Gold and Silver Price: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ?
ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ದಿನದಂದು (ಜೂನ್ 1) ಭಾರಿ ಏರಿಕೆ ದಾಖಲಿಸಿದ್ದ ಷೇರು ಮಾರುಕಟ್ಟೆ, ಫಲಿತಾಂಶದ ದಿನ ಏಕಾಏಕಿ ಕುಸಿದು, ಹೂಡಿಕೆದಾರರಿಗೆ ಶಾಕ್ ಕೊಟ್ಟಿದೆ. ಷೇರು ಮಾರುಕಟ್ಟೆ ಕುಸಿತದ ಪರಿಣಾಮ ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.
ಮಂಗಳವಾರ ಬೆಳಗ್ಗೆ ₹6,61,000 ಇದ್ದ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಸಂಜೆ ವೇಳೆಗೆ ₹ 6,68,000 ಕ್ಕೆ ಏರಿಕೆ ಕಂಡಿತು. ಅಂದರೆ ಪ್ರತಿ ಗ್ರಾಂ ಚಿನ್ನದ ಬೆಲೆ 70 ರೂ ಏರಿಕೆ ದಾಖಲಿಸಿತ್ತು. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 76 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ 7600 ರೂಪಾಯಿ ಹೆಚ್ಚಾಗಿತ್ತು.

ಮಂಗಳವಾರ 76,285.78 ಇದ್ದ ಷೇರುಮಾರುಕಟ್ಟೆ ಸೂಚ್ಯಂಕ 4,389.73 ಅಂಕಗಳಷ್ಟು ಕುಸಿತ ಕಂಡು 72,079.05 ಸೂಚ್ಯಂಕದಲ್ಲಿ ದಿನದ ವಹಿವಾಟನ್ನು ಮುಗಿಸಿತು. ಷೇರು ಮಾರುಕಟ್ಟೆ ತೀವ್ರ ಕುಸಿತ ಕಾಣುತ್ತಿದ್ದಂತೆ ಹೂಡಿಕೆದಾರರು ಬಂಡವಾಳ ವಾಪಸ್ ತೆಗೆಯಲು ಆರಂಭಿಸಿದರು. ಚಿನ್ನದ ಮೇಲೆ ಹೂಡಿಕೆದಾರರು ಆಸಕ್ತಿ ತೋರಿಸಿದ್ದು ಬೆಲೆ ಏರಿಕೆಗೆ ಕಾರಣವಾಯಿತು.
ಬೆಳ್ಳಿ ಬೆಲೆ ಕೂಡ ಹೆಚ್ಚಳ
ಬೆಳ್ಳಿ ಬೆಲೆ ಕೂಡ 1200 ರೂಪಾಯಿ ಏರಿಕೆ ಕಂಡಿದ್ದು, ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಮಂಗಳವಾರ ಬೆಳಗ್ಗೆ ₹ 92,800 ಇದ್ದ ಒಂದು ಕೆ.ಜಿ. ಬೆಳ್ಳಿ ಬೆಲೆ, 94 ಸಾವಿರ ರೂಪಾಯಿಗೆ ಹೆಚ್ಚಳವಾಯಿತು.
ಮತ್ತಷ್ಟು ಹೆಚ್ಚುವ ಸಾಧ್ಯತೆ
ಎನ್‌ಡಿಎ ಸರ್ಕಾರ ರಚಿಸಲು ಬಹುಮತ ಪಡೆದಿದ್ದರು ಸರ್ಕಾರ ರಚನೆಗೆ ಹಗ್ಗಜಗ್ಗಾಟ ನಡೆಯಲಿದೆ. ಬುಧವಾರ ಕೂಡ ಷೇರುಪೇಟೆ ಕುಸಿಯುವ ಆತಂಕ ಇದ್ದು, ಒಂದು ವೇಳೆ ಷೇರು ಪೇಟೆ ಕುಸಿದರೆ ಚಿನ್ನದ ಮೇಲೆ ಹೂಡಿಕೆ ಮಾಡಲು ಹೂಡಿಕೆದಾರರು ಆಸಕ್ತಿ ತೋರಿದರೆ, ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.












Click it and Unblock the Notifications