ಟಿಟಿಡಿ, ಶಿರಡಿ ಟ್ರಸ್ಟ್... ವಿದೇಶದಿಂದ ದೇಣಿಗೆಗೆ ಬ್ರೇಕ್ ಹಾಕಿದ MHA
ನವದೆಹಲಿ, ಜನವರಿ 7: ದೇಶದ ವಿವಿಧ ಟ್ರಸ್ಟ್, ಸರ್ಕಾರೇತರ ಸಂಸ್ಥೆಗಳಿಗೆ ವಿದೇಶದಿಂದ ಹರಿದು ಬರುತ್ತಿರುವ ದೇಣಿಗೆ ಮೇಲೆ ಹೆಚ್ಚಿನ ನಿಗಾ ಇಡಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಇತ್ತೀಚೆಗೆ ಗೃಹ ಸಚಿವಾಲಯವು (MHA) ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸದ 6,000 ಎನ್‌ಜಿಒಗಳ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ), ರಾಮಕೃಷ್ಣ ಮಿಷನ್ ಮತ್ತು ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಎಸ್‌ಎಸ್‌ಎಸ್‌ಟಿ) ಸೇರಿವೆ.
ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನ ಮತ್ತು ರಾಮಕೃಷ್ಣ ಮಿಷನ್ ಹಿಂದೂ ಧಾರ್ಮಿಕ ಸಂಸ್ಥೆಗಳಾಗಿ ನೋಂದಾಯಿಸಲ್ಪಟ್ಟಿವೆ, ಆದರೆ SSST ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ (FCRA) ಯ "ಧಾರ್ಮಿಕ (ಇತರ)" ವರ್ಗದ ಅಡಿಯಲ್ಲಿ ಬರುತ್ತದೆ.
ನೋಂದಾಯಿತ ಸಂಘಗಳು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳಿಗಾಗಿ ವಿದೇಶದಿಂದ ದೇಣಿಗೆ ಪಡೆಯಬಹುದು. ವಿದೇಶಿ ಹಣವನ್ನು ಸ್ವೀಕರಿಸಲು FCRA ನೋಂದಣಿ ಕಡ್ಡಾಯವಾಗಿದೆ. ಹಾಗೂ ನಿಗದಿತ ಅವಧಿಯಲ್ಲಿ ನವೀಕರಿಸಬೇಕಾಗುತ್ತದೆ.

ಪ್ರಮುಖ ಮೂರು ಧಾರ್ಮಿಕ ಸಂಘಗಳ ಎಫ್‌ಸಿಆರ್‌ಎ ನೋಂದಣಿಯನ್ನು ಏಕೆ ನವೀಕರಿಸಲಾಗಿಲ್ಲ ಎಂಬುದರ ಕುರಿತು ಗೃಹ ಸಚಿವಾಲಯ (MHA) ಪ್ರತಿಕ್ರಿಯಿಸಿಲ್ಲ. ಕೆಲವು ದಿನಗಳ ಹಿಂದೆ, ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೇಸಾ ಸ್ಥಾಪಿಸಿದ ಕ್ಯಾಥೊಲಿಕ್ ಧಾರ್ಮಿಕ ಸಂಸ್ಥೆ ಮಿಷನರೀಸ್ ಆಫ್ ಚಾರಿಟಿಯ FCRA ನೋಂದಣಿಯನ್ನು ನವೀಕರಿಸಲಾಗಿಲ್ಲ ಎಂಬ ವರದಿಗಳು ಬಂದಿತ್ತು. ಈ ವರದಿ ಹೊರಹೊಮ್ಮಿದ ನಂತರ, MHA ಡಿಸೆಂಬರ್ 27 ರಂದು ಸಂಸ್ಥೆಯನ್ನು ನವೀಕರಿಸಲು ನಿರಾಕರಿಸಿದೆ ಎಂದು ಹೇಳಿಕೆ ನೀಡಿತು. "ಕೆಲವು ಪ್ರತಿಕೂಲ ಒಳಹರಿವುಗಳನ್ನು ಗಮನಿಸಲಾಗಿದೆ" ಎಂದು ಸ್ಪಷ್ಟನೆ ನೀಡಲಾಗಿತ್ತು.
ನವೀಕರಣಕ್ಕಾಗಿ ತಮ್ಮ ವಿನಂತಿಯನ್ನು ತಿರಸ್ಕರಿಸಿದ ಎನ್‌ಜಿಒಗಳು ತಮ್ಮ ಗೊತ್ತುಪಡಿಸಿದ ಬ್ಯಾಂಕ್ ಖಾತೆಗಳಿಗೆ ವಿದೇಶಿ ಕೊಡುಗೆಗಳನ್ನು ಸ್ವೀಕರಿಸಲು ಅಥವಾ ಬಳಸಲು ಅರ್ಹರಾಗಿರುವುದಿಲ್ಲ ಎಂದು ಸಚಿವಾಲಯವು ಡಿಸೆಂಬರ್ 31 ರಂದು ಆದೇಶದಲ್ಲಿ ಪ್ರತಿಪಾದಿಸಿದೆ.
2020-21 ರ ಆರ್ಥಿಕ ವರ್ಷಕ್ಕೆ 2021 ರ ಡಿಸೆಂಬರ್ 22 ರಂದು ಟಿಟಿಡಿ ಸಲ್ಲಿಸಿದ ವಾರ್ಷಿಕ ರಿಟರ್ನ್ ಪ್ರಕಾರ, ಅದರ ಗೊತ್ತುಪಡಿಸಿದ ವಿದೇಶಿ ಕೊಡುಗೆ ಬ್ಯಾಂಕ್ ಖಾತೆಯಲ್ಲಿ 13.4 ಕೋಟಿ ರು ಇತ್ತು, ಅದರಲ್ಲಿ 13.3 ಕೋಟಿ ರುಗಳನ್ನು ದೇವಾಲಯಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಾರ್ಥಿಗಳು ದೇಣಿಗೆ ನೀಡಿದ್ದಾರೆ.
SSST ತನ್ನ ವಾರ್ಷಿಕ ರಿಟರ್ನ್ ಅನ್ನು ಡಿಸೆಂಬರ್ 31 ರಂದು ಸಲ್ಲಿಸಿತು, ತನ್ನ ವಿದೇಶಿ ಕೊಡುಗೆ ಖಾತೆಯಲ್ಲಿ 5 ಕೋಟಿ ರು ಗಿಂತ ಹೆಚ್ಚಿನದನ್ನು ಹೊಂದಿದೆ ಎಂದು ಹೇಳಿದೆ.
ಮಹಾರಾಷ್ಟ್ರದಲ್ಲಿ ನೋಂದಾಯಿತ ರಾಮಕೃಷ್ಣ ಮಿಷನ್ ಜುಲೈನಲ್ಲಿ ರಿಟರ್ನ್ ಸಲ್ಲಿಸಿ, ತನ್ನ ಗೊತ್ತುಪಡಿಸಿದ ವಿದೇಶಿ ಕೊಡುಗೆ ಬ್ಯಾಂಕ್ ಖಾತೆಯಲ್ಲಿ 1.3 ಕೋಟಿ ರು ಇದೆ ಎಂದು ಘೋಷಿಸಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ದೇಶದ ಇತರ ಭಾಗಗಳಲ್ಲಿ ನೋಂದಾಯಿಸಲಾದ ಇತರ ರಾಮಕೃಷ್ಣ ಮಿಷನ್ ಆಶ್ರಮಗಳ ಎಫ್‌ಸಿಆರ್‌ಎ ನೋಂದಣಿಯನ್ನು ಸಹ ನವೀಕರಿಸಲಾಗಿಲ್ಲ.
ತಮ್ಮ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸದ ಎನ್‌ಜಿಒಗಳು ಮರು ಅರ್ಜಿ ಸಲ್ಲಿಸಬಹುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2020-21ರಲ್ಲಿ ಸಾವಿರಾರು ಎನ್‌ಜಿಒಗಳ ನೋಂದಣಿ ನವೀಕರಣಕ್ಕೆ ಬಾಕಿಯಿತ್ತು ಮತ್ತು ಅರ್ಜಿಗಳು ಬಾಕಿ ಉಳಿದಿರುವುದರಿಂದ ಡಿಸೆಂಬರ್ 31, 2021 ರ ಹಿಂದಿನ ಗಡುವನ್ನು ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿದೆ. 179 ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಸಚಿವಾಲಯ ನಿರಾಕರಿಸಿದೆ, ಆದರೆ 5,789 ಸಂಘಗಳು ಡಿಸೆಂಬರ್ 31 ರ ಗಡುವಿನ ಮೊದಲು ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಎಂಎಚ್‌ಎ ಅಧಿಕಾರಿಯೊಬ್ಬರು ಕಳೆದ ವಾರ ತಿಳಿಸಿದ್ದಾರೆ. ವಿಸ್ತೃತ ಗಡುವು ಡಿಸೆಂಬರ್ 31 ರ ಮೊದಲು ಅರ್ಜಿ ಸಲ್ಲಿಸಿದ ಮತ್ತು ಇಲ್ಲಿಯವರೆಗೆ ಅವರ ಅರ್ಜಿಯನ್ನು ತಿರಸ್ಕರಿಸದ NGO ಗಳಿಗೆ ಮಾತ್ರ ಅನ್ವಯಿಸುತ್ತದೆ.
ಸದ್ಯ ಸಕ್ರಿಯ FCRA-ನೋಂದಾಯಿತ NGOಗಳ ಸಂಖ್ಯೆಯು 22,762 ರಿಂದ 16,907 ಕ್ಕೆ ಇಳಿದಿದೆ.












Click it and Unblock the Notifications