ಇನ್ಫೋಸಿಸ್ ಷೇರು ಈಗ ಖರೀದಿಸಬಹುದೇ: ಮಾರುಕಟ್ಟೆ ತಜ್ಞರು ಏನಂತಾರೆ?
ಬೆಂಗಳೂರು, ಆಗಸ್ಟ್ 21: ಇನ್ಫೋಸಿಸ್ ಕಂಪನಿಯ ಷೇರು ಸೋಮವಾರ ಕೂಡ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ವಿಶಾಲ್ ಸಿಕ್ಕಾ ರಾಜೀನಾಮೆಯಿಂದ ಕುಸಿತದ ಕಡೆ ಮುಖ ಮಾಡಿದ ಕಂಪನಿಗೆ ಷೇರು ಬೈ ಬ್ಯಾಕ್ ಸುದ್ದಿ ಕೂಡ ಉತ್ಸಾಹ ತಂದಿಲ್ಲ. ಅಂದರೆ ಈ ಸನ್ನಿವೇಶವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ವಿಶ್ಲೇಷಕರು ಹಾಗೂ ಷೇರು ದಲ್ಲಾಳಿಗಳೂ ಆದ ಕೆ.ಜಿ.ಕೃಪಾಲ್ ಅವರು ವಿವರಿಸಿದ್ದಾರೆ.
"ವಿಶಾಲ್ ಸಿಕ್ಕಾ ರಾಜೀನಾಮೆ ಇನ್ಫೋಸಿಸ್ ಕಂಪನಿಯ ಆಡಳಿತಾತ್ಮಕ ವಿಚಾರ. ಕಂಪನಿಯ ಲಾಭ ಗಳಿಕೆ ಪ್ರಮಾಣ ಮತ್ತಿತರ ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಕಳೆದ ಗುರುವಾರ 1028 ರುಪಾಯಿಯಲ್ಲಿದ್ದ ಷೇರು ಆ ನಂತರ ಸಿಕ್ಕಾ ರಾಜೀನಾಮೆ ವಿಚಾರ ಹೊರಬೀಳುತ್ತಿದ್ದಂತೆ ಗಣನೀಯ ಕುಸಿತ ಕಂಡಿತು" ಎಂದರು.

"ಆದರೆ ಇದು ಚಿಂತೆಯ ವಿಚಾರವಲ್ಲ. ಏಕೆಂದರೆ ಈ ವಾರ ವಾಯಿದೆ ವ್ಯವಹಾರ ಚುಕ್ತಾ ಮಾಡಲಾಗುತ್ತದೆ. ಆದ್ದರಿಂದ ಇನ್ಫೋಸಿಸ್ ಷೇರು ಹೀಗೆ ಕುಸಿತ ಕಾಣುತ್ತಿದೆ. ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವವರಿಗೆ ಇದು ಒಳ್ಳೆ ಅವಕಾಶ. ಆದರೆ ಇಲ್ಲಿ ದೀರ್ಘಾವಧಿ ಅಂದರೆ ವರ್ಷಗಟ್ಟಲೆ ಕಾಯಬೇಕು ಅಂತಲ್ಲ. ಸ್ವಲ್ಪ ಮಟ್ಟಿಗೆ ಲಾಭ ಬಂದರೂ ಮಾರಿ ಹೊರಬರಬಹುದು" ಎಂದು ಅವರು ಅಭಿಪ್ರಾಯ ಪಟ್ಟರು.
ಇನ್ಫೋಸಿಸ್ ನ ಷೇರು ಬೆಲೆ ಸೋಮವಾರ (ಆಗಸ್ಟ್ 21) ವಾರ್ಷಿಕ ಕನಿಷ್ಠ ಬೆಲೆಯಾದ 875.20 ತಲುಪಿದೆ. ಕಲೆದ ಶನಿವಾರವಷ್ಟೇ ಕಂಪನಿಯು ಷೇರು ಮರುಖರೀದಿಯ ಬಗ್ಗೆ ಘೋಷಣೆ ಮಾಡಿದ್ದು, ಪ್ರತಿ ಷೇರಿಗೆ 1150 ರುಪಾಯಿ ನಿಗದಿ ಮಾಡಿದೆ.











Click it and Unblock the Notifications