Gold Rate: ಚಿನ್ನದ ಬೆಲೆ ಹೆಚ್ಚಳಕ್ಕೆ 5 ಪ್ರಮುಖ ಕಾರಣಗಳು ಇಲ್ಲಿವೆ, ಡೊನಾಲ್ಡ್ ಟ್ರಂಪ್ ಆಟವೂ ಇದೆ
Gold Rate Hike: ಯುದ್ಧದ ಭೀತಿ ಅಥವಾ ಆರ್ಥಿಕ ಹಿಂಜರಿತದ ಮುನ್ಸೂಚನೆ ಸಿಕ್ಕಾಗ ಚಿನ್ನವು ಅತ್ಯಂತ ಸುರಕ್ಷಿತ ಆಸ್ತಿಯಾಗಿ ಕಾಣುತ್ತದೆ. ಚಿನ್ನದ ಬೆಲೆಯು ಯಾರೂ ನಿರೀಕ್ಷೆ ಮಾಡದಷ್ಟು ಹೆಚ್ಚಳವಾಗಿದೆ. ಇದೇ ರೀತಿ ಮುಂದುವರಿದರೆ ಫೆಬ್ರವರಿ ಮೊದಲ ವಾರದಲ್ಲೇ 24 ಕ್ಯಾರೆಟ್‌ನ 10 ಗ್ರಾಂನ ಚಿನ್ನದ ಬೆಲೆಯು 2 ಲಕ್ಷ ರೂಪಾಯಿ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಜಗತ್ತಿನಲ್ಲಿ ಭೌಗೋಳಿಕ ಹಾಗೂ ಆರ್ಥಿಕ ಸಮಸ್ಯೆ ಎದುರಾದಾಗೆಲ್ಲವೂ ಚಿನ್ನದ ಬೆಲೆಯು ವಿಪರೀತ ಎನ್ನುವಷ್ಟು ಹೆಚ್ಚಳವಾಗಿದೆ. ಇದೀಗ ಚಿನ್ನದ ಬೆಲೆಯು 24 ಕ್ಯಾರೆಟ್‌ನ 10 ಗ್ರಾಂಗೆ 1,78,850 ರೂ. ಆಗಿದೆ. ಇದು ಇತಿಹಾಸದಲ್ಲೇ ಅತ್ಯಂತ ಹೆಚ್ಚಳ ಎಂದು ಪರಿಗಣಿಸಲಾಗಿದೆ. ಹಾಗಾದರೆ ಚಿನ್ನದ ಬೆಲೆ ಈ ರೀತಿ ಏಕಾಏಕಿ ಹೆಚ್ಚಳವಾಗುವುದಕ್ಕೆ 5 ಪ್ರಮುಖ ಕಾರಣಗಳೇನು ಎನ್ನುವ ವಿವರ ಇಲ್ಲಿದೆ.
Gold Rate ಚಿನ್ನದ ಬೆಲೆ ಏರಿಕೆಗೆ ಪ್ರಮುಖ 5 ಕಾರಣಗಳು
1. ಜಾಗತಿಕ ಅನಿಶ್ಚಿತತೆ ಮತ್ತು ವ್ಯಾಪಾರ ಯುದ್ಧ: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಮುಖ್ಯ ಹಾಗೂ ಪ್ರಮುಖ ಕಾರಣ ಎಂದರೆ ಅಮೆರಿಕ - ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳ ನಡುವೆ ಏರ್ಪಟ್ಟಿರುವ ಹೊಸ ವ್ಯಾಪಾರ ಸಂಘರ್ಷ ಹಾಗೂ ಗ್ರೀನ್‌ಲ್ಯಾಂಡ್ ವಿವಾದದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಕ ಆತಂಕ ಸೃಷ್ಟಿಯಾಗಿದೆ. ಈ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹಣವನ್ನು ಸುರಕ್ಷಿತ ಹೂಡಿಕೆ ಎಂದು ನಂಬಲಾಗಿರುವ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದು ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಪ್ರಮುಖ ಕಾರಣ.

2. ಸುರಕ್ಷಿತ ಹೂಡಿಕೆಯ ಆಕರ್ಷಣೆ: ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಯುದ್ಧ ಭೀತಿ ಇದೆ. ಇರಾನ್ - ಅಮೆರಿಕದ ನಡುವೆ ಯಾವುದೇ ಕ್ಷಣದಲ್ಲಾದರೂ ಯುದ್ಧ ನಡೆಯುವ ಸಾಧ್ಯತೆ ಇದೆ. ಯುದ್ಧದ ಭೀತಿ ಅಥವಾ ಆರ್ಥಿಕ ಹಿಂಜರಿತದ ಮುನ್ಸೂಚನೆ ಸಿಕ್ಕಾಗ ಚಿನ್ನವು ಅತ್ಯಂತ ಸುರಕ್ಷಿತ ಆಸ್ತಿಯಾಗಿ ಕಾಣುತ್ತದೆ. ಈ ನಡೆಯುತ್ತಿರುವುದೂ ಅದೇ. ಹಣದುಬ್ಬರದ ವಿರುದ್ಧ ಹೋರಾಟಕ್ಕೆ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
3. ರೂಪಾಯಿ ಮೌಲ್ಯ ಕುಸಿತ: ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಾಗಲು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಸಹ ಒಂದು ಪ್ರಮುಖ ಕಾರಣವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವನ್ನು ಡಾಲರ್ ಮೂಲಕ ಖರೀದಿಸುವುದರಿಂದ, ರೂಪಾಯಿ ದುರ್ಬಲವಾದ ಸಂದರ್ಭದಲ್ಲಿ ಭಾರತಕ್ಕೆ ಚಿನ್ನ ಆಮದು ಮಾಡಿಕೊಳ್ಳುವ ವೆಚ್ಚವು ದುಬಾರಿಯಾಗುತ್ತದೆ. ಹೀಗಾಗಿ, ರೂಪಾಯಿ ಮೌಲ್ಯ ಕುಸಿಯುತ್ತಿರುವಾಗಲೇ ಚಿನ್ನದ ಬೆಲೆಯೂ ಹೆಚ್ಚಾಗುತ್ತಿದೆ.
4. ವಿವಿಧ ದೇಶದ ಕೇಂದ್ರ ಬ್ಯಾಂಕ್‌ಗಳಿಂದ ಚಿನ್ನ ಖರೀದಿ: ವಿಶ್ವದ ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು (ಭಾರತದ ಆರ್‌ಬಿಐ ಸೇರಿದಂತೆ) ತಮ್ಮ ಮೀಸಲು ನಿಧಿಯಲ್ಲಿ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಟನ್‌ಗಟ್ಟಲೆ ಚಿನ್ನವನ್ನು ಖರೀದಿ ಮಾಡುತ್ತಿವೆ. ಮುಖ್ಯವಾಗಿ ಬ್ರಿಕ್ಸ್ ರಾಷ್ಟ್ರಗಳು ಚಿನ್ನದ ಸಂಗ್ರಹವನ್ನು ಹೆಚ್ಚಳ ಮಾಡಿವೆ. ಇದು ಸಹ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
5. ಆಮದು ಸುಂಕ ವಿಷಯ: ಭಾರತದಲ್ಲಿ ಚಿನ್ನದ ಅಗತ್ಯಕ್ಕಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವ ಸಂದರ್ಭಗಳಲ್ಲಿ ಅದರ ನೇರ ಪರಿಣಾಮವು ಭಾರತದ ಮೇಲೆಯೂ ಆಗುತ್ತದೆ. ಇದೇ ಕಾರಣಕ್ಕೆ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುತ್ತಿದೆ.












Click it and Unblock the Notifications