ಖಾಸಗಿ ಉದ್ಯೋಗಿಗಳ ವೇತನ ಎಷ್ಟು ಹೆಚ್ಚಳ; ಸಮೀಕ್ಷೆ ಹೇಳುವುದೇನು?
ಬೆಂಗಳೂರು, ಫೆಬ್ರವರಿ 23; ಭಾರತದಲ್ಲಿ ಖಾಸಗಿ ಉದ್ಯೋಗಿಗಳ ವೇತನ ಈ ವರ್ಷ ಎಷ್ಟು ಹೆಚ್ಚಳವಾಗಲಿದೆ? ಎಂದು ಸಮೀಕ್ಷೆಯೊಂದು ಬಂದಿದೆ. ವರದಿಯ ಪ್ರಕಾರ 2023ರ ಸಂಬಳಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ವೇತನ ಕಡಿಮೆಯಾಗಲಿದೆ.
2023ರಲ್ಲಿ ಸಂಬಳ 9.7ರಷ್ಟು ಏರಿಕೆಯಾಗಿತ್ತು. ಈ ವರ್ಷ ಸರಾಸರಿ ಶೇ 9.5 ಹೆಚ್ಚಾಗುವ ನಿರೀಕ್ಷೆ ಇದೆ. ಜಾಗತಿಕ ವೃತ್ತಿಪರ ಸೇವೆಗಳ ಕಂಪನಿಯೊಂದು ನಡೆಸಿದ ಸಮೀಕ್ಷೆಯೊಂದು ಈ ಮಾಹಿತಿ ನೀಡಿದೆ.

ಸುಮಾರು 45 ಕೈಗಾರಿಕೆ, 1,414 ಕಂಪನಿಗಳ ಡೇಟಾವನ್ನು ವಿಶ್ಲೇಷಿಸಿ ಈ ಸಮೀಕ್ಷೆಯನ್ನು ಮಾಡಲಾಗಿದೆ. ಭೌಗೋಳಿಕವಾಗಿ ಉಂಟಾಗಿರುವ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತ ಅತ್ಯಧಿಕ ವೇತನ ಬೆಳವಣಿಗೆ ಮುಂದುವರೆಸಿದೆ ಎಂದು ಸಮೀಕ್ಷೆ ಹೇಳಿದೆ.
ಯಾವ-ಯಾವ ಕ್ಷೇತ್ರಗಳು?; ಸಮೀಕ್ಷೆಯ ಪ್ರಕಾರ ಹಣಕಾಸು ಸಂಸ್ಥೆಗಳು, ಇಂಜಿನಿಯರಿಂಗ್, ಆಟೋಮೋಟಿವ್ ಮತ್ತು ಜೀವ ವಿಜ್ಞಾನಗಳು ಅತ್ಯಧಿಕ ವೇತನ ಹೆಚ್ಚಳವನ್ನು ನೀಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ಚಿಲ್ಲರೆ ಮಾರುಕಟ್ಟೆ, ತಂತ್ರಜ್ಞಾನ ಸಲಹಾ ಮತ್ತು ಸೇವೆಗಳು ಕಡಿಮೆ ವೇತನ ಹೆಚ್ಚಳವನ್ನು ನೀಡುತ್ತವೆ ಎಂದು ಸಮೀಕ್ಷೆ ಹೇಳಿದೆ. ನೌಕರರ ವಜಾಗೊಳಿಸುವಿಕೆ ಸಂಸ್ಥೆಗಳಿಗೆ ಸಹಕಾರಿಯಾಗಿದ್ದು, ವೇತನ ಹೆಚ್ಚಳಕ್ಕೆ ಅನುಕೂಲ ಕಲ್ಪಿಸಿದೆ ಎಂದು ಹೇಳಿದೆ.
ಈ ವರ್ಷದಲ್ಲಿ ಉತ್ಪಾದನೆ ಕ್ಷೇತ್ರದಲ್ಲಿ ಬಂಡಾವಳ ಹೂಡಿಕೆ ಜಾಸ್ತಿ ಆಗುವ ನಿರೀಕ್ಷೆ ಇದ್ದು, ಇದು ಸಹ ಉದ್ಯೋಗಿಗಳ ವೇತನ ಏರಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಆದರೆ ಈ ವರ್ಷದ ವೇತನ ಹೆಚ್ಚಳ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ.
ಹೆಚ್‌ಆರ್ ಪರಿಹಾರ ಸಂಸ್ಥೆ ಎವೋನ್ ನಡೆಸಿದ ಸಮೀಕ್ಷೆಯ ಪ್ರಕಾರ 2024ರಲ್ಲಿ ನಾಲ್ಕು ಕಂಪನಿಗಳ ಪೈಕಿ 3 ಕಂಪನಿಗಳು ಶೇ 9ಕ್ಕಿಂತ ಹೆಚ್ಚಿನ ವೇತನವನ್ನು ನೀಡುತ್ತವೆ. ವಾರ್ಷಿಕ ವೇತನ ಹೆಚ್ಚಳ ಮತ್ತು ವಹಿವಾಟು ಶೇ 10.1ರಷ್ಟು ವೇತನ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ.
ಉದ್ಯೋಗ ತೊರೆಯುತ್ತಿರುವವರ ಸಂಖ್ಯೆ ಸಾಮಾನ್ಯ ಸ್ಥಿತಿಗೆ ಬಂದಿದೆ. ಕೋವಿಡ್ ಸಾಂಕ್ರಾಮಿಕಕ್ಕಿಂತ ಪೂರ್ವದಲ್ಲಿ ಉದ್ಯೋಗ ತೊರೆಯುವವರ ಸಂಖ್ಯೆ 18.7ರಷ್ಟಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿ ಶೇ 21ರಷ್ಟಕ್ಕೆ ಏರಿಕೆಯಾಗಿತ್ತು. ಈಗ ಅದು ಸಹ ಕಡಿಮೆಯಾಗಿದೆ.
ವೇತನ ಆಯೋಗದ ವರದಿ ಶಿಫಾರಸ್ಸುಗಳ ಅನ್ವಯ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ವೇತನ ಏರಿಕೆ ಬಗ್ಗೆ ಉದ್ಯೋಗಿಗಳು ನಿರೀಕ್ಷೆ ಹೊಂದಿರುತ್ತಾರೆ. ಸ್ಯಾಲರಿ ಕಟ್, ಉದ್ಯೋಗಿಗಳ ಸಂಖ್ಯೆ ಕಡಿತ ಮುಂತಾದ ತಲ್ಲಣಗಳನ್ನು ಎದುರಿಸುವ ಉದ್ಯೋಗಿಗಳು ಎಷ್ಟು ವೇತನ ಹೆಚ್ಚಳವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಇರುತ್ತಾರೆ.












Click it and Unblock the Notifications