ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೊಸಿಸ್ ಪ್ರಶಸ್ತಿ 2022 ವಿಜೇತ ಆರು ಸಾಧಕರ ಪರಿಚಯ

|
Google Oneindia Kannada News

ಬೆಂಗಳೂರು, ನವೆಂಬರ್ 16: ಪ್ರತಿ ವರ್ಷದಂತೆ ಈ ವರ್ಷವೂ ಇನ್ಫೊಸಿಸ್ ಪ್ರಶಸ್ತಿ 2022ಗಳನ್ನು ಪ್ರದಾನ ಮಾಡಲಾಗಿದೆ. ಇಂಜಿನಿಯರಿಂಗ್ ಮತ್ತು ಗಣಕ ವಿಜ್ಞಾನ, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಆರು ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಘೋಷಿಸಲಾಗಿದೆ.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ (ಐಎಸ್‌ಎಫ್‌) ನೀಡುವ ಪ್ರಶಸ್ತಿಯು ಚಿನ್ನದ ಪದಕ, ಸ್ಮರಣಿಕೆ ಹಾಗೂ 1 ಲಕ್ಷ ಡಾಲರ್ (ಅಥವಾ ಅದಕ್ಕೆ ಸರಿಸಮನಾದ ಭಾರತದ ರೂಪಾಯಿ) ನಗದನ್ನು ಒಳಗೊಂಡಿರುತ್ತದೆ. ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಬೆಂಗಳೂರಿನ ಹೊಸ ಕಚೇರಿಯಲ್ಲಿ ನಡೆಯಿತು.

ಇನ್ಫೊಸಿಸ್ ಪ್ರಶಸ್ತಿ 2022ಕ್ಕೆ ಒಟ್ಟು 218 ನಾಮನಿರ್ದೇಶನಗಳು ಬಂದಿದ್ದವು. ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದಿರುವ ವಿದ್ವಾಂಸರು ಹಾಗೂ ತಜ್ಞರು ಇರುವ ತೀರ್ಪುಗಾರರ ತಂಡವು ಪ್ರಶಸ್ತಿ ವಿಜೇತರನ್ನು ಅಂತಿಮಗೊಳಿಸಿದೆ. ಕಳೆದ ಹದಿಮೂರು ವರ್ಷಗಳಿಂದ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಕೆಲವು ಅತ್ಯುತ್ತಮ ಹಾಗೂ ಸೃಜನಶೀಲ ವೈಜ್ಞಾನಿಕ ಸಂಶೋಧನೆಗಳಿಂದ ಆದ ಸಾಧನೆಗಳನ್ನು ಗುರುತಿಸುವ ಕೆಲಸ ಮಾಡಿದೆ. ಈ ಸಂಶೋಧನೆಗಳು ಮಾನವ ಜೀವನದ ಪ್ರತಿ ನೆಲೆಯ ಮೇಲೆಯೂ ಪ್ರಭಾವ ಬೀರಿವೆ.

ನೊಬೆಲ್ ಪ್ರಶಸ್ತಿಗೆ ಭಾಜನರಾದ ಇಬ್ಬರಿಗೆ, ಫೀಲ್ಡ್‌ ಮೆಡಲ್ ಪ್ರಶಸ್ತಿ ಪಡೆದ ಇಬ್ಬರಿಗೆ, ಮೆಕ್‌ಅರ್ಥುರ್ ಫೆಲೊ ಆಗಿರುವ ಒಬ್ಬರಿಗೆ ಹಾಗೂ ಸರ್ಕಾರ ಮತ್ತು ಅಕಾಡೆಮಿಕ್ ವಲಯಗಳಲ್ಲಿ ಉನ್ನತ ಸ್ಥಾನ ಪಡೆದ ಹಲವರಿಗೆ ಇನ್ಫೊಸಿಸ್ ಪ್ರಶಸ್ತಿ ಸಿಕ್ಕಿದೆ.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್, ನಾರಾಯಣ ಮೂರ್ತಿ, ಶ್ರೀನಾಥ್ ಬಾಟ್ನಿ, ಕೆ. ದಿನೇಶ್, ಮೋಹನದಾಸ್ ಪೈ, ಸಲೀಲ್‌ ಪರೇಖ್ ಮತ್ತು ಎಸ್.ಡಿ. ಶಿಬುಲಾಲ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಪ್ರೊ. ಅರವಿಂದ್, ಪ್ರೊ. ಅಕೀಲ್ ಬಿಲ್ಗ್ರಾಮಿ, ಪ್ರೊ. ಮೃಗಾಂಕಾ ಸುರ್, ಪ್ರೊ. ಚಂದ್ರಶೇಖರ ಖರೆ, ಪ್ರೊ. ಶ್ರೀನಿವಾಸ್ ಕುಲಕರ್ಣಿ, ಪ್ರೊ. ಕೌಶಿಕ್ ಬಸು ಇದ್ದಾರೆ.

ಟ್ರಸ್ಟಿಗಳು: ಶ್ರೀನಾಥ್ ಬಾಟ್ನಿ, ಕೆ. ದಿನೇಶ್, ಎಸ್. ಗೋಪಾಲಕೃಷ್ಣನ್, ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ಟಿ.ವಿ. ಮೋಹನದಾಸ್ ಪೈ, ಸಲೀಲ್ ಪಾರೇಖ್, ಎಸ್.ಡಿ. ಶಿಬುಲಾಲ್ ಇದ್ದಾರೆ.

ಸುಮನ್ ಚಕ್ರವರ್ತಿ

ಸುಮನ್ ಚಕ್ರವರ್ತಿ

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ 2022 ಸುಮನ್ ಚಕ್ರವರ್ತಿ ಅವರಿಗೆ ಸಂದಿದೆ. ಚಕ್ರವರ್ತಿ ಅವರು ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಆಗಿದ್ದಾರೆ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದಾರೆ. ಅವರು ದ್ರವ ವಿಜ್ಞಾನ ಹಾಗೂ ಎಲೆಕ್ಟ್ರೊಮೆಕ್ಯಾನಿಕ್ಸ್‌ ಕ್ಷೇತ್ರಗಳಲ್ಲಿ ತಮ್ಮ ಸಂಶೋಧನೆಗಳ ಮೂಲಕ ಆರೋಗ್ಯಸೇವೆಗಳು ಸೀಮಿತ ಸಂಪನ್ಮೂಲ ಇರುವ ಸಂದರ್ಭಗಳಲ್ಲಿಯೂ ಲಭ್ಯವಾಗುವಲ್ಲಿ ನೆರವಾಗಿದ್ದಾರೆ. ರೋಗ ಪತ್ತೆಗೆ ಕಡಿಮೆ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಆವಿಷ್ಕರಿಸುವ ಕೆಲಸ ಮಾಡಿದ್ದಾರೆ.

ಸುಧೀರ್ ಕೃಷ್ಣಸ್ವಾಮಿ

ಸುಧೀರ್ ಕೃಷ್ಣಸ್ವಾಮಿ

ಮಾನವಿಕ ವಿಭಾಗದಲ್ಲಿ ಇನ್ಫೋಸಿಸ್ ಪ್ರಶಸ್ತಿ 2022 ಸುಧೀರ್ ಕೃಷ್ಣಸ್ವಾಮಿ ಅವರಿಗೆ ಸಲ್ಲುತ್ತದೆ. ಅವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಆಗಿದ್ದಾರೆ. ಭಾರತದ ಸಂವಿಧಾನದ ಬಗ್ಗೆ ಅವರು ಹೊಂದಿರುವ ಒಳನೋಟ, ಸುಪ್ರೀಂ ಕೋರ್ಟ್‌ 1973ರಲ್ಲಿ ರೂಪಿಸಿದ 'ಸಂವಿಧಾನದ ಮೂಲ ಸ್ವರೂಪ'ದ ತಾತ್ವಿಕತೆ ಬಗ್ಗೆ ಅವರು ಮಾಡಿರುವ ಬರವಣಿಗೆಗಳ ಕಾರಣಕ್ಕೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಸಂವಿಧಾನದ ಮೂಲ ಸ್ವರೂಪದ ಕುರಿತ ತಾತ್ವಿಕತೆಯು ಸಂವಿಧಾನಕ್ಕೆ ತಿದ್ದುಪಡಿ ತರಲು ಮಾಡಿದ ಹಲವು ಯತ್ನಗಳಿಗೆ ಕಡಿವಾಣ ಹಾಕಿದೆ. ದೇಶದ ರಾಜಕೀಯ ಸಂದರ್ಭದಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗದ ಎದುರು ಸಂವಿಧಾನದ ಸ್ಥಿರತೆಯನ್ನು ಇದು ಕಾಪಾಡಿದೆ.

ವಿದಿತಾ ವೈದ್ಯ

ವಿದಿತಾ ವೈದ್ಯ

ಜೀವ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ 2022 ವಿದಿತಾ ವೈದ್ಯ ಅವರಿಗೆ ಸಲ್ಲುತ್ತದೆ. ಅವರು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ ಸಂಸ್ಥೆಯಲ್ಲಿ ನ್ಯೂರೊಬಯಾಲಜಿ ಪ್ರೊಫೆಸರ್ ಆಗಿದ್ದಾರೆ. ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವ ಮೆದುಳಿನ ಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದು ಮುಖ್ಯವಾಗುತ್ತಿದೆ. ಹೀಗಾಗಿ ಪ್ರೊ. ವೈದ್ಯ ಅವರ ಕೆಲಸಗಳು ಬಹಳ ಸಮಕಾಲೀನ ಆಗಿವೆ.

ಮಹೇಶ್ ಕಾಕಡೆ

ಮಹೇಶ್ ಕಾಕಡೆ

ಗಣಿತ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ 2022 ಮಹೇಶ್ ಕಾಕಡೆ ಅವರಿಗೆ ಸಲ್ಲುತ್ತದೆ. ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗಣಿತದ ಪ್ರೊಫೆಸರ್ ಆಗಿದ್ದಾರೆ. ಬೀಜಗಣಿತ ಸಂಖ್ಯಾಸೂತ್ರಕ್ಕೆ ಅವರು ನೀಡಿದ ಗಮನಾರ್ಹ ಕೊಡುಗೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇದು ಗೂಢಲಿಪಿಶಾಸ್ತ್ರದಲ್ಲಿ ಬಳಕೆ ಆಗುತ್ತದೆ.

ನಿಸ್ಸಿಂ ಕಾನೇಕರ್

ನಿಸ್ಸಿಂ ಕಾನೇಕರ್

ಭೌತ ವಿಜ್ಞಾನದಲ್ಲಿ ಇನ್ಫೊಸಿಸ್ ಪ್ರಶಸ್ತಿ 2022 ಪುಣೆಯ ನ್ಯಾಷನಲ್ ಸೆಂಟರ್ ಫಾರ್ ರೇಡಿಯೊ ಆಸ್ಟ್ರಾನಮಿಯ ಪ್ರೊಫೆಸರ್ ನಿಸ್ಸಿಂ ಕಾನೇಕರ್ ಅವರಿಗೆ ಸಂದಿದೆ. ನಕ್ಷತ್ರಗಳು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಸೃಷ್ಟಿಯಾದ ಕಾಲಘಟ್ಟದ ಗ್ಯಾಲಕ್ಸಿಗಳ ಕುರಿತ ಅವರ ಅಧ್ಯಯನಕ್ಕಾಗಿ ಈ ಗೌರವ ಸಂದಿದೆ. ಪ್ರೊ. ಕಾನೇಕರ್ ಅವರ ಕೆಲಸಗಳ ಕಾರಣದಿಂದಾಗಿ ಭಾರತದ ರೇಡಿಯೊ ಆಸ್ಟ್ರಾನಮಿ ಸಾಮರ್ಥ್ಯವು ವಿಶ್ವದ ಭೂಪಟದಲ್ಲಿ ಸ್ಥಾನ ಪಡೆದಿದೆ.

ರೋಹಿಣಿ ಪಾಂಡೆ

ರೋಹಿಣಿ ಪಾಂಡೆ

ಯೇಲ್ ವಿಶ್ವವಿದ್ಯಾಲಯದ ಆರ್ಥಿಕ ಬೆಳವಣಿಗೆ ಕೇಂದ್ರದ ನಿರ್ದೇಶಕಿ ಹಾಗೂ ಅಲ್ಲಿನ ಎರಡನೆಯ ಹೆನ್ರಿ ಜೆ. ಹೇಂಜ್‌ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ರೋಹಿಣಿ ಪಾಂಡೆ ಅವರಿಗೆ ಸಮಾಜ ವಿಜ್ಞಾನ ವಿಭಾಗದ ಇನ್ಫೊಸಿಸ್ ಪ್ರಶಸ್ತಿ 2022 ಸಲ್ಲುತ್ತದೆ. ಆಡಳಿತ ಮತ್ತು ಉತ್ತರದಾಯಿತ್ವ, ಮಹಿಳೆಯರ ಸಬಲೀಕರಣ, ಬಡವರ ಬದುಕಿನಲ್ಲಿ ಸಾಲದ ಮಹತ್ವ, ಪರಿಸರದಂತಹ ಮಹತ್ವದ ವಿಷಯಗಳ ಕುರಿತು ಅವರು ನಡೆಸಿದ ಗಮನಾರ್ಹ ಸಂಶೋಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಅವರು ಹಲವು ವಿಧಾನಗಳನ್ನು ಅನುಸರಿಸಿ ನಡೆಸಿರುವ ಸಂಶೋಧನೆಗಳು ಭಾರತ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಅನೇಕ ಅರ್ಥ ವ್ಯವಸ್ಥೆಗಳಲ್ಲಿ ನೀತಿಗಳನ್ನು ರೂಪಿಸುವಲ್ಲಿ ಭರವಸೆಗಳನ್ನು ಹುಟ್ಟುಹಾಕಿದೆ. ಹವಾಮಾನ ಬಿಕ್ಕಟ್ಟಿನ ಪರಿಣಾಮಗಳು, ಸಾಮಾಜಿಕ ನ್ಯಾಯ, ನ್ಯಾಯಯುತ ಸಮಾಜ ಎಂದರೇನು ಎಂಬ ಬಗ್ಗೆ ಚರ್ಚೆಗಳು ಹೆಚ್ಚು ತುರ್ತು ಎಂಬಂತೆ ಆಗುತ್ತಿರುವ ಹೊತ್ತಿನಲ್ಲಿ ಪ್ರೊ. ಪಾಂಡೆ ಅವರ ಕೆಲಸಗಳು ಬಹುದೊಡ್ಡ ಪರಿಣಾಮ ಬೀರುತ್ತವೆ.

English summary
The Infosys Science Foundation (ISF) today announced the winners of the Infosys Prize 2022 in six categories – Engineering and Computer Science, Humanities, Life Sciences, Mathematical Sciences, Physical Sciences and Social Science.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X