ತೆರಿಗೆ ಪದ್ಧತಿಯಲ್ಲಿ ಮಹತ್ತರ ಬದಲಾವಣೆ: ಅರುಣ್ ಜೇಟ್ಲಿ
ನವದೆಹಲಿ, ಮೇ.19: ಕೇಂದ್ರ ಸರ್ಕಾರ ತೆರಿಗೆ ನೀತಿಯಲ್ಲಿ ಹಲವಾರು ಸುಧಾರಣೆ ತರಲು ಮುಂದಾಗಿದೆ. ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಿ ವಿವಿಧ ಕಂಪನಿಗಳು ತೆರಿಗೆ ಸಲ್ಲಿಕೆ ಮತ್ತು ವಿದೇಶ ಪ್ರವಾಸ ಸಂಬಂಧ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಕಂಪನಿ ಪ್ರಾಯೋಜಿತ ವಿದೇಶಿ ಪ್ರವಾಸದ ಮಾಹಿತಿಯನ್ನು ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಫಾರಂನಲ್ಲಿ ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂಬ ಅಂಶವನ್ನು ಕೇಂದ್ರ ಹಿಂದಕ್ಕೆ ಪಡೆಯುವ ಚಿಂತನೆ ನಡೆಸಿದೆ. ಆದರೆ ಬ್ಯಾಂಕ್ ಖಾತೆ ಮತ್ತು ಹಣವನ್ನು ಬಹಿರಂಗಪಡಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.[ಸೇವಾ ತೆರಿಗೆ ಹೆಚ್ಚಿಗೆ ಕೇಳಿದರೆ ದೂರು ಕೊಡಿ]

ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಫಾರಂಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸರಳ ಸೂತ್ರಕ್ಕೆ ಅಂಟಿಕೊಂಡಿದೆ. ವೈಯಕ್ತಿಕ ಪ್ರವಾಸ ವೆಚ್ಚವು ನಿಗದಿತ ಮಿತಿಗಿಂತ ಹೆಚ್ಚಿದ್ದರೆ ಆ ಕುರಿತ ಮಾಹಿತಿ ನೀಡಬೇಕಾಗುವುದು. [ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್]
ಬಂಡವಾಳ ಗಳಿಕೆಗೆ ಕನಿಷ್ಠ ಪರ್ಯಾಯ ತೆರಿಗೆ ವಿಧಿಸಬಹುದು ಎಂಬ ತೀರ್ಪನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರೇ ಮೊದಲು ಸ್ವಾಗತಿಸಿದ್ದರು. ಪ್ರಕರಣ ಈಗ ನ್ಯಾಯಾಧಿಕರಣದ ಹಂತದಲ್ಲಿ ಇರುವುದರಿಂದ ಹಳೆಯ ಪ್ರಕರಣಗಳಿಗೆ ವಿನಾಯಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications