7.2ಕ್ಕೆ ಏರಿತು ಜಿಡಿಪಿ, ಮೋದಿ- ಜೇಟ್ಲಿ ಸೀಟಿ ಹೊಡೆಯಬಹುದು!
ನವದೆಹಲಿ, ಫೆಬ್ರವರಿ 28: ಡಿಸೆಂಬರ್ ತ್ರೈ ಮಾಸಿಕ (ಮೂರನೇ ತ್ರೈ ಮಾಸಿಕ) ಅಂತ್ಯಕ್ಕೆ ದೇಶದ ಜಿಡಿಪಿ ದರವು 7.2ಕ್ಕೆ ಏರಿಕೆ ಆಗಿದೆ. ಅದಕ್ಕೂ ಹಿಂದಿನ ಅಂದರೆ ದ್ವಿತೀಯ ತ್ರೈ ಮಾಸಿಕದಲ್ಲಿ ಜಿಡಿಪಿ ದರ ಶೇ 6.5ರಷ್ಟಿತ್ತು. ಮೊದಲನೇ ತ್ರೈ ಮಾಸಿಕದಲ್ಲಿ ತೀರಾ ಆತಂಕಕ್ಕೆ ಕಾರಣವಾಗುವಂತೆ ಶೇ 5.7ರ ಮಟ್ಟಕ್ಕೆ ಭಾರೀ ಕುಸಿತ ಕಂಡಿತ್ತು.
ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯಿಂದ ಮೊದಲ ತ್ರೈ ಮಾಸಿಕದಲ್ಲಿ ಶೇ 5.7ರ ಆತಂಕದ ಮಟ್ಟಕ್ಕೆ ಕುಸಿತ ಕಂಡಿದ್ದ ಜಿಡಿಪಿ, ಅಂತೂ ಈ ಬಾರಿ ಈ ಮಟ್ಟಕ್ಕೆ ತಲುಪಿರುವುದರಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೊಂಚ ನಿರಾಳ ಆಗಬಹುದಾಗಿದೆ. ಜತೆಗೆ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ವಿಪಕ್ಷಗಳಿಗೆ ಉತ್ತರ ಹೇಳಲು ಅಸ್ತ್ರ ಸಿಕ್ಕಂತಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ಹತ್ತಾರು ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಕೇಂದ್ರ ಸರಕಾರ ಭಾರೀ ಮುಜುಗರ ಅನುಭವಿಸುತ್ತಿತ್ತು. ಇದೀಗ ಖಚಿತ ಪಟ್ಟಿರುವ ಈ ಜಿಡಿಪಿ ದರದಿಂದ ಭಾರತವು ಮತ್ತೆ ಜಾಗತಿಕ ಮಟ್ಟದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಸಾಲಿನಲ್ಲಿ ನಿಲ್ಲುತ್ತದೆ. ದೇಶದ ಆರ್ಥಿಕತೆಗೆ ಕೆಲವು ತೊಡಕುಗಳಿವೆ. ಅದನ್ನು ಮೀರಿ ಪ್ರಗತಿಯನ್ನು ಸಾಧಿಸುವುದಾಗಿ ಕಳೆದ ವಾರ ನರೇಂದ್ರ ಮೋದಿ ಉದ್ಯಮಿಗಳಿಗೆ ಭರವಸೆ ನೀಡಿದ್ದರು.
ಸರಕಾರಿ ವಲಯದ ಬ್ಯಾಂಕ್ ಗಳಿಗೆ ಬಂಡವಾಳ ಪೂರೈಕೆ ಮಾಡುವ ಮೂಲಕ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಮೂಲಕ ಆರ್ಥಿಕತೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದರು ನರೇಂದ್ರ ಮೋದಿ. ವಿಶ್ವ ಬ್ಯಾಂಕ್ ನ ವರದಿಯಲ್ಲಿ ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಿಸುವ ಶ್ರೇಯಾಂಕದಲ್ಲಿ ಮೂವತ್ತು ಸ್ಥಾನ ಮೇಲೇರಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications