಂಪನಿಯಲ್ಲಿ ಮುಂದುವರಿಯುತ್ತಾರೆ" ಎಂದು ತಿಳಿಸಿದೆ.
"ಕಳೆದ 25 ವರ್ಷಗಳಿಂದ ರಾಜೇಶ್ ಗೋಪಿನಾಥನ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈ ಅವಧಿಯಲ್ಲಿ, ರಾಜೇಶ್ ಅವರು ಮುಖ್ಯ ಹಣಕಾಸು ಅಧಿಕಾರಿ, ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಅನುಕರಣೀಯ ಕೆಲಸದಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕಳೆದ 6 ವರ್ಷಗಳಲ್ಲಿ, ರಾಜೇಶ್ ಅವರು ಎಂಡಿ ಮತ್ತು ಸಿಇಒ ಆಗಿ ಗಟ್ಟಿಯಾದ ನಾಯಕತ್ವವನ್ನು ಒದಗಿಸಿದ್ದಾರೆ. ಟಿಸಿಎಸ್‌ನ ಮುಂದಿನ ಹಂತದ ಬೆಳವಣಿಗೆಗೆ ಗಟ್ಟಿ ಅಡಿಪಾಯ ಹಾಕಿದ್ದಾರೆ. ಕಂಪನಿಗೆ ಅವರು ಸಲ್ಲಿಸಿರುವ ಅಗಾಧ ಕೊಡುಗೆಯನ್ನು ನಾನು ಶ್ಲಾಘಿಸುತ್ತೇನೆ. ಅವರಿಗೆ ಶುಭ ಹಾರೈಸುತ್ತೇನೆ" ಎಂದು ಟಿಸಿಎಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿದ್ದಾರೆ.

ತಮ್ಮ ರಾಜೀನಾಮೆ ಬಗ್ಗೆ ಮಾತನಾಡಿರುವ ರಾಜೇಶ್ ಗೋಪಿನಾಥನ್, "ಈ ಸಂಪೂರ್ಣ ಅವಧಿಯಲ್ಲಿ ನನಗೆ ಮಾರ್ಗದರ್ಶನ ನೀಡಿದ ಚಂದ್ರಶೇಖರನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿರುವುದು ಸಂತೋಷವಾಗಿದೆ. ಕಳೆದ ಎರಡು ದಶಕಗಳಿಂದ ಕೃತಿಯೊಂದಿಗೆ ಕೆಲಸ ಮಾಡಿದ್ದು, ನಾಯಕತ್ವದ ತಂಡದೊಂದಿಗೆ ಟಿಸಿಎಸ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲು ನಾನು ಇದ್ದೇನೆ" ಎಂದು ಹೇಳಿದ್ದಾರೆ.












Click it and Unblock the Notifications