ಮತ್ತೊಂದು ಭೂಮಿಯನ್ನು ಸೃಷ್ಟಿಸೋಣ: ಹೀಗೊಂದು ವಿನೂತನ ಪರಿಕಲ್ಪನೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 6: ನಮಗೆ ನೆಲೆ ನೀಡಿರುವ ಭೂಮಿ ಎಷ್ಟು ದಿನ ನಮ್ಮ ತೂಕವನ್ನು ಸಹಿಸಿಕೊಳ್ಳಬಲ್ಲದು?

ಶರವೇಗದಲ್ಲಿ ಏರುತ್ತಿರುವ ಜನಸಂಖ್ಯೆ, ಬರಿದಾಗುತ್ತಿರುವ ಸಂಪನ್ಮೂಲ ಇವುಗಳನ್ನು ನೋಡಿದಾಗ ಈ ಭೂಮಿಯ ಗಾತ್ರ ಬಲು ಕಿರಿದು ಎಂಬ ಭಾವನೆ ಮೂಡುತ್ತದೆ. ಬೆಟ್ಟಗುಡ್ಡ, ಕಾಡುಗಳೆಲ್ಲ ಮಾಯವಾಗಿ ಅಲ್ಲಿ ಪಟ್ಟಣಗಳು ತಲೆ ಎತ್ತುತ್ತಿವೆ. ಹೀಗೆಯೇ ಮುಂದುವರಿದರೆ ಮುಂದೆ ಮನೆ ಕಟ್ಟಲು, ಕೃಷಿ, ಕೈಗಾರಿಕೆಗಳಿಗೆ ಜಾಗ ಸಿಗುವುದಾದರೂ ಎಲ್ಲಿ?

ಎಲ್ಲರೂ ಆಕಾಶದತ್ತ ನೋಡುತ್ತಿದ್ದಾರೆ! ನಿಜ. ಈಗಾಗಲೇ ಮಂಗಳ, ಗುರು ಗ್ರಹಗಳು ಮುಂತಾದೆಡೆ ಮನುಷ್ಯ ಜೀವಿಸಲು ಯೋಗ್ಯವಾದ ಪರಿಸರ ಇದೆಯೇ, ಅಲ್ಲಿ ಜೀವಿಗಳು ವಾಸಿಸುತ್ತಿವೆಯೇ ಎಂಬ ಬಗ್ಗೆ ವಿಜ್ಞಾನ ಲೋಕ ಕುತೂಹಲದಿಂದ ಹುಡುಕಾಟ ನಡೆಸುತ್ತಿದೆ.

ಭೂಮಿಯನ್ನು ಹಿರಿದು ಮಾಡಲು ಆಗುವುದಿಲ್ಲ. ಹೊಸ ಭೂಮಿಯನ್ನೇ ಸೃಷ್ಟಿಸಿದರೆ ಹೇಗೆ ಎನ್ನುವುದು ವಿಜ್ಞಾನಿಗಳ ಮುಂದಿರುವ ಪ್ರಶ್ನೆ. ಅದರ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ. ಹಿಂದೆ ಈ ಗ್ರಹಗಳೂ ಭೂಮಿಯಂತೆ ಜೀವಿಗಳ ಆವಾಸ ಸ್ಥಾನವಾಗಿರಬಹುದು.

Can we create another earth?

ಹೊಸ ಭೂಮಿಯ ಸೃಷ್ಟಿಯ ಪರಿಕಲ್ಪನೆ:
ಇದರಾಚೆಗೂ ವಸುಂಧರೆಯ ಸ್ವರೂಪವನ್ನು ಮರುಸೃಷ್ಟಿಸುವ ಪ್ರಯತ್ನಗಳು, ಹೊಸ ಆಲೋಚನೆಗಳು ಹುಟ್ಟಿಕೊಳ್ಳುತ್ತಿವೆ. ಅಂತಹದೇ ವಿಶಿಷ್ಟ ಪರಿಕಲ್ಪನೆಯನ್ನು ಎಂಜಿನಿಯರ್ ಮಂಜುನಾಥ್ ಸಿದ್ಧಪಡಿಸಿದ್ದಾರೆ.

ಸೂರ್ಯನ ಸುತ್ತಲು ಸುತ್ತುವ, ನಮ್ಮ ಭುವಿಯನ್ನೇ ಹೋಲುವ ಕೃತಕ ಭೂಮಿಯನ್ನು ಸೃಷ್ಟಿಸುವ ಸಾಧ್ಯತೆಗಳನ್ನು ಅವರು ತೆರೆದಿಟ್ಟಿದ್ದಾರೆ. ಈ ಪರಿಕಲ್ಪನೆಯಂತೆ ಹೊಸ ಭೂಮಿಯ ಸೃಷ್ಟಿ ಸಾಧ್ಯವಾದರೆ, ನಮ್ಮ ಭೂಮಿಯ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಭವಿಷ್ಯದಲ್ಲಿ ಎದುರಾಗುವ ಜನಸಂಖ್ಯಾ ಸ್ಫೋಟದ ತೀವ್ರತೆಯನ್ನು ಎದುರಿಸಬಹುದು ಎನ್ನುವುದು ಅವರ ಅಭಿಪ್ರಾಯ.

'ನೀಲಿ ಜಗತ್ತು':
ಮಂಜುನಾಥ್ ತಮ್ಮ ಪರಿಕಲ್ಪನೆಗೆ ಇಟ್ಟಿರುವ ಹೆಸರು 'ಬ್ಲೂ ವರ್ಲ್ಡ್' ಎಂದು. ಆಕಾಶ ಮತ್ತು ಸೌರವ್ಯೂಹ ಜಗತ್ತಿನ ಬಣ್ಣವನ್ನೇ ಅವರು ತಮ್ಮ ಪರಿಕಲ್ಪನೆಯಲ್ಲಿ ಇಳಿಸಿದ್ದಾರೆ.

ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುತ್ತಲೇ ಸೂರ್ಯನಿಗೂ ಪ್ರದಕ್ಷಿಣೆ ಹಾಕುತ್ತದೆ. ಇದರಂತೆಯೇ ಕೆಲವು ಗ್ರಹಗಳನ್ನು ಸೂರ್ಯನ ಪರಿಮಿತಿಗೆ ತರಬಹುದೇ ಎಂಬ ಪ್ರಶ್ನೆ ಮಂಜುನಾಥ್ ಅವರ ಮನಸಿನಲ್ಲಿ ಮೂಡಿದೆ.

ಭೂಮಿಯಂತೆಯೇ ಸೂರ್ಯನಿಂದ ನಿರ್ದಿಷ್ಟ ದೂರದ ಮಿತಿಯಲ್ಲಿ ಗ್ರಹಗಳು ಚಲಿಸುವಂತೆ ಮಾಡಬಹುದು. ಭೂಮಿಯ ಪರಿಧಿಯಲ್ಲಿ ವಿವಿಧ ಗ್ರಹಗಳನ್ನು ಸ್ಥಾಪಿಸುವ ಮೂಲಕ ಅವುಗಳಲ್ಲಿಯೂ ಭೂಮಿಯ ಗುಣವನ್ನು ಬಿತ್ತಬಹುದು ಎನ್ನುವುದು ಅವರ ಕಲ್ಪನೆ.

ಆದರೆ, ಅದರ ಸಾಧ್ಯತೆ ಮತ್ತು ಅನುಷ್ಠಾನದ ಕುರಿತು ಅವರಲ್ಲಿ ಅನುಮಾನ ಮತ್ತು ಕುತೂಹಲಗಳಿವೆ. ಇವುದುಗಳ ಸಾಧ್ಯಾಸಾಧ್ಯತೆಗಳನ್ನು ವಿಜ್ಞಾನಿಗಳೇ ಬಿಡಿಸಬೇಕು ಎನ್ನುತ್ತಾರೆ ಅವರು.

ಇದಕ್ಕಾಗಿ ಇಸ್ರೊ, ನಾಸಾ ಮುಂತಾದವುಗಳ ಮೊರೆ ಹೋಗುವ ಉದ್ದೇಶ ಅವರಲ್ಲಿದೆ.

ಗ್ರಹಗಳನ್ನು ಚಲಿಸುವುದು ಹೇಗೆ?:
ಮಂಗಳ, ಗುರು ಮುಂತಾದ ಗ್ರಹಗಳಲ್ಲಿ ನೀರು ಮತ್ತು ಪ್ರಾಣಿಗಳು ಜೀವಿಸಲು ಪೂರಕವಾದ ವಾತಾವರಣವಿದೆಯೇ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ನಮ್ಮ ಸೌರವ್ಯೂಹದ ಆಚೆಗೂ ನಮ್ಮ ಕಲ್ಪನೆಗೂ ನಿಲುಕದ ಜಗತ್ತಿದೆ. ಅವುಗಳಲ್ಲಿಯೂ ಜೀವಿಗಳಿರಬಹುದು. ನಮ್ಮ ಸೌರಮಂಡಲದ ವ್ಯಾಪ್ತಿಯಲ್ಲಿಯೇ ಇಂತಹ ಆಕಾಶಕಾಯಗಳು ಮತ್ತು ಗ್ರಹಗಳಿವೆ. ಅವುಗಳನ್ನು ಭೂಮಿಯಂತೆಯೇ ಸೂರ್ಯನ ಬೆಳಕಿನ ಪರಿಧಿಗೆ ತರುವ ಪರಿಕಲ್ಪನೆ 'ಬ್ಲ್ಯೂ ವರ್ಲ್ಡ್‌' ಯೋಜನೆಯದು.

ಈ ಗ್ರಹಗಳನ್ನು ಇತರೆ ಗ್ರಹಗಳೊಂದಿಗೆ ಮುಖಾಮುಖಿ ಸಂಘರ್ಷಿಸುವ ಅಥವಾ ಬಾಹ್ಯ ಒತ್ತಡಗಳ ಮೂಲಕ ಅವುಗಳ ಮೂಲಸ್ಥಾನದಿಂದ ಚಲಿಸುವಂತೆ ಮಾಡಿ ಸೂರ್ಯನತ್ತ ಸಾಗಿಸಬೇಕು. ಅವುಗಳನ್ನು ಭೂಮಿಯಂತೆ ಸೂರ್ಯನಿಂದ ನಿರ್ದಿಷ್ಟ ದೂರದಲ್ಲಿ ನಿಲ್ಲಿಸಬೇಕು. ನಂತರ ಅಲ್ಲಿ ಮಾನವ ಚಟುವಟಿಕೆಗಳನ್ನು ಆರಂಭಿಸುವ ಕೆಲಸ ನಡೆಸಬೇಕು ಎನ್ನುತ್ತಾರೆ ಮಂಜುನಾಥ್.

ಒಂದೆರಡಲ್ಲ, ಇಂತಹ ಅನೇಕ ಭೂಮಿಗಳನ್ನು ಸೃಷ್ಟಿಸಬಹುದು. ಈ ಭೂಮಿಗಳು ಸೂರ್ಯನ ಸುತ್ತ ತಿರುಗುವಾಗ ಅವುಗಳ ನಡುವೆ ಘರ್ಷಣೆ ಸಂಭವಿಸದಂತೆಯೂ ನೋಡಿಕೊಳ್ಳಬಹುದು ಎನ್ನುತ್ತಾರೆ ಅವರು.

ಸೂರ್ಯನ ಸುತ್ತ ಕಕ್ಷೆಯಲ್ಲಿ ಯಾವ ಅನುಕ್ರಮದಲ್ಲಿ ಗ್ರಹಗಳನ್ನು ಸ್ಥಾಪಿಸಬಹುದು ಎಂಬ ಬಗ್ಗೆ ಅವರು ತಮ್ಮದೇ ಪರಿಕಲ್ಪನೆಯಲ್ಲಿ ನಕ್ಷೆಯನ್ನೂ ಸಿದ್ಧಪಡಿಸಿದ್ದಾರೆ. ತೆಳುವಾಗಿ ಮೂಡಿರುವ ಈ ಆಲೋಚನೆಗಳಿಗೆ ವೈಜ್ಞಾನಿಕ ಸಾಧ್ಯತೆಗಳ ಹೊಳಹುಗಳು ದೊರೆತರೆ ಇನ್ನಷ್ಟು ಆಳವಾಗಿ ಅದನ್ನು ರೂಪಿಸಬಹುದು.

ಭವಿಷ್ಯದಲ್ಲಿ ಸೌರವ್ಯೂಹದ ಇಂತಹ ಕೃತಕ ಬದಲಾವಣೆ ಮತ್ತು ಸೃಷ್ಟಿಯ ಸಂಭವಗಳನ್ನು ಅಲ್ಲಗಳೆಯುವಂತಿಲ್ಲ. ಭೂಮಿಗೆ ಪರ್ಯಾಯವಾಗಿ ಜೀವಿಸಲು ಯೋಗ್ಯವಾದ ಮತ್ತೊಂದು ಗ್ರಹವನ್ನು ಸೃಷ್ಟಿಸುವುದು ಅನಿವಾರ್ಯವೂ ಆಗಲಿದೆ. ಈಗಿನಿಂದಲೇ ಅದಕ್ಕೆ ತಯಾರಿಗಳನ್ನು ನಡೆಸಿದರೆ, ಮುಂದೆ ಅನುಕೂಲವಾಗಲಿದೆ ಎನ್ನುವುದು ಅವರ ಅಭಿಪ್ರಾಯ.

ಮಂಜುನಾಥ್ ಅವರ ಸಂಪರ್ಕ ಸಂಖ್ಯೆ: 99168 15838

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We can create another earth, which is worthwhile to live says Mr. Manjunath. He explains his concept of the 'blue world' could be crated by man power.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ