ಮ್ಯಾಕ್ಸ್ ಹುಟ್ಟಿದ ಖುಷಿ: ಝುಕರ್ ಬರ್ಗ್ ರಿಂದ ಮ್ಯಾಕ್ಸಿಮಮ್ ದಾನ
ಬೆಂಗಳೂರು, ಡಿ.02: ಅತ್ಯಂತ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸ್ಥಾಪಕ ಈಗ ಜನಕನಾದ ಖುಷಿಯಲ್ಲಿದ್ದಾರೆ. ಮಾರ್ಕ್ ಝುಕರ್ ಬರ್ಗ್ ಹಾಗೂ ಪ್ರಿಸಿಲ್ಲಾ ಚಾನ್ ದಂಪತಿಗೆ ಜನಿಸಿದ ಪುತ್ರಿಗೆ ಮ್ಯಾಕ್ಸ್ ಎಂದು ಹೆಸರಿಡಲಾಗಿದೆ.
ಮಗಳು ಹುಟ್ಟಿದ ಖುಷಿಯಲ್ಲಿ ಮಾರ್ಕ್ ದಂಪತಿ ತಮ್ಮ ಬಳಿ ಇರುವ ಫೇಸ್ ಬುಕ್ ನ ಷೇರುಗಳ ಶೇ 99ರಷ್ಟು ಭಾಗವನ್ನು ದಾನ ಧರ್ಮಕ್ಕೆ ಬಳಸುವುದಾಗಿ ಘೋಷಿಸಿದ್ದಾರೆ.
ಮಾರ್ಕ್ ಝುಕರ್ ಬರ್ಗ್ ಮತ್ತು ಅವರ ಪತ್ನಿ ಪ್ರಿಸಿಲ್ಲಾ ಚಾನ್ ಬಳಿ ಇರುವ ಷೇರುಗಳ ಇಂದಿನ ಮೌಲ್ಯ ಸುಮಾರು 45 ಬಿಲಿಯನ್ ಡಾಲರ್ (30 ಬಿಲಿಯನ್ ಪೌಂಡ್) ಎಂದು ಅಂದಾಜಿಸಲಾಗಿದೆ. ಈ ಷೇರುಗಳನ್ನು ತಕ್ಷಣಕ್ಕೆ ದಾನ ಮಾಡುತ್ತಿಲ್ಲ. ಹಂತ ಹಂತವಾಗಿ ಸಮಾಜ ಉಪಯೋಗಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ.

ಕಳೆದ ವಾರ ಈ ದಂಪತಿಗಳಿಗೆ ಪುತ್ರಿ ಜನಿಸಿದ್ದು, ಈ ವಿಷಯವನ್ನು ಮಂಗಳವಾರ ಫೇಸ್ ಬುಕ್ ನಲ್ಲಿ ಬಹಿರಂಗ ಪಡಿಸಿದ್ದರು. ಇದರ ಜೊತೆಗೆ ಮಗಳು ಮ್ಯಾಕ್ಸ್ ಗೆ ತಂದೆ ಮಾರ್ಕ್ ಮುದ್ದಾದ ಪತ್ರವನ್ನು ಬರೆದಿದ್ದರು. ಈ ಸಮಯಕ್ಕೆ ಫೇಸ್ ಬುಕ್ ನಲ್ಲಿ ಈ ಪೋಸ್ಟ್ ಗೆ 9,59,075 ಲೈಕ್ಸ್ ಸಿಕ್ಕಿದೆ.1,58,939 ಬಾರಿ ಹಂಚಿಕೊಳ್ಳಲಾಗಿದೆ. 68,841 ಬಾರಿ ಕಾಮೆಂಟ್ ಕಂಡಿದೆ.[ಮಗಳಿಗೆ ಬರೆದ ಪತ್ರದಲ್ಲಿ ಫೇಸ್‌ಬುಕ್ ಜನಕ ಹೇಳಿದ್ದೇನು?]
ಕೆಲದಿನಗಳ ಹಿಂದೆ ಟೆಕ್ ಲೋಕದ ದಿಗ್ಗಜ ಮಹಾನ್ ದಾನಿ ಬಿಲ್ಸ್ ಗೇಟ್ಸ್ ಅವರ ಸಂಸ್ಥೆ ಜೊತೆ ಕೈಜೋಡಿಸಿದ್ದ ಮಾರ್ಕ್ ಅವರು ಕ್ಲೀನ್ ಎನರ್ಜಿ ತಂತ್ರಜ್ಞಾನ ಅಭಿವೃದ್ಧಿಗೆ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. ಪ್ಯಾರೀಸ್ಸ್ ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮಾವೇಶದಲ್ಲಿ ಇದೇ ವಿಷಯವನ್ನು ಈ ಇಬ್ಬರು ದಿಗ್ಗಜರು ಮಾತನಾಡಲು ಮುಂದಾಗಿದ್ದರು.












Click it and Unblock the Notifications