ಬಿರ್ಲಾ ಕಂಪನಿಗಳ ಷೇರುಗಳು ಅಧೋಗತಿ
ಬೆಂಗಳೂರು, ಅ.16: ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಬಿರ್ಲಾ ಸಮೂಹ ಸಂಸ್ಥೆ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರ ವಿರುದ್ಧ ಸಿಬಿಐ ಮಂಗಳವಾರ ಎಫ್ ಐಆರ್ ದಾಖಲಿಸಿದೆ. ಇದರ ಪರಿಣಾಮ ಬಿರ್ಲಾ ಒಡೆತನದ ಕಂಪನಿಗಳ ಷೇರುಗಳು ಇಳಿಮುಖವಾಗಿದೆ.
ಬಿರ್ಲಾ ಜತೆಗೆ ಕಲ್ಲಿದ್ದಲು ಇಲಾಖೆ ನಿವೃತ್ತ ಕಾರ್ಯದರ್ಶಿ ಪಿ.ಸಿ.ಪಾರೇಖ್ ವಿರುದ್ಧವೂ ಕೇಂದ್ರ ತನಿಖಾ ದಳ ಎಫ್ ಐಆರ್ ದಾಖಲಿಸಿದೆ. ಅದಕ್ಕೆ ಪೂರಕವಾಗಿ ದೇಶದ ಆರು ಪ್ರಮುಖ ಸ್ಥಳಗಳಲ್ಲಿ ಸಿಬಿಐ ತಂಡ ಶೋಧ ಕಾರ್ಯಾಚರಣೆ ನಡೆಸಿದೆ.
ಆದಿತ್ಯಾ ಬಿರ್ಲಾ ಅವರ ಹಿಂಡಲ್ಕೊ ಇಂಡಸ್ಟ್ರೀಸ್ ಲಿ. ಅದಿತ್ಯಾ ಬಿರ್ಲಾ ನುವೊ ಹಾಗೂ ಐಡಿಯಾ ಸೆಲ್ಯೂಲಾರ್ ಲಿ ಸಂಸ್ಥೆ ಷೇರುಗಳು ಮಂಗಳವಾರ ಶೇ 5 ರಷ್ಟು ಇಳಿಮುಖ ಕಂಡಿತ್ತು. ಬುಧವಾರ ಬಕ್ರೀದ್ ಹಬ್ಬದ ಅಂಗವಾಗಿ ಷೇರುಪೇಟೆ ಮುಚ್ಚಿದೆ.
ಮಂಗಳವಾರ ಮಾರುಕಟ್ಟೆ ಮುಕ್ತಾಯದ ನಂತರ ಬಿಎಸ್ ಇನಲ್ಲಿ ಹಿಂಡಲ್ಕೋ ಷೇರುಗಳು 112.20 ರು ನಂತೆ ಶೇ 1.45 ರಷ್ಟು ಏರಿಕೆ ಕಂಡಿತ್ತು. ಎನ್ ಎಸ್ ಇನಲ್ಲಿ 1.36ರಷ್ಟು ಏರಿಕೆಯಂತೆ 112.10 ರು.ನಷ್ಟು ಬೆಲೆ ಹೊಂದಿದೆ.
ಅದಿತ್ಯಾ ಬಿರ್ಲಾ ನುವೋ ಕಂಪನಿ ಷೇರುಗಳು ಬಿಎಸ್ ಇನಲ್ಲಿ 1242.15 ರು ನಂತೆ 20.35 ರು ಕಳೆದುಕೊಂಡು ಶೇ 1.61ರಷ್ಟು ಇಳಿಮುಖ ಕಂಡಿದೆ. ಎನ್ ಎನಲ್ಲಿ 1245.90 ರು ನಂತೆ ಶೇ 1.53ರಷ್ಟು ಇಳಿಕೆಯಾಗಿದೆ.

ಐಡಿಯಾ ಸೆಲ್ಯೂಲಾರ್ ಸಂಸ್ಥೆ ಷೇರುಗಳು ಬಿಎಸ್ ಇನಲ್ಲಿ 184.80 ರುನಂತೆ ಶೇ 0.08 ರಷ್ಟು ಇಳಿಕೆಯಾಗಿದೆ. ಎನ್ ಎಸ್ ಇನಲ್ಲಿ 184.85 ರು ನಂತೆ ಶೇ 0.11 ರಷ್ಟು ಮೌಲ್ಯ ಕಳೆದುಕೊಂಡಿದೆ.
ಗ್ರಾಸಿಮ್ ಇಂಡಸ್ಟ್ರೀಸ್ ಬಿಎಸ್ಇ ನಲ್ಲಿ 2726.35 ರು ನಂತೆ ಶೇ 0.33 ರಷ್ಟು ಇಳಿಕೆಯಾಗಿದೆ. ಎನ್ ಎಸ್ ಇನಲ್ಲಿ 2726.65 ರು ನಂತೆ ಶೇ 0.39 ರಷ್ಟು ಇಳಿಕೆ ಕಂಡಿದೆ. ಆದಿತ್ಯಾ ಬಿರ್ಲಾ ಕೆಮಿಕಲ್ಸ್, ಆದಿತ್ಯಾ ಬಿರ್ಲಾ ಮನಿ ಮುಂತಾದ ಕಂಪನಿಗಳ ಷೇರುಗಳು ಏರುಪೇರಾಗಿವೆ.
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ಲಿಖಿತ ಹೇಳಿಕೆ ನೀಡಿದ ಹಿಂಡಾಲ್ಕೋ 'ಕಲ್ಲಿದ್ದಲು ಹಂಚಿಕೆಯಲ್ಲಿ ನಮ್ಮ ಸಂಸ್ಥೆ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಪಾಲಿಸಿದ್ದೇವೆ. ಅದಕ್ಕೆ ಅನುಸಾರವಾಗಿ ನಮಗೆ ಕಲ್ಲಿದ್ದಲು ಬ್ಲಾಕ್‌ಗಳು ಹಂಚಿಕೆಯಾಗಿವೆ' ಎಂದು ತಿಳಿಸಿದೆ.
ಇದೇ ವೇಳೆ ಸಿಬಿಐ ಅಧಿಕಾರಿಗಳು ಮುಂಬೈ, ದೆಹಲಿ, ಹೈದರಾಬಾದ್, ಭುವನೇಶ್ವರ ಹಾಗೂ ಸಿಕಂದರಾಬಾದ್ ಮತ್ತು ಹೈದರಾಬಾದ್ ಗಳಲ್ಲಿರುವ ಪಾರೇಖ್ ನಿವಾಸ, ಹಿಂಡಾಲ್ಕೋ ಕಂಪನಿಯ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದರು.
2005ರ ನ.10ರಂದು ಒಡಿಶಾದ ತಲಬಿರಾದಲ್ಲಿ ಬಿರ್ಲಾ ಸಮೂಹ ಸಂಸ್ಥೆಗೆ 2 ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಮೀಸಲಾಗಿ ಇರಿಸಲಾಗಿದ್ದ ಈ ಕಲ್ಲಿದ್ದಲು ಬ್ಲಾಕ್‌ಗಳನ್ನು ಬಿರ್ಲಾ ಸಮೂಹಕ್ಕೆ ಸೇರಿದ ಹಿಂಡಾಲ್ಕೋಗೆ ನೀಡಲಾಗಿತ್ತು.
ಈ ಸಂದರ್ಭದಲ್ಲಿ ಕಲ್ಲಿದ್ದಲು ಖಾತೆ ಕಾರ್ಯದರ್ಶಿಯಾಗಿದ್ದ ಪಿ.ಸಿ.ಪಾರೇಖ್ ಹಾಗೂ ಹಿಂಡಾಲ್ಕೋ ಪ್ರತಿನಿಧಿ ಜತೆಗಿನ 'ಭೇಟಿ' ಬಳಿಕ ಒಡಿಶಾದಲ್ಲಿನ ಬ್ಲಾಕ್‌ಗಳು ಹಿಂಡಾಲ್ಕೋ ತೆಕ್ಕೆಗೆ ಬಿದ್ದಿತ್ತು.
ಕೇಂದ್ರ ತನಿಖಾ ದಳ ಪ್ರಕರಣ ಕೈಗೆತ್ತಿಕೊಂಡ ಬಳಿಕ ದಾಖಲಿಸಿರುವ 14ನೇ ಎಫ್‌ಐಆರ್ ಇದಾಗಿದೆ. ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಕುಮಾರಮಂಗಲಂ ಬಿರ್ಲಾ ಅವರನ್ನು ಆದಿತ್ಯ ಬಿರ್ಲಾ ಸಮೂಹದ ಪ್ರತಿನಿಧಿ ಎಂದು ಹೆಸರಿಸಲಾಗಿದೆ.











Click it and Unblock the Notifications