2021ರಲ್ಲಿ ಭಾರತದ ಆರ್ಥಿಕತೆಯಲ್ಲಿ ಶೇ.9.5ರಷ್ಟು ಪ್ರಗತಿ
ನವದೆಹಲಿ, ಅಕ್ಟೋಬರ್ 13: ಕೊರೊನಾ ಹೊಡೆತದಿಂದ ಭಾರತ ಆರ್ಥಿಕವಾಗಿ ಬಹಳ ಕುಸಿದಿದ್ದರೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರ ಮಧ್ಯೆಯೇ ಭಾರತದ ಆರ್ಥಿಕತೆ ವೇಗವಾಗಿ ಸುಧಾರಿಸಿಕೊಳ್ಳಲಿದೆ ಎಂದು ಇಂಟರ್‌ನ್ಯಾಷನಲ್ ಮಾನೆಟರಿ ಫಂಡ್ ಹೇಳಿದೆ.
ಈ ಸಂಸ್ಥೆಯು ದೇಶವೊಂದರ ಆರ್ಥಿಕ ಪ್ರಗತಿಯ ಗತಿಯನ್ನು ಪರಿಶೀಲಿಸಿ, ಮಾಹಿತಿ ನೀಡುವುದಕ್ಕೆ ಖ್ಯಾತವಾಗಿದೆ. ಮುಂದಿನ ವಿತ್ತೀಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಸುಧಾರಿಸಲಿದೆ.
ಒಟ್ಟಾರೆ ಈ ವಿತ್ತೀಯ ವರ್ಷದಲ್ಲಿ ಶೇ.9.5ರಷ್ಟು ಪ್ರಗತಿ ಸಾಧಿಸಲಿದೆ ಹಾಗೆಯೇ 2022ರಲ್ಲಿ ಶೇ.8.5 ರಷ್ಟು ಪ್ರಗತಿ ಸಾಧಿಸಲಿದೆ ಎಂದು ಐಎಂಎಫ್ ತಿಳಿಸಿದೆ. ಸದ್ಯ ದುರ್ಬಲವಾಗಿರುವ ಭಾರತದ ಆರ್ಥಿಕ ವ್ಯವಸ್ಥೆ, ಜಿಡಿಪಿಯ ಶೇ.90ರಷ್ಟು ಸಾಲವೇ ಇರುವುದರ ನಡುವೆ ಅಂದಾಜು ಜಿಡಿಪಿ ಪ್ರಗತಿ ಬಹಳ ಪ್ರಮುಖ ಸಂಗತಿಯಾಗಿದೆ.

IMF ವರದಿಯ ಪ್ರಕಾರ ಕೊರೊನಾ ವೈರಸ್ ನ ಎರಡನೇ ಅಲೆಗೆ ತತ್ತರಿಸಿ ಹೋದ ಅರ್ಥವ್ಯವಸ್ಥೆಗಳಲ್ಲಿ ಕೇವಲ ಭಾರತ ಒಂದೇ ಇಲ್ಲ. ಈ ಪಟ್ಟಿಯಲ್ಲಿ ಇಂಡೋನೆಷ್ಯಾ, ಮಲೇಶಿಯಾ, ಫಿಲಿಪೈನ್ಸ್, ಥೈಲೆಂಡ್, ವಿಯಟ್ನಾಂ ದೇಶಗಳ ಆರ್ಥವ್ಯವಸ್ಥೆಗಳ ಕುರಿತು ಕೂಡ ಆತಂಕ ವ್ಯಕ್ತಪಡಿಸಲಾಗಿದೆ. ಇದರ ಜೊತೆಗೆ ಕೊರೊನಾ ಹೊಸ ರೂಪಾಂತರಿ ಅಥವಾ ಹೊಸ ಅಲೆಯ ಕಾರಣ ವಿಶ್ವಾದ್ಯಂತ ಅರ್ಥಿಕ ಪ್ರಗತಿ ಪ್ರಭಾವಕ್ಕೆ ಒಳಗಾಗಲಿದೆ ಎಂಬ ಎಚ್ಚರಿಕೆಯನ್ನೂ ಕೂಡ ವರದಿಯಲ್ಲಿ ನೀಡಲಾಗಿದೆ.
ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಗತ್ತು 2021ರಲ್ಲಿ ಶೇ.5.9 ಹಾಗೂ 2022ರಲ್ಲಿ ಶೇ.4.9ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿದೆ.ಅಮೆರಿಕ ಹೇಳುವ ಪ್ರಕಾರ ಈ ವರ್ಷ ಶೇ.6 ಹಾಗೂ ಹಾಗೂ ಮುಂದಿನ ವರ್ಷ ಶೇ.5.2ರಷ್ಟು ಪ್ರಗತಿ ಕಾಣಲಿದೆ.
ಚೀನಾ ಪ್ರಕಾರ 2021ರಲ್ಲಿ ಶೇ.8 ಹಾಗೂ 2022ರಲ್ಲಿ ಶೇ.5.6ರಷ್ಟು ಬೆಳವಣಿಗೆ ಹೊಂದಲಿದೆ. ಮೂಡೀಸ್ ನೀಡಿರುವ ಮಾಹಿತಿ ಪ್ರಕಾರ, ಚುರುಕು ಕೋವಿಡ್ ಲಸಿಕೆ ಅಭಿಯಾನದ ಮುಖಾಂತರ ದೇಶವನ್ನು ಕೊರೊನಾ ವೈರಸ್‌ನಿಂದ ಬಚಾವ್ ಮಾಡಿರುವುದು. ಕೋವಿಡ್ ನಿಯಂತ್ರಣಕ್ಕೆ ಕೆಲವೇ ಕೆಲವು ಕ್ಷೇತ್ರಗಳ ಮೇಲೆ ನಿರ್ಬಂಧ ವಿಧಿಸಿ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿರುವುದು ಭಾರತದ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಲು ಕಾರಣವಾಗಿದೆ ಎಂದು ಮೂಡೀಸ್ ತನ್ನ ವರದಿಯಲ್ಲಿ ತಿಳಿಸಿದೆ.
ಕೊರೊನಾ ಅವಧಿಯಲ್ಲಿ ಕಾರ್ಮಿಕರ ಕಾನೂನು, ಕೃಷಿ ವಲಯಕ್ಕೆ ಉತ್ತೇಜನ, ಮೂಲಸೌಕರ್ಯಗಳ ಮೇಲಿನ ಹೂಡಿಕೆ ಹೆಚ್ಚಳ, ಉತ್ಪಾದನಾ ವಲಯಕ್ಕೆ ಹೆಚ್ಚಿನ ಹೂಡಿಕೆ, ಹಣಕಾಸು ವಲಯದ ಬಲವರ್ಧನೆ ಸೇರಿದಂತೆ ಕೇಂದ್ರ ಸರ್ಕಾರ ಇನ್ನಿತರ ಸುಧಾರಣೆ ಕ್ರಮ ಕೈಗೊಂಡಿದೆ.
ಈ ಎಲ್ಲಾ ಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ, ಭಾರತದ ಆರ್ಥಿಕತೆಯು ನಿರೀಕ್ಷೆಗಿಂತಲೂ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಮೂಡೀಸ್ ಹೇಳಿದೆ.
ಆದರೆ 2019ರಲ್ಲಿ ಜಿಡಿಪಿಯ ಶೇ.74ರಷ್ಟಿದ್ದ ಭಾರತ ಸರ್ಕಾರದ ಒಟ್ಟಾರೆ ಸಾಲದ ಮೌಲ್ಯವು 2020ರಲ್ಲಿ ಜಿಡಿಪಿಯ ಶೇ.89ರಷ್ಟಿತ್ತು ಎಂದು ಕಳವಳ ವ್ಯಕ್ತಪಡಿಸಿದೆ.
ಏಷ್ಯಾದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಭಾರತವು ಇದೇ ಆರ್ಥಿಕ ವರ್ಷದಲ್ಲಿ ಕೊರೊನಾ ಪೂರ್ವಾವಧಿಗಿಂತಲೂ ಹೆಚ್ಚು ಅಭಿವೃದ್ಧಿ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ರೇಟಿಂಗ್ಸ್ ಏಜೆನ್ಸಿಯಾದ ಮೂಡೀಸ್‌ಅಂದಾಜಿಸಿದೆ.
ಅಲ್ಲದೆ ಸುಧಾರಣೆ ಕಾಣುತ್ತಿರುವ ಭಾರತದ ಆರ್ಥಿಕತೆಯು ಋಣಾತ್ಮಕತೆಯಿಂದ ಸ್ಥಿರತೆಯತ್ತ ದಾಪುಗಾಲು ಹಾಕಿದೆ. ಭಾರತದ ಜಿಡಿಪಿಯು ಶೇ.6ರಷ್ಟುಅಭಿವೃದ್ಧಿ ಕಾಣಲಿದೆ ಎಂದು ಅದು ಭವಿಷ್ಯ ನುಡಿದಿದೆ.
2021-2022ನೇ ಆರ್ಥಿಕ ವರ್ಷದಲ್ಲಿ ಭಾರತದ ಅಭಿವೃದ್ಧಿ ದರವು ಶೇ.9.3ರೊಂದಿಗೆ ಕೊರೊನಾ ಪೂರ್ವದ 2019ನೇ ವರ್ಷದ ಅಭಿವೃದ್ಧಿ ದರವನ್ನು ಮೀರಿಸಲಿದೆ. ಆ ಬಳಿಕ ಮುಂದಿನ ಹಣಕಾಸು ವರ್ಷದಲ್ಲಿ ಮತ್ತೆ ಶೇ.7.9ಕ್ಕೆ ತಲುಪಲಿದೆ ಎಂದು ಮೂಡೀಸ್ ಅಂದಾಜಿಸಿದೆ.
ಆದಾಗ್ಯೂ, ಭಾರತದ ಶ್ರೇಷ್ಠತೆಯ ರೇಟಿಂಗ್ ಅನ್ನು ಕಡಿಮೆ ಹೂಡಿಕೆಯನ್ನು ಹೊಂದಿದ ಬಿಎಎ-3 ಎಂದು ಗುರುತಿಸಲಾಗಿದೆ. 2019ರಲ್ಲಿ ಭಾರತದ ಆರ್ಥಿಕತೆಯನ್ನು ಋಣಾತ್ಮಕ ಎಂದು ಗುರುತಿಸಲಾಗಿತ್ತು.
ಆದರೆ ಇದೀಗ ಆರ್ಥಿಕತೆ ಮತ್ತು ಹಣಕಾಸು ಸಂಸ್ಥೆಗಳಿಗೆ ನಷ್ಟವಾಗುವ ಸಾಧ್ಯತೆ ಕ್ಷೀಣಿಸಿರುವುದರ ಹಿನ್ನೆಲೆಯಲ್ಲಿ ಇದೀಗ ಭಾರತದ ಆರ್ಥಿಕತೆಯನ್ನು ಋಣಾತ್ಮಕತೆಯಿಂದ ಸ್ಥಿರತೆಗೆ ಮೇಲ್ದರ್ಜೆಗೇರಿಸಲಾಗಿದೆ.












Click it and Unblock the Notifications