ದಸರಾ ಗಿಫ್ಟ್: ಕೇಂದ್ರ ಸರ್ಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳ, ಲೆಕ್ಕಾಚಾರ ಹೇಗೆ?
ಕೇಂದ್ರ ಸರ್ಕಾರಿ ನೌಕರರ ಕಾಯುವಿಕೆ ಅಂತ್ಯ ಕಂಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗಿದೆ. ನವರಾತ್ರಿ, ದಸರಾ ಹಬ್ಬದ ಸಂಭ್ರಮದಲ್ಲಿರುವ ನೌಕರರಿಗೆ ಕೇಂದ್ರ ಸರ್ಕಾರ ನಿರೀಕ್ಷಿತ ಗಿಫ್ಟ್ ಕೊಟ್ಟಿದೆ. ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ.
ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (AICPI) 129 ಕ್ಕಿಂತ ಹೆಚ್ಚಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ ಡೇಟಾದ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ ಮತ್ತು 2022 ರ ಜನವರಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದರು. ಈಗ ಅದು ಶೇಕಡ 4ಕ್ಕೆ ಹೆಚ್ಚಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ನಿರೀಕ್ಷಿತ ಡಿಎ ಅಂಕಿಅಂಶವನ್ನು ಆಧರಿಸಿದ ಲೆಕ್ಕಾಚಾರಗಳ ಪ್ರಕಾರ, ರೂ. 31,550 ರ ಮೂಲ ವೇತನ ಹೊಂದಿರುವ ಉದ್ಯೋಗಿಗಳು ವಾರ್ಷಿಕವಾಗಿ ರೂ 15,144 ಹೆಚ್ಚಳವನ್ನು ಪಡೆಯುತ್ತಾರೆ. ಮತ್ತೊಂದೆಡೆ, ಗರಿಷ್ಠ 56,900 ರೂಗಳ ಮೂಲ ವೇತನವು ವಾರ್ಷಿಕವಾಗಿ ರೂ 27,312 ಹೆಚ್ಚಳವನ್ನು ಪಡೆಯುತ್ತದೆ.
ಈ ಬಾರಿಯ ನವರಾತ್ರಿಯ ಹಬ್ಬದ ಕೊಡುಗೆಯಾಗಿ ಕೇಂದ್ರ ಸರ್ಕಾರದ ನೌಕರರು ಡಿಎ ಹೆಚ್ಚಳ ಉಡುಗೊರೆ ಸ್ವೀಕರಿಸುತ್ತಾರೆ. ನಿರೀಕ್ಷೆಯಂತೆ ನವರಾತ್ರಿಯ ಮೂರನೇ ದಿನ ಸೆಪ್ಟೆಂಬರ್ 28ರಂದು ಡಿಎ ಹೆಚ್ಚಳ ಘೋಷಣೆ ಮಾಡಲಾಗಿದೆ. ಜುಲೈ 2022ರಿಂದ ಡಿಎ ನೀಡುವ ಸಾಧ್ಯತೆ ಇದೆ. ಡಿಎ ಹೆಚ್ಚಳ ಘೋಷಣೆಯಾದರೆ ಜುಲೈ 1, 2022 ರಂತೆ ಡಿಎ ಶೇಕಡ 38ರಷ್ಟು ಪಡೆಯಲಿದ್ದಾರೆ. ನೌಕರರು ಎರಡು ತಿಂಗಳ ಡಿಎ ಬಾಕಿಯನ್ನು ಸಹ ಪಡೆಯುತ್ತಾರೆ.

ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ
ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇಕಡ 38 ಆಗಲಿದೆ. ಸೆಪ್ಟೆಂಬರ್ 2022 ರ ಸಂಬಳವು ಹೊಸ ತುಟ್ಟಿ ಭತ್ಯೆಯನ್ನು ಒಳಗೊಂಡಿರುತ್ತದೆ. ಕೇಂದ್ರ ನೌಕರರು ಜುಲೈ ಮತ್ತು ಆಗಸ್ಟ್ ಎರಡು ತಿಂಗಳ ಡಿಎ ಬಾಕಿಯನ್ನು ಪಡೆಯುತ್ತಾರೆ. ಡಿಎ ಹೆಚ್ಚಳವು ಜುಲೈ 1, 2022 ರಿಂದ ಜಾರಿ ಮಾಡಲಾಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರ ಸಂಬಳದ ಜೊತೆ ತುಟ್ಟಿಭತ್ಯೆಯನ್ನು ಪಾವತಿ ಮಾಡುವ ನಿರೀಕ್ಷೆ ಇದೆ. ರಜೆಯ ದಿನಗಳಲ್ಲಿ ಕೇಂದ್ರ ಸರ್ಕಾರದ ನೌಕರರು ದೊಡ್ಡ ಮೊತ್ತದ ಸಂಬಳವನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.

18 ತಿಂಗಳ ಡಿಎ ಬಾಕಿ ಬಿಡುಗಡೆ ಯಾವಾಗ?
18 ತಿಂಗಳ ಅವಧಿಯ ಡಿಎ ಬಾಕಿ ಬಿಡುಗಡೆ ಮಾಡಬೇಕೆಂಬ ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗೆ ಇನ್ನೂ ಕೇಂದ್ರ ಸರ್ಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸರ್ಕಾರಿ ನೌಕರರು ತಮ್ಮ ಒತ್ತಾಯವನ್ನು ಮುಂದುವರೆಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಜನವರಿ 2020 ಮತ್ತು ಜೂನ್ 2021ರ ನಡುವೆ ತುಟ್ಟಿಭತ್ಯೆ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿತ್ತು. ಅದೇ ಡಿಎ ಬಾಕಿಯನ್ನು ನೀಡುವಂತೆ ಕೇಂದ್ರ ಸರ್ಕಾರಿ ನೌಕರರು ಈಗ ಒತ್ತಾಯ ಮಾಡುತ್ತಿದ್ದಾರೆ.

ಡಿಎ ಹೆಚ್ಚಳದ ಬಳಿಕ ವೇತನ ಎಷ್ಟಾಗಲಿದೆ ಪರೀಕ್ಷಿಸಿ
7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ರುಪಾಯಿ ಆಗಿದ್ದರೆ ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಿರುತ್ತಾರೆ. ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರುಪಾಯಿ ಪಡೆಯಲಿದ್ದಾರೆ. ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

ತುಟ್ಟಿ ಭತ್ಯೆ(dearness allowance)
ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.
ಡಿಎ ಇತಿಹಾಸ:7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಜುಲೈ 2021 ರಲ್ಲಿ ಹೆಚ್ಚಿಸಲಾಯಿತು. ಜನವರಿ 1, 2022 ರಲ್ಲಿ ಶೇ 3ರಷ್ಟು ಡಿಎ ಹೆಚ್ಚಳವಾಗಿದ್ದು ಸದ್ಯ ಡಿಎ ಶೇಕಡ 34ರಷ್ಟು ಡಿಎರಷ್ಟಿದೆ. ಜುಲೈ 2021 ರಲ್ಲಿ ಕೇಂದ್ರವು 7 ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ 17 ರಿಂದ 28 ರಷ್ಟು DA ಯನ್ನು ಪರಿಷ್ಕರಿಸಿತ್ತು. 2021 ರ ಅಕ್ಟೋಬರ್‌ನಲ್ಲಿ ಸರ್ಕಾರವು ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಿತು.
ತುಟ್ಟಿಭತ್ಯೆ ಹೆಚ್ಚಳ ಮಾಡುವುದು ಹೇಗೆ?
ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್:
ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76X100. ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33X100.
ಬೇಸಿಕ್ ಸಂಬಳ 18,000 ರು
* ಹೊಸ ಡಿಎ (34%) 6120 ರು/ಪ್ರತಿ ತಿಂಗಳು
* ಹಾಲಿ ಡಿಎ (31%) 5580 ರು/ಪ್ರತಿ ತಿಂಗಳು
* ತುಟ್ಟಿಭತ್ಯೆ ಏರಿಕೆ ಎಷ್ಟು: 6120- 5580= 540 ರು/
ಪ್ರತಿ ತಿಂಗಳು * ವಾರ್ಷಿಕ ಲೆಕ್ಕಾಚಾರದಂತೆ 540 ರು X 12= 6,480 ರು.
ಗರಿಷ್ಠ ಬೇಸಿಕ್ ಸಂಬಳ 56,900 ರು
* ಹೊಸ ಡಿಎ (34%) 19,346 ರು/ಪ್ರತಿ ತಿಂಗಳು
* ಹಾಲಿ ಡಿಎ (31%) 17,639 ರು/ಪ್ರತಿ ತಿಂಗಳು
* ತುಟ್ಟಿಭತ್ಯೆ ಏರಿಕೆ ಎಷ್ಟು: 19346-17639= 1,707 ರು/ ಪ್ರತಿ ತಿಂಗಳು * ವಾರ್ಷಿಕ ಲೆಕ್ಕಾಚಾರದಂತೆ 1,707 ರು X 12= 20,484 ರು.












Click it and Unblock the Notifications