ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಭಾರೀ ಬಂಡವಾಳ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 14 : ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನ ಮತ್ತು ಇಂಧನ ಸಂರಕ್ಷಣೆ ನೀತಿಯನ್ನು ಜಾರಿಗೆ ತಂದ ಕೇವಲ ಎರಡೇ ತಿಂಗಳಲ್ಲಿ ಈ ಕ್ಷೇತ್ರಕ್ಕೆ 1,000 ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹರಿದು ಬಂದಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಬುಧವಾರ ಇಲ್ಲಿ ಏರ್ಪಡಿಸಿದ್ದ 10ನೇ ಆಪರೇಷನಲ್ ಎಕ್ಸಲೆನ್ಸ್ ಮತ್ತು ಪೀಪಲ್ ಎಕ್ಸಲೆನ್ಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, "1 ಸರಕಾರ ಮತ್ತು ಉದ್ಯಮರಂಗ ಎರಡೂ ಜತೆಗೂಡಿ ಕೆಲಸ ಮಾಡಿದರೆ ಮಾತ್ರ ಇದರ ಫಲಗಳು ಸಮಾಜದ ಎಲ್ಲ ವರ್ಗಗಳನ್ನೂ ತಲುಪಬಲ್ಲವು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸದ್ಯದಲ್ಲೇ ಮುನ್ನೋಟ-2025 (ವಿಷನ್-2025) ಅನ್ನು ಬಿಡುಗಡೆ ಮಾಡಲಾಗುತ್ತಿದೆ" ಎಂದರು.

ಕರ್ನಾಟಕ ರಾಜ್ಯವು ಬಹು ಹಿಂದಿನಿಂದಲೂ ಎಲ್ಲ ಬಗೆಯ ಉದ್ದಿಮೆಗಳಿಗೂ ತೆರೆದುಕೊಂಡಿದೆ. ಹೀಗಾಗಿ ಇಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ. ಇಂದು ಕೃಷಿ, ಪ್ರವಾಸೋದ್ಯಮ, ವೈಮಾನಿಕ ಕ್ಷೇತ್ರ ಸೇರಿದಂತೆ ಎಲ್ಲದರಲ್ಲೂ ಕೌಶಲ್ಯ ಅಗತ್ಯವಾಗಿದ್ದು, ಉದ್ಯಮಲೋಕವು ಇದನ್ನು ತುರ್ತಾಗಿ ಮನಗಾಣಬೇಕಾಗಿದೆ ಎಂದು ಅವರು ಸೂಚಿಸಿದರು.

Inflow of investment into EV Sector is a Positive Sign : RV Deshpande

ದೇಶದ ಎಂಜಿನಿಯರಿಂಗ್ ಪದವೀಧರರಲ್ಲಿ ಶೇಕಡ 65ರಷ್ಟು ಮತ್ತು ಎಂಬಿಎ ಪದವೀಧರರಲ್ಲಿ ಶೇಕಡ 50ರಷ್ಟು ಜನ ಇಂದು ನಿರುದ್ಯೋಗಿಗಳಾಗಿದೆ. ಒಂದೆಡೆ ಉದ್ದಿಮೆಗಳು ಬೆಳೆಯುತ್ತಿದ್ದರೂ ಉದ್ಯೋಗಸೃಷ್ಟಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಸಮಸ್ಯೆಗೆ ಉದ್ಯಮಲೋಕ ಒಂದು ಸಮರ್ಥ ಪರಿಹಾರ ಕಂಡುಹಿಡಿಯಬೇಕು, ಎಂದು ದೇಶಪಾಂಡೆ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಉದ್ದಿಮೆಗಳು ನವೋದ್ಯಮಗಳನ್ನು ದತ್ತು ತೆಗೆದುಕೊಂಡು, ಅವುಗಳನ್ನು ಬೆಳೆಸಬೇಕು. ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತವಾಗಿ ಮತ್ತು ಪರಿಣಾಮಕಾರಿಯಾಗಿ ಹೇಗೆ ಬಳಸಬೇಕು ಎನ್ನುವುದನ್ನು ಕುರಿತು ಹೊಸ ಹೆಜ್ಜೆಗಳನ್ನು ಇಡಬೇಕು. 2025ರ ಹೊತ್ತಿಗೆ ಅತ್ಯಧಿಕ ಸಂಖ್ಯೆಯಲ್ಲಿರುವ ಯುವಜನರಿಗೆ ಒಳ್ಳೆಯ ಉದ್ಯೋಗಗಳನ್ನು ಒದಗಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಎಂದು ಸಚಿವರು ಪ್ರತಿಪಾದಿಸಿದರು.

ಸದ್ಯಕ್ಕೆ 189 ಶತಕೋಟಿ ಡಾಲರ್‌ಗಳಷ್ಟಿರುವ ರಾಜ್ಯದ ಆರ್ಥಿಕತೆಯನ್ನು 2035ರ ಹೊತ್ತಿಗೆ 700 ಶತಕೋಟಿ ಡಾಲರ್‌ಗಳ ಅರ್ಥವ್ಯವಸ್ಥೆಯಾಗಿ ಬೆಳೆಸಲು ಉದ್ದೇಶಿಸಲಾಗಿದೆ. ಹೀಗಾಗಿ ರಾಜ್ಯದ ಉದ್ಯಮ ವಲಯವನ್ನು ದಕ್ಷತೆ ಮತ್ತು ಆವಿಷ್ಕಾರ ಕೇಂದ್ರಿತವಾಗಿ ಬೆಳೆಸುವತ್ತ ಗಮನ ಹರಿಸಲಾಗುತ್ತಿದೆ ಎಂದು ತಮ್ಮ ದೂರದೃಷ್ಟಿಕೋನವನ್ನು ದೇಶಪಾಂಡೆ ವಿವರಿಸಿದರು.

Inflow of investment into EV Sector is a Positive Sign : RV Deshpande

ದೇಶದ ಜಿಎಸ್‌ಡಿಪಿಗೆ ಉತ್ಪಾದನಾ ವಲಯದ ಕೊಡುಗೆ ರಾಷ್ಟ್ರೀಯ ಮಟ್ಟದಲ್ಲಿ ಶೇ.14ರಷ್ಟಿದೆ. ಆದರೆ, ಇದಕ್ಕೆ ರಾಜ್ಯದ ಕೊಡುಗೆ ಶೇ.14.76ರಷ್ಟಿದೆ. ದೇಶದ ಅಗತ್ಯಗಳ ದೃಷ್ಟಿಯಿಂದ ಇದನ್ನು ಶೇಕಡ 20ಕ್ಕಾದರೂ ಕೊಂಡೊಯ್ಯುವ ಹೊಣೆಗಾರಿಕೆ ಉದ್ದಿಮೆಗಳ ಮೇಲಿದೆ. ಈ ನಿಟ್ಟಿನಲ್ಲಿ ಸಿಐಐ ತರಹದ ಸಂಸ್ಥೆಗಳು ಗಮನ ಹರಿಸಬೇಕು, ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟರು.

ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ಆರ್ಥಿಕ ಬೆಳವಣಿಗೆಗಳ ಕೇಂದ್ರವಾಗಲಿದೆ. ಇದು ಉತ್ಪಾದನೆಯಿಂದ ಹಿಡಿದು ಆವಿಷ್ಕಾರ, ಕಾರ್ಮಿಕ ಶಕ್ತಿ, ಉತ್ಪಾದಕತೆ ಎಲ್ಲವನ್ನೂ ಆಮೂಲಾಗ್ರವಾಗಿ ಬದಲಾಯಿಸಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರಕಾರವು ಅತ್ಯಾಧುನಿಕ ಡೇಟಾ ಸೈನ್ಸಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೇಂದ್ರವನ್ನು ಬೆಂಗಳೂರಿನಲ್ಲಿ ಸದ್ಯವೇ ಸ್ಥಾಪಿಸಲಿದೆ ಎಂದು ದೇಶಪಾಂಡೆ ಹೇಳಿದರು.

ಸಮಾವೇಶದಲ್ಲಿ ಸಿಐಐ ಕರ್ನಾಟಕ ಶಾಖೆಯ ಮುಖ್ಯಸ್ಥ ಕಮಲ್ ಬಾಲಿ, ಮುಖ್ಯ ಸಂಚಾಲಕ ಟಿ.ಆರ್.ಪರಶುರಾಮನ್, ಟೊಯೊಟಾ ಕಿರ್ಲೋಸ್ಕರ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್, ಬ್ರೇಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಕಾರಿ ನಿರ್ದೇಶಕ ವಿ.ನರಸಿಂಹನ್ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Adopting the Electric Vehicle (EV) and Power Storage Policy, Karnataka govt is able to attract more than Rs. 1,000 Cr said R V Deshpande, Minister for Large and Medium Scale Industries. He was speaking at 10th CII Operational & People Excellence Conference on 14th February in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ