ಭಾರತ ಮೂಲದ ಅರವಿಂದ್ ಕೃಷ್ಣ ಐಬಿಎಂ ಸಿಇಒ
ಬೆಂಗಳೂರು, ಜನವರಿ 31: ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಾದೆಲ್ಲಾ, ಆಲ್ಫಾಬೆಟ್ ಸಂಸ್ಥೆಯ ಸುಂದರ್ ಪಿಚೈ ನಂತರ ಟೆಕ್ ಪ್ರಪಂಚದಲ್ಲಿ ಇನ್ಮುಂದೆ ಕೇಳಿ ಬಹುದಾದ ಹೆಸರೆಂದರೆ ಅರವಿಂದ್ ಕೃಷ್ಣ.
ಅಮೆರಿಕ ಮೂಲದ ಐಟಿ ದಿಗ್ಗಜ ಇಂಟರ್ ನ್ಯಾಷನಲ್ ಬಿಸಿನೆಸ್ ಮಷಿನ್ಸ್(ಐಬಿಎಂ) ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಆಗಿ ಭಾರತ ಮೂಲದ ಅರವಿಂದ್ ಕೃಷ್ಣ ಅವರನ್ನು ಐಬಿಎಂ ಬೋರ್ಡ್ ಸದಸ್ಯರು ಆಯ್ಕೆ ಮಾಡಿದ್ದಾರೆ. ಏಪ್ರಿಲ್ 06ರಿಂದ ಅರವಿಂದ್ ಅಧಿಕಾರಾವಧಿ ಆರಂಭವಾಗಲಿದೆ. ಕೃಷ್ಣ ಅವರು ಸದ್ಯ ಐಬಿಎಂನಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದು, ಕ್ಲೌಡ್ ಹಾಗೂ ಕಾಗ್ನಿಟಿವ್ ಸಾಫ್ಟ್ ವೇರ್ ವಿಭಾಗದಲ್ಲಿದ್ದಾರೆ.
ಸುಮಾರು 40 ವರ್ಷಗಳ ಬಳಿಕ 62 ವರ್ಷ ವಯಸ್ಸಿನ ರೊಮೆಟ್ಟಿ ಅವರು ಸಿಇಒ ಸ್ಥಾನದಿಂದ ಕೆಳಗಿಳಿಯುತ್ತಿದ್ದು, 57 ವರ್ಷ ವಯಸ್ಸಿನ ಕೃಷ್ಣ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಐಬಿಎಂ ಚೇರ್ಮನ್, ಅಧ್ಯಕ್ಷೆ, ಸಿಇಒ ಆಗಿದ್ದ ರೊಮೆಟ್ಟಿ ಕಾರ್ಯಕಾರಿ ಚೇರ್ಮನ್ ಆಗಿ ಮುಂದುವರೆಯಲಿದ್ದಾರೆ. ರೆಡ್ ಹ್ಯಾಟ್ ಹಾಗೂ ಐಬಿಎಂ ಹಿರಿಯ ಉಪಾಧ್ಯಕ್ಷರಾಗಿರುವ ಜೇಮ್ಸ್ ವೈಟ್ ಹರ್ಸ್ಟ್ ಅವರನ್ನು ಐಬಿಎಂ ಅಧ್ಯಕ್ಷ ಸ್ಥಾನಕ್ಕೇರಿಸಲಾಗಿದೆ.

ಐಐಟಿ ಕಾನ್ಪುರ್ ನಿಂದ ಪದವಿ ಪಡೆದ ಬಳಿಕ1990ರಲ್ಲಿಐಬಿಎಂ ಸೇರಿದ ಕೃಷ್ಣ ಅವರು ಇಲಿನಾಯ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರ್ ವಿಷಯದಲ್ಲಿ ಪಿಎಚ್ ಡಿ ಪಡೆದಿದ್ದಾರೆ. ಕೃಷ್ಣ ಹೆಸರಿನಲ್ಲಿ 15 ಪೆಟೆಂಟ್ ಗಳಿವೆ. ಐಇಇಇ ಹಾಗೂ ಎಸಿಎಂ ಜರ್ನಲ್ಸ್ ಸಂಪಾದಕರಾಗಿದ್ದರು. ತಾಂತ್ರಿಕ ವಿಷಯಗಳ ಬಗ್ಗೆ ಉತ್ತಮ ಲೇಖನಗಳನ್ನು ಬರೆದಿದ್ದಾರೆ.
ಓಪನ್ ಸೋರ್ಸ್ ತಂತ್ರಜ್ಞಾನ ದೈತ್ಯ ರೆಡ್ ಹ್ಯಾಟ್ ಸಂಸ್ಥೆಯನ್ನು 109 ವರ್ಷಗಳ ಇತಿಹಾಸ ಹೊಂದಿರುವ ಐಬಿಎಂ ಸಂಸ್ಥೆಯು ಖರೀದಿಸುವಲ್ಲಿ ಕೃಷ್ಣಮಹತ್ವದ ಪಾತ್ರ ವಹಿಸಿದ್ದರು.
"ನನ್ನ ಮೇಲೆ ನಂಬಿಕೆ ಇಟ್ಟು ಮುಂದಿನ ಸಿಇಒ ಆಗಿ ಆಯ್ಕೆ ಮಾಡಿರುವ ಗಿನ್ನಿ ಹಾಗೂ ಬೋರ್ಡ್ ಸದಸ್ಯರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ಅರವಿಂದ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಜಾಗತಿಕ ಮಟ್ಟದ ಸಂಸ್ಥೆಗಳಲ್ಲಿ ಭಾರತೀಯ ಮೂಲದ ಸಿಇಒಗಳ ಸಂಖ್ಯೆ ಹೆಚ್ಚಾಗಿದೆ. ಮೈಕ್ರೋಸಾಫ್ಟ್ ನಲ್ಲಿ ನಾದೆಲ್ಲಾ, ಗೂಗಲ್ ಆಲ್ಫಾಬೆಟ್ ನಲ್ಲಿ ಪಿಚೈ, ಮಾಸ್ಟರ್ ಕಾರ್ಡ್ ಸಿಇಒ ಅಜಯ್ ಬಂಗಾ, ಅಬೋಡ್ ಸಿಇಒ ಶಂತನು ನಾರಾಯಣ್ ಸಾಲಿಗೆ ಐಬಿಎಂ ಸಿಇಒ ಅರವಿಂದ್ ಕೃಷ್ಣ ಸೇರುತ್ತಿದ್ದಾರೆ.












Click it and Unblock the Notifications