ಜಿಡಿಪಿ ಬೆಳವಣಿಗೆಯಲ್ಲಿ ಏರಿಕೆ: ನೋಟು ರದ್ದತಿ ಬಳಿಕ ಇದು ಅತ್ಯಧಿಕ
ನವದೆಹಲಿ, ಮೇ 31: ಅತಿ ವೇಗದ ಆರ್ಥಿಕ ಬೆಳವಣಿಗೆಯ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಉಳಿಸಿಕೊಂಡಿದೆ.
2018ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ (ಜನವರಿ-ಮಾರ್ಚ್) ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ ಮಟ್ಟವು ಶೇ 7.7ರಷ್ಟಾಗಿದೆ.
ಚೀನಾವು ಶೇ 6.8ರ ಜಿಡಿಪಿ ಹೊಂದಿದೆ. ಅಲ್ಲದೆ, ನೋಟು ರದ್ದತಿಯ ತೀರ್ಮಾನದ ಬಳಿಕ ಅತ್ಯಧಿಕ ಮಟ್ಟಕ್ಕೆ ಜಿಡಿಪಿ ಬೆಳವಣಿಗೆಯನ್ನು ಕಂಡಿದೆ.
ಕೇಂದ್ರ ಸರ್ಕಾರವು ಗುರುವಾರ ಸಂಜೆ ಜಿಡಿಪಿ ಬೆಳವಣಿಗೆಯ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, 2017-18ರ ಸಂಪೂರ್ಣ ಹಣಕಾಸು ವರ್ಷದಲ್ಲಿ ಒಟ್ಟಾರೆ ಶೇ 6.7ರ ಬೆಳವಣಿಗೆ ಉಂಟಾಗಿದೆ.

ಕಳೆದ ತ್ರೈಮಾಸಿಕ ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ಶೇ 7ರಿಂದ ಶೇ 7.2ಕ್ಕೆ ಜಿಡಿಪಿ ಬೆಳವಣಿಗೆ ದಾಖಲಾಗಿತ್ತು.
ಕೃಷಿ, ಉತ್ಪಾದನೆ ಮತ್ತು ನಿರ್ಮಾಣ ವಲಯಗಳಲ್ಲಿ ಕ್ರಮವಾಗಿ ಶೇ 4.5, ಶೇ 9.1 ಮತ್ತು ಶೇ 11.5ರ ಬೆಳವಣಿಗೆಯನ್ನು ನಾಲ್ಕನೇ ತ್ರೈಮಾಸಿಕ ಅವಧಿ ಕಂಡಿದೆ.
ಅಧಿಕ ಮುಖಬೆಲೆಯ ನೋಟುಗಳಾದ 500 ರೂ. ಮತ್ತು 1000 ರೂ.ಗಳನ್ನು ರದ್ದು ಮಾಡುವ ಅಪನಗದೀಕರಣದ ತೀರ್ಮಾನಕ್ಕೂ ಹಿಂದಿನ 2016-17ರ ಆರ್ಥಿಕ ವರ್ಷದ ಎರಡನೆಯ ತ್ರೈಮಾಸಿಕ ಅವಧಿಯ (ಜುಲೈ-ಸೆಪ್ಟೆಂಬರ್) ಬಳಿಕ ಜಿಡಿಪಿ ಬೆಳವಣಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಿದೆ.
ಈ ಬೆಳವಣಿಗೆ ದರವು ನಿರೀಕ್ಷೆಯನ್ನೂ ಮೀರಿ ಸಾಗುವಲ್ಲಿ ಯಶಸ್ವಿಯಾಗಿದೆ. ರಾಯಿಟರ್ಸ್ ಅರ್ಥಶಾಸ್ತ್ರಜ್ಞರು ಶೇ 7.3 ಬೆಳವಣಿಗೆಯನ್ನು ನಿರೀಕ್ಷಿಸಿದ್ದರು.
ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಚಯದಿಂದಾಗಿ ಕಳೆದ 18 ತಿಂಗಳಿನಲ್ಲಿ ಆರ್ಥಿಕ ಬೆಳವಣಿಗೆಯ ವೇಗಕ್ಕೆ ತಡೆ ಬಿದ್ದಿತ್ತು. ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿ ಶೇ 7ರ ಗಡಿ ದಾಟುವ ಮುನ್ನ ಅದು ಮತ್ತೆ ಹಿಡಿತ ಸಾಧಿಸಿದಂತೆ ತೋರುತ್ತಿದೆ.
ಆದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲ ಮರುಪಾವತಿಯಾಗದೆ ಇರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. 2017ರಲ್ಲಿ ದೇಶದ 21 ರಾಷ್ಟ್ರೀಕೃತ ಬ್ಯಾಂಕುಗಳು 9.75 ಲಕ್ಷ ಕೋಟಿ ಸಾಲ ಮರುಪಾವತಿಯಾಗದೆ ಸಂಕಷ್ಟ ಅನುಭವಿಸುತ್ತಿವೆ.
ಈ ಬಾರಿ ಮುಂಗಾರು ಬೇಗನೆ ಕೇರಳವನ್ನು ಪ್ರವೇಶಿಸಿದ್ದು, ಕೃಷಿ ಕ್ಷೇತ್ರದಲ್ಲಿ ಸುಧಾರಣೆಯ ನಿರೀಕ್ಷೆಯಿರುವುದರಿಂದ ಮುಂದಿನ ಅವಧಿಯಲ್ಲಿ ಜಿಡಿಪಿ ದರ ಮತ್ತಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.












Click it and Unblock the Notifications