ಆರ್ ಬಿಐನ ಹಣ ಬೇಡ ಅಂತಾರೆ ಜೇಟ್ಲಿ, ಬೇಕು ಅಂತಿದ್ದಾರೆ ಗರ್ಗ್
ನವದೆಹಲಿ, ಡಿಸೆಂಬರ್ 20: ಕೇಂದ್ರ ಸರಕಾರಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣ ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ ಒಂದು ದಿನದ ನಂತರ ಅದಕ್ಕೆ ಉಲ್ಟಾ ಎನಿಸುವ ಹೇಳಿಕೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಬುಧವಾರ ಹೇಳಿದ್ದಾರೆ.
ಕೇಂದ್ರೀಯ ಬ್ಯಾಂಕ್ ನಿಂದ ಮಧ್ಯಂತರ ಲಾಭಾಂಶ ನೀಡುವಂತೆ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ. ಆರ್ ಬಿಐನ ಆರ್ಥಿಕ ಬಂಡವಾಳದ ರಚನೆ ಹಾಗೂ ರೂಪುರೇಷೆ ಬಗ್ಗೆ ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಎಷ್ಟು ಪ್ರಮಾಣದ ಮೀಸಲು ನಿಧಿಯನ್ನು ಆರ್ ಬಿಐ ಹೊಂದಿರಬೇಕು ಎಂಬ ಬಗ್ಗೆ ಈಗಾಗಲೇ ಒಪ್ಪಿಗೆ ಸಿಕ್ಕಾಗಿದೆ ಎಂದಿದ್ದಾರೆ.
ಪೂರಕವಾದ ಅನುದಾನಕ್ಕೆ ಸಲ್ಲಿಸಿರುವ ಬೇಡಿಕೆ ಬಗ್ಗೆ ಸಂಸತ್ ನಲ್ಲಿ ಮಂಡನೆ ಮಾಡಲಾಗುವುದು ಎಂದಿರುವ ಅವರು, ಅದರಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಹೆಚ್ಚುವರಿ ಬಂಡವಾಳ ಪೂರೈಕೆ ಮಾಡುವ ಮಾಹಿತಿಯೂ ಇರುತ್ತದೆ ಎಂದು ಹೇಳಿದ್ದಾರೆ.

ಮಧ್ಯಂತರ ಲಾಭಾಂಶವನ್ನು ಆರ್ ಬಿಐನಿಂದ ಕೇಂದ್ರ ಸರಕಾರ ಕೇಳಲಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಗರ್ಗ್ 'ಹೌದು' ಎಂದು ಉತ್ತರ ನೀಡಿದ್ದಾರೆ. 2017 ಜುಲೈನಿಂದ ಜೂನ್ 2018ರ ಅವಧಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 50 ಸಾವಿರ ಕೋಟಿ ರುಪಾಯಿಯನ್ನು ಲಾಭಾಂಶವಾಗಿ ನೀಡಿದೆ. ಅದರಲ್ಲಿ 10 ಸಾವಿರ ಕೋಟಿಯನ್ನು ಮಾರ್ಚ್ 27ರಂದು ಬಿಡುಗಡೆ ಮಾಡಿದೆ. ಇದರಿಂದ ವಿತ್ತೀಯ ಕೊರತೆ ಕಡಿಮೆ ಮಾಡಿಕೊಳ್ಳಲು ಸರಕಾರಕ್ಕೆ ನೆರವಾಗುತ್ತದೆ.
ಆರ್ಥಿಕ ಕೊರತೆ ಗುರಿಯನ್ನು ಸರಿಮಾಡಿಕೊಳ್ಳಲು ಕೇಂದ್ರ ಸರಕಾರಕ್ಕೆ ಆರ್ ಬಿಐನಿಂದ ಹೆಚ್ಚುವರಿ ಹಣ ಏನೂ ಬೇಡ ಎಂದು ಮಂಗಳವಾರದಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಬ್ಯಾಂಕ್ ಗಳ ಮರುಬಂಡವಾಳ ಪೂರೈಕೆಗೆ, ದೇಶದ ಬಡವರ ಸಲುವಾಗಿ ಇದನ್ನು ಬಳಸಬಹುದು. ಸರಕಾರ ತನ್ನ ವೇತನಕ್ಕಾಗಿ ಈ ಹಣ ಬಳಸಲ್ಲ. ನಮ್ಮ ಸರಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದಿದ್ದರು.












Click it and Unblock the Notifications