ಉತ್ಪನ್ನ ಡೆಲಿವರಿಗೆ ಮಹೀಂದ್ರಾ ಇ- ವಾಹನ ಬಳಸಲಿರುವ ಫ್ಲಿಪ್‌ಕಾರ್ಟ್
ಬೆಂಗಳೂರು, ಏಪ್ರಿಲ್ 6: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ಹಾಗೂ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ (ಎಂಎಲ್ಎಲ್)ನೊಂದಿಗೆ ಒಪ್ಪಂದವಾಗಿದೆ. ಈ ಒಪ್ಪಂದದ ಉದ್ದೇಶ, ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮೂಲಕ ಉತ್ಪನ್ನ ವಿತರಣೆಯನ್ನು ಫ್ಲಿಪ್‌ಕಾರ್ಟ್ ಮಾಡಲಿದೆ.
2030 ರ ವೇಳೆಗೆ 25,000 ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳ(ಇವಿಗಳು)ನ್ನು ನಿಯೋಜನೆ ಮಾಡಿಕೊಳ್ಳುವ ಮೂಲಕ ಸಂಪೂರ್ಣವಾಗಿ ಎಲೆಕ್ಟ್ರಿಕ್ ಸಾರಿಗೆಯನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ಫ್ಲಿಪ್ ಕಾರ್ಟ್ ಹೊಂದಿದೆ.
ಫ್ಲಿಪ್ ಕಾರ್ಟ್ ಈಗಾಗಲೇ ಅನೇಕ ಒಇಎಂಗಳ ಜತೆಗೆ ಪಾಲುದಾರಿಕೆಯನ್ನು ಹೊಂದಿದೆ ಮತ್ತು ತನ್ನ ಸಪ್ಲೈ ಚೇನ್ ನಲ್ಲಿ ಈಗಾಗಲೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಅಳವಡಿಕೆ ಮಾಡಿಕೊಂಡಿದೆ. ಎಂಎಲ್ಎಲ್ ಇಡಿಇಎಲ್ ನೊಂದಿಗೆ ಕಂಪನಿಯ ಪಾಲುದಾರಿಕೆಯೊಂದಿಗೆ ಈ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಕ್ರಿಯಾಶೀಲ ಮಾಡಲಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಯೋಜನೆ ಮಾಡಲು ನೆರವಾಗುತ್ತದೆ.
ಇದಲ್ಲದೇ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಬೆಂಬಲವನ್ನು ಮೇಲ್ಮಟ್ಟಕ್ಕೆ ಹೆಚ್ಚಳ ಮಾಡಿಕೊಳ್ಳಲು ನೆರವಾಗುತ್ತದೆ. ಚಾರ್ಜಿಂಗ್ ತಾಣಗಳು, ಟ್ರ್ಯಾಕಿಂಗ್, ಅಸೆಟ್, ಸುರಕ್ಷತೆ ಮತ್ತು ವೆಚ್ಚದ ವಿಚಾರದಲ್ಲಿ ಕಂಪನಿಗೆ ಸಾಕಷ್ಟು ಉಪಯೋಗವಾಗಲಿದೆ. ಎಂಎಲ್ಎಲ್ ತನ್ನ ಎಲೆಕ್ಟ್ರಿಕ್ ವಿತರಣೆ ಬ್ರ್ಯಾಂಡ್ ಆಗಿರುವ ಇಡಿಇಎಲ್ ಅಡಿ ವಿವಿಧ ಮಾದರಿಯ ಮತ್ತು ವರ್ಗಗಳ ಎಲೆಕ್ಟ್ರಿಕ್ ವಾಹನಗಳನ್ನು ಒಇಎಂಗಳ ಮೂಲಕ ಪಡೆದುಕೊಳ್ಳಲಿದೆ.
ಇಡಿಇಎಲ್ ಈಗಾಗಲೇ ಇವಿಗಳನ್ನು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದೀಗ ಫ್ಲಿಪ್ ಕಾರ್ಟ್‌ನ ಉದ್ದೇಶಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಈ ಕಾರ್ಯಾಚರಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇಡಿಇಎಲ್ ಬೆಂಗಳೂರು, ಮುಂಬೈ, ದೆಹಲಿ, ಪುಣೆ, ಕೊಲ್ಕತ್ತಾ ಮತ್ತು ಹೈದ್ರಾಬಾದ್ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಪ್ರಮುಖ 20 ನಗರಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ.
ಹೇಮಂತ್ ಬದ್ರಿ, ಎಸ್ ವಿಪಿ ಸಪ್ಲೈ ಚೇನ್, ಫ್ಲಿಪ್ ಕಾರ್ಟ್ ಗ್ರೂಪ್ ಮಾತನಾಡಿ, ''ಫ್ಲಿಪ್‌ಕಾರ್ಟ್‌ನ ದೊಡ್ಡ ಮಟ್ಟದ ಸುಸ್ಥಿರತೆಯ ಗುರಿಯನ್ನು ತಲುಪಲು ಲಾಜಿಸ್ಟಿಕ್ಸ್‌ನ ವಿದ್ಯುದ್ದೀಕರಣ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಮಹೀಂದ್ರ ಲಾಜಿಸ್ಟಿಕ್ಸ್ ಅನ್ನು ಲಾಜಿಸ್ಟಿಕ್ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. 2030 ರ ವೇಳೆಗೆ ನಮ್ಮ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಎಲೆಕ್ಟ್ರಿಕ್ ಮಾಡುವ ಗುರಿಯನ್ನು ತಲುಪುವಲ್ಲಿ ಈ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಸಾಮೂಹಿಕ ಪ್ರಯತ್ನಗಳ ಮೂಲಕ ನಾವು ದೇಶಾದ್ಯಂತ ಇವಿ ಅಳವಡಿಕೆಯನ್ನು ಮಾಡಿಕೊಳ್ಳಲಿದ್ದೇವೆ ಮತ್ತು ನಮ್ಮ ಲಾಜಿಸ್ಟಿಕ್ಸ್ ಫ್ಲೀಟ್ ಅನ್ನು ಹಂತಹಂತವಾಗಿ ಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲಿದ್ದೇವೆ'' ಎಂದು ತಿಳಿಸಿದರು(ಪಿಟಿಐ)