ಅಂತಿಮವಾಗಿ ತಾನಾಗಿಯೇ ಬಾಗಿಲು ಮುಚ್ಚಿದ ವಿವಾದಿತ ಹಿಂಡನ್ ಬರ್ಗ್
ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ತಲ್ಲಣ ಉಂಟು ಮಾಡಿದ್ದ ಅಮೆರಿಕ ಮೂಲದ ಸಂಸ್ಥೆಯಾದ ಹಿಂಡನ್ ಬರ್ಗ್ ಬಾಗಿಲು ಮುಚ್ಚಿದೆ. 2017ರಲ್ಲಿ ನಾಟೆ ಆ್ಯಂಡರ್ಸನ್ ಸ್ಥಾಪನೆ ಮಾಡಿದ್ದ ಹಿಂಡನ್ ಬರ್ಗ್ ತನ್ನ ವರದಿಯ ಮೂಲಕ ಜಗತ್ತಿನ ಗಮನ ಸೆಳೆದಿತ್ತು. ಈಗ ತಾನಾಗಿಯೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಹಿಂಡನ್ ಬರ್ಗ್ ಘೋಷಣೆ ಮಾಡಿದೆ.
ಹಿಂಡನ್ ಬರ್ಗ್ ಬಹುರಾಷ್ಟ್ರೀಯ ಕಂಪನಿಗಳ ವಂಚನೆಯನ್ನು ತನ್ನ ವರದಿಗಳ ಮೂಲಕ ಬಯಲು ಮಾಡಿ ಖ್ಯಾತಿಗಳಿಸಿತ್ತು. ಮೋಸವನ್ನು ಬಯಲು ಮಾಡುವುದು ತನ್ನ ಉದ್ದೇಶ ಎಂದು ಹೇಳಿಕೊಂಡಿತ್ತು. ಅದರಲ್ಲೂ ನಿಕೋಲಾ ಕಾರ್ಪೊರೇಷನ್ ಮತ್ತು ಅದಾನಿ ಗ್ರೂಪ್‌ಗಳ ಕುರಿತು ಹಿಂಡನ್ ಬರ್ಗ್ ವರದಿಗಳನ್ನು ಬಿಡುಗಡೆ ಮಾಡಿತ್ತು.

ಹಿಂಡನ್ ಬರ್ಗ್ ಕಾರ್ಯಾಚರಣೆ ಸ್ಥಗಿತಗೊಳಿಸುವುದು ನಾಟೆ ಆ್ಯಂಡರ್ಸನ್ ವೈಯಕ್ತಿಕ ನಿರ್ಧಾರವಾಗಿದೆ ಎಂದು ಕಛೇರಿಯ ಅಧಿಕೃತ ವಿವರಣೆ ಹೇಳಿದೆ. ಕೆಲವೇ ದಿನಗಳಲ್ಲಿ ಅಮೆರಿಕದ ಆಡಳಿತ ಬದಲಾವಣೆಯಾಗಲಿದೆ. ಕೆಲವು ತಜ್ಞರ ಪ್ರಕಾರ ಅಮೆರಿಕದ ನಿಯಂತ್ರಣ, ಮೇಲ್ವಿಚಾರಣೆಯಲ್ಲಿ ಹಲವು ಬದಲಾವಣೆಗಳು ಆಗಲಿವೆ. ಮುಂದಿನ ಆಡಳಿತ ಜಾಗತಿಕ ಮಾರುಕಟ್ಟೆಯಲ್ಲಿ ಹಣಕಾಸು ಘಟಕಗಳಿಗೆ ಸಂಬಂಧಿಸಿದಂತೆ ವ್ಯವಸ್ಥಿತ ವ್ಯತ್ಯಯವನ್ನು ಉಂಟು ಮಾಡುವ ನಿರೀಕ್ಷೆಯಿದೆ.
ಹಲವು ವಿಶ್ಲೇಷಕರು ಹಿಂಡನ್ ಬರ್ಗ್ ಸಂಶೋಧನಾ ಸಂಸ್ಥೆಯನ್ನು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್‌ಪಿ) ಕುರಿತು ಹಲವು ಅಂಶಗಳನ್ನು ವಿಶ್ಲೇಷಿಸಿದ್ದಾರೆ. ಇಂತಹ ಸ್ವತಂತ್ರ ಸಂಸ್ಥೆಗಳ ಹಲವು ಆಯಾಮದಲ್ಲಿ ಸ್ವತಂತ್ರ ತನಿಖೆಯನ್ನು ಕೈಗೊಂಡು ಬೈಡನ್ ಆಡಳಿತದಲ್ಲಿ ವಿದೇಶಿ ಹಣಕಾಸು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಆರ್ಥಿಕ ಅಸ್ತಿರತೆ ಉಂಟು ಮಾಡಿವೆ ಎಂದು ಹೇಳಿದ್ದಾರೆ. ಹಿಂಡನ್ ಬರ್ಗ್ ವರದಿಗಳು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿತು. ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿತು, ದೇಶಗಳ ಸಂಕೀರ್ಣ ಅರ್ಥ ವ್ಯವಸ್ಥೆ ಮೇಲೆಯೂ ಪರಿಣಾಮ ಉಂಟು ಮಾಡಿತು ಎಂದು ವಿಶ್ಲೇಷಿಸಿದ್ದಾರೆ.
ಉದಾಹರಣೆಗೆ ಅದಾನಿ ಗ್ರೂಪ್ ಮೇಲಿನ ವರದಿ ದಕ್ಷಿಣ ಏಷ್ಯಾದಲ್ಲಿ ಭೌಗೋಳಿಕ ಉದ್ವಿಗ್ನತೆಗೆ ಕಾರಣವಾಯಿತು, ಭಾರತದಲ್ಲಿನ ಬಹುದೊಡ್ಡ ಸಂಸ್ಥೆಯ ಮೇಲಿನ ಆರ್ಥಿಕ ಪರಿಸ್ಥಿತಿ ಮೇಲೆಯೂ ಪರಿಣಾಮ ಬೀರಿತು. ಈ ವರದಿಗಳ ಬಿಡುಗಡೆ ಸಮಯ ನಿರ್ದಿಷ್ಟವಾದ ಆರ್ಥಿಕತೆಯನ್ನು ದುರ್ಬಲಗೊಳಿಸಲು ಮಾಡಿರುವ ಸಂಘಟನಾತ್ಮಕ ತಂತ್ರವೇ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿತು. ಜಾಗತಿಕವಾಗಿ ದಕ್ಷಿಣದಲ್ಲಿ ಭಾರತ ಅತಿ ಮುಖ್ಯವಾದ ಪ್ರಭಾವ ಹೊಂದಿದೆ, ಇಂತಹ ಸಮಯದಲ್ಲಿ ಇದು ಅವುಗಳ ಮೇಲೆ ಪರಿಣಾಮವನ್ನು ಬೀರಿತು.
ಈಗ ಅಮೆರಿಕದ ಆಡಳಿತದಲ್ಲಿ ಬದಲಾವಣೆಯಾಗುತ್ತಿದೆ. ಆರ್ಥಿಕ ಸಂಸ್ಥೆಗಳು ಈಗ ನೇರವಾಗಿ ಅಥವ ಪರೋಕ್ಷವಾಗಿ ತನಿಖೆಯನ್ನು ಎದುರಿಸಬೇಕಿದೆ. ವಿಶ್ವದ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುವ ಸಂಸ್ಥೆಗಳ ವಿಚಾರದಲ್ಲಿ ಟ್ರಂಪ್ ಆಡಳಿತದ ಕಠಿಣ ನೀತಿ ಎಲ್ಲರಿಗೂ ತಿಳಿದಿದೆ, ಇಂತಹ ಸಂಸ್ಥೆಗಳನ್ನು ಅತಿ ಸಮೀಪದಿಂದ ಪರಿಶೀಲಿಸಲಾಗುತ್ತದೆ.
ಇದನ್ನೆಲ್ಲಾ ಪೂರ್ವಭಾವಿಯಾಗಿ ತಿಳಿದು ಹಿಂಡನ್ ಬರ್ಗ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಘೋಷಣೆ ಮಾಡಿದೆ, ಈ ಮೂಲಕ ತನ್ನ ಜೊತೆ ಇದ್ದವರನ್ನು ಕಾನೂನು ಮತ್ತು ಇತರ ಪ್ರಕ್ರಿಯೆಗಳಿಂದ ಸಾಧ್ಯವಾದಷ್ಟು ಕಾಪಾಡಲು ಮುಂದಾಗಿದೆ. ಸಂಸ್ಥೆಯ ಕಾರ್ಯಾಚರಣೆ ಸ್ಥಗಿತದ ಹಿಂದೆ ಹಣಕಾಸಿನ ಮೂಲಗಳು, ಕಾರ್ಯಾಚರಣೆಯ ಮಾದರಿಯನ್ನು ಪತ್ತೆ ಹಚ್ಚುವ ಊಹೆಯೂ ಆಡಗಿರಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಸದಾ ಹಿಂಡನ್ ಬರ್ಗ್ ಕಾರ್ಯಾಚಣೆ ಜನರ ಅಭಿಪ್ರಾಯದ ಮೇಲೆ ಪ್ರಭಾವ ಬೀರುತ್ತದೆ. ಒಂದು ಕಡೆ ಸಂಸ್ಥೆ ದೊಡ್ಡ ಕಂಪನಿಗಳು, ಬಹುದೊಡ್ಡ ಹೆಸರು ಹೊಂದಿರುವ ಉದ್ಯಮಿಗಳ ಹೆಸರನ್ನು ಬಯಲು ಮಾಡುವ ಮೂಲಕ ಪ್ರಶಂಸೆಯನ್ನು ಪಡೆಯಿತು. ಮತ್ತೊಂದು ಕಡೆ ಆರ್ಥಿಕ ಪರಿಣಾಮ, ಮಾರುಕಟ್ಟೆಯಲ್ಲಿನ ತಲ್ಲಣದ ಕಾರಣಕ್ಕೆ ಟೀಕೆಯನ್ನು ಎದುರಿಸಬೇಕಾಯಿತು. ಈಗ ಕಾರ್ಯಾಚಣೆ ಸ್ಥಗಿತದ ಘೋಷಣೆ ಈ ಕುರಿತು ಚರ್ಚೆಗೆ ಪೂರ್ಣ ವಿರಾಮ ಹಾಕುವುದಿಲ್ಲ. ಭವಿಷ್ಯದಲ್ಲಿ ಇಂತಹ ಕಾರ್ಯಾಚರಣೆ ಹೇಗೆ ನಡೆಯಲಿದೆ? ಎಂಬ ಚರ್ಚೆಗೂ ಕಾರಣವಾಗಿದೆ.
ಅಂತಿಮ ಬರಹದಲ್ಲಿ ನಾಟೆ ಆ್ಯಂಡರ್ಸನ್ ಸಂಸ್ಥೆಯ ತನಿಖಾ ವಿಧಾನಗಳನ್ನು ಬಹಿರಂಗಗೊಳಿಸುವಾಗಿ ಉಲ್ಲೇಖಿಸಿದ್ದಾರೆ. ಇದು ಭವಿಷ್ಯದಲ್ಲಿ ಕೈಗೊಳ್ಳುವ ಕಾರ್ಯಾಚರಣೆಗಳ ಬಗ್ಗೆ ನೀಲನಕ್ಷೆಯಾಗುವ ಸಾಧ್ಯತೆಯೂ ಇದೆ. ಆದಾಗ್ಯೂ ಭೌಗೋಳಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಇದರ ಪಾತ್ರವಿರಲಿದೆಯೇ? ಎಂಬುದನ್ನು ಚಿಂತಿಸುವಂತೆ ಮಾಡಿದೆ.
ಹಿಂಡನ್ ಬರ್ಗ್ ಕಾರ್ಯಾಚಣೆ ಸ್ಥಗಿತದ ಕುರಿತು ಜಾಗತಿಕ ಮಾರುಕಟ್ಟೆ ಹೊಂದಿಕೊಳ್ಳುತ್ತಿದ್ದಂತೆಯೇ ಇಂತಹ ಸಂಸ್ಥೆಗಳು ಹೊಸ ಆಡಳಿತದಲ್ಲಿ ಯಾವ ಮಾದರಿ ಸವಾಲುಗಳನ್ನು ಎದುರಿಸಲಿವೆ ಎಂಬ ಬಗ್ಗೆ ಗಮನಹರಿಸುವಂತೆ ಮಾಡಿವೆ. ಕಾರ್ಯಾಚಣೆ ಸ್ಥಗಿತ ಅತ್ಯಂತ ವಿವಾದಾತ್ಮಕ ಸಂಸ್ಥೆಯೊಂದರ ಅಧ್ಯಾಯ ಮುಗಿಯಿತು ಎಂಬುದನ್ನು ಮಾತ್ರ ಹೇಳುತ್ತಿಲ್ಲ, ಬದಲಾಗಿ ಆರ್ಥಿಕ ವ್ಯವಸ್ಥೆಯ ಹಿಂದಿನ ಭೌಗೋಳಿಕ ಉದ್ದೇಶಗಳ ಕಡೆಗೂ ಗಮನಹರಿಸುವಂತೆ ಮಾಡಿದೆ.












Click it and Unblock the Notifications