ವೃತ್ತಿಪರ ತಂಡವಿದೆ, ಉದ್ಯಮ ನಿಲ್ಲಿಸೊಲ್ಲ: ಷೇರು ಮಾರುಕಟ್ಟೆಗಳಿಗೆ ಕಾಫಿ ಡೇ ಪತ್ರ
ಬೆಂಗಳೂರು, ಜುಲೈ 30: ತಮ್ಮ ಮಾಲೀಕನ ಹಠಾತ್ ಕಣ್ಮರೆಯ ಕುರಿತು ಕಾಫಿ ಡೇ ಸಂಸ್ಥೆಯು ಮುಂಬೈನಲ್ಲಿರುವ ಎರಡು ಪ್ರಮುಖ ಷೇರು ಮಾರುಕಟ್ಟೆಗಳಿಗೆ ಪತ್ರ ಬರೆದಿದೆ.
ಸಿದ್ಧಾರ್ಥ ಅವರ ಕಣ್ಮರೆ ಉದ್ಯಮ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ದಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (ನಿಫ್ಟಿ) ಮತ್ತು ಬಿಎಸ್‌ಇ ಲಿಮಿಟೆಡ್‌ಗೆ ಪತ್ರ ಬರೆದಿರುವ ಕಾಫಿ ಡೇ ಕಂಪೆನಿ ಸೆಕ್ರೆಟರಿ ಸದಾನಂದ ಪೂಜಾರಿ ಅವರು ತಮ್ಮ ಮಾಲೀಕನ ಕಣ್ಮರೆ ಕುರಿತು ಮಾಹಿತಿ ನೀಡಿದ್ದಾರೆ.
ಜತೆಗೆ ಸಿದ್ಧಾರ್ಥ ಅವರ ಅನುಪಸ್ಥಿತಿಯಲ್ಲಿಯೂ ಕಂಪೆನಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅದು ಸಮರ್ಥವಾಗಿದೆ ಎಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡುವ ಮೂಲಕ ಕಂಪೆನಿಯ ಷೇರುಗಳು ನೆಲಕಚ್ಚದಂತೆ ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

'ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ವಿ.ಜಿ. ಸಿದ್ಧಾರ್ಥ ಅವರು ನಿನ್ನೆ ಸಂಜೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಬಂಧಪಟ್ಟ ಆಡಳಿತದಿಂದ ನಾವು ನೆರವು ಪಡೆದುಕೊಳ್ಳುತ್ತಿದ್ದೇವೆ. ಕಂಪೆನಿಯು ವೃತ್ತಿಪರ ಸ್ಪರ್ಧಾತ್ಮಕ ನಾಯಕತ್ವದ ತಂಡದ ನೇತೃತ್ವದಲ್ಲಿ ಮುನ್ನಡೆಯುತ್ತಿದೆ ಮತ್ತು ನಿರ್ವಹಣೆಯಾಗುತ್ತಿದೆ. ನಾವು ಉದ್ಯಮದ ಮುಂದುವರಿಕೆಯನ್ನು ಖಚಿತಪಡಿಸುತ್ತೇವೆ. ಮುಂದಿನ ಮಾಹಿತಿ ಪಡೆದ ಬಳಿಕ ನಿಮಗೆ ವಿವರ ನೀಡುತ್ತೇವೆ' ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ, ಕಾಫಿ ಡೇ ಸೇರಿದಂತೆ ಸಿದ್ಧಾರ್ಥ ಅವರ ಮಾಲೀಕತ್ವದ ಸಂಸ್ಥೆಗಳು ಮಂಗಳವಾರ ಬಂದ್ ಆಗಿವೆ. ಜತೆಗೆ ಷೇರುಪೇಟೆಯಲ್ಲಿ ಕಾಫಿ ಡೇ ಸಂಸ್ಥೆಯ ಷೇರುಗಳ ಮೌಲ್ಯ ಕುಸಿದಿದೆ.

ಬಿಎಸ್‌ಇ ಷೇರುಪೇಟೆಯಲ್ಲಿ ಮಂಗಳವಾರ ಬೆಳಿಗ್ಗೆ 154.05 ರೂ. ನಂತೆ ವಹಿವಾಟು ಆರಂಭವಾಗಿದ್ದು, 19.90%ರಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇಯಲ್ಲಿ 20%ರಷ್ಟು ಕುಸಿತ ಉಂಟಾಗಿದೆ.












Click it and Unblock the Notifications