ಎಲಾನ್ ಮಸ್ಕ್‌ನನ್ನು ಹೀಗೆ ಹ್ಯಾಂಡಲ್ ಮಾಡಿ: ಕಾನ್ರಾಡ್ ಕೊಟ್ಟ ಟಿಪ್ಸ್
ಲಂಡನ್, ಏ. 15: ಮಂಗಳ ಗ್ರಹದಲ್ಲಿ ಮಾನವನ ವಸಾಹತು ನಿರ್ಮಿಸುವ ಬೃಹತ್ ಯೋಜನೆ ಕೈಗೊಳ್ಳುವ ಮೂಲಕ ಬಹಳ ಪ್ರಖ್ಯಾತಿ ಪಡೆದಿರುವ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಮೈಕ್ರೋ ಬ್ಲಾಗಿಂಗ್ ಸೋಷಿಯಲ್ ಮೀಡಿಯಾ ಟ್ವಿಟ್ಟರ್ ಅನ್ನು ಖರೀದಿಸುವುದಾಗಿ ಟ್ವೀಟ್ ಮಾಡಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಆದರೆ, ಟ್ವಿಟ್ಟರ್‌ನ ನೌಕರ ವರ್ಗದವರನ್ನ ಗೊಂದಲ ಮತ್ತು ಗಾಬರಿಗೊಳಿಸಿದೆ.
ಟ್ವಿಟ್ಟರ್ ಕಂಪನಿಯ ಆಡಳಿತವರ್ಗಕ್ಕೂ ಎಲಾನ್ ಮಸ್ಕ್ ಅವರ ಆಫರ್ ಬಗ್ಗೆ ಏನು ಮಾಡಬೇಕೆಂಬ ಗೊಂದಲ ಇದೆ. ಸದ್ಯದ ಮಟ್ಟಿಗೆ ಮಸ್ಕ್ ಮತ್ತು ಟ್ವಿಟ್ಟರ್ ಮಧ್ಯೆ ಮಾತುಕತೆ ನಡೆಯುತ್ತಿರಬಹುದು ಎಂಬ ಸುದ್ದಿ ಇದೆ.
ಅದೇನೇ ಇರಲಿ, ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸುತ್ತೇನೆ ಎಂದು ಹೇಳಿದರೆ ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಬ್ಲೂಮ್‌ಬರ್ಗ್ ಡಿಜಿಟಲ್ ಎಡಿಟರ್ ಕಾನ್ರಾಡ್ ಕ್ಯುಲ್ಟಿ ಹಾರ್ಪರ್ ಅವರು ಹೇಳಿದ್ದಾರೆ. ಮಸ್ಕ್ ಅವರನ್ನ ಯಾವ ರೀತಿ ಹ್ಯಾಂಡಲ್ ಮಾಡಬೇಕು ಎಂದು ಅವರು ಕೆಲ ಸಲಹೆಗಳನ್ನ ಟ್ವಿಟ್ಟರ್ ಆಡಳಿತ ವರ್ಗಕ್ಕೆ ನೀಡಿದ್ದಾರೆ.

ಕಾನ್ರಾಡ್ ಅವರು ನ್ಯೂ ಸೈಂಟಿಸ್ಟ್ ಎಂಬ ವಿಜ್ಞಾನ ನಿಯತಕಾಲಿಕೆಯೊಂದರಲ್ಲಿ ಡಿಜಿಟಲ್ ಎಡಿಟರ್ ಅಗಿ ಕೆಲಸ ಮಾಡುವಾಗ ಎಲಾನ್ ಮಸ್ಕ್ ಅವರು ಇಂಥದ್ದೇ ಒಂದು ಆಫರ್ ಕೊಟ್ಟಿದ್ದರಂತೆ. ನ್ಯೂ ಸೈಂಟಿಸ್ಟ್ ನನ್ನ ಮೆಚ್ಚಿನ ಪತ್ರಿಕೆ ಎಂದು ಹೇಳಿಕೊಳ್ಳುತ್ತಿದ್ದ ಮಸ್ಕ್ ಅವರು 2019ರಲ್ಲಿ ಒಂದು ದಿನ ತಾನು ಈ ವಿಜ್ಞಾನ ಪತ್ರಿಕೆಯನ್ನ ಖರೀದಿಸುತ್ತೇನೆ ಎಂದು ಹೇಳಿದ್ದರಂತೆ. ಅವರ ಈ ಆಫರ್ ಹಿಂದೆ ಒಂದು ಹಿನ್ನೆಲೆ ಘಟನೆಯೂ ಇದೆ. ಅದೇ ಇಂಟ್ರೆಸ್ಟಿಂಗ್.
ನ್ಯೂ ಸೈಂಟಿಸ್ಟ್ ಪತ್ರಿಕೆಯ ಪೇವಾಲ್ (ಡಿಜಿಟಲ್ ಮಾನಿಟೈಸಿಂಗ್) ನೀತಿ ಬಗ್ಗೆ ಎಲಾನ್ ಮಸ್ಕ್ ಮೊದಲು ತಗಾದೆ ತೆಗೆದರು. ಅದಾದ ಬಳಿಕ ಅಚ್ಚರಿ ಎಂಬಂತೆ ನ್ಯೂ ಸೈಂಟಿಸ್ಟ್ ಪತ್ರಿಕೆಯನ್ನ ಈಗಲೇ ಕೊಳ್ಳಲು ಎಷ್ಟು ವೆಚ್ಚವಾಗುತ್ತದೆ ಎಂದು ಕೇಳಿದ್ದರಂತೆ. ಮಸ್ಕ್ ಅವರ ಈ ದಿಢೀರ್ ಆಫರ್‌ನಿಂದ ನ್ಯೂ ಸೈಂಟಿಸ್ಟ್ ಪತ್ರಿಕೆಯ ಮ್ಯಾನೇಜ್ಮೆಂಟ್‌ಗೆ ಹೇಗೆ ರಿಯಾಕ್ಟ್ ಮಾಡಬೇಕೆಂದು ಗೊತ್ತಾಗದೇ ಗೊಂದಲಕ್ಕೊಳಗಾದರು ಎಂದು ಕಾನ್ರಾಡ್ ಹೇಳುತ್ತಾರೆ.
ಮಸ್ಕ್ ಅವರು ನ್ಯೂ ಸೈಂಟಿಸ್ಟ್ ಖರೀದಿಗೆ ಆಫರ್ ಕೊಟ್ಟ ಬಳಿಕ ಪತ್ರಿಕೆಯ ಸಿಇಒ ನೀನಾ ರೈಟ್ ಅವರು ಇಂಟ್ರೆಸ್ಟಿಂಗ್ ಎನಿಸುವ ಪ್ರತಿಕ್ರಿಯೆ ಕೊಟ್ಟಿದ್ದರು.

"ನಾವು ಸರಿಯಾದ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಬಹುದು. ಈ ಮಧ್ಯೆ ನಿಮಗೆ ಆಗುತ್ತಿರುವ ಪೇವಾಲ್ ಸಮಸ್ಯೆಯನ್ನ ಆದಷ್ಟೂ ಬೇಗ ನಿವಾರಿಸುವುದು ಉತ್ತಮ" ಎಂದು ಬಹಳ ಜಾಣ್ಮೆಯಿಂದ ರೈಟ್ ಅವರು ಉತ್ತರ ಕೊಟ್ಟಿದ್ದರು. ಈ ಟ್ವೀಟ್ ಮಧ್ಯದಲ್ಲಿ ಅವರು ತಮಾಷೆಯ ಇಮೋಜಿಯನ್ನೂ ಸೇರಿಸಿದ್ದರಂತೆ.
ಒಂದು ವೇಳೆ ಇಲಾನ್ ಮಸ್ಕ್ ಅವರು ತಮಾಷೆಗೆ ಖರೀದಿ ಆಫರ್ ಮಾಡಿದ್ದರೆ ಇಂಥ ಇಮೋಜಿಗಳಿಂದ ಕೂಡ ಟ್ವೀಟ್ ಸರಿಯಾದ -ಉತ್ತರವಾಗಿರುತ್ತದೆ. ನೀವೂ ಕೂಡ ಇಂಥದ್ದೊಂದು ಪ್ರತಿಕ್ರಿಯೆ ಕೊಡಿ ಎಂದು ಟ್ವಿಟ್ಟರ್‌ನವರಿಗೆ ಕಾನ್ರಾಡ್ ಅವರು ಸಲಹೆ ಕೊಟ್ಟಿದ್ದಾರೆ.
ಅಂದಹಾಗೆ, ಎಲಾನ್ ಮಸ್ಕ್ ಅವರು ನ್ಯೂ ಸೈಂಟಿಸ್ಟ್ ಮ್ಯಾಗಜಿನ್ ಅನ್ನು ಕೊಳ್ಳಲಿಲ್ಲ. ಅಂತಿಮವಾಗಿ ಈ ನಿಯತಕಾಲಿಕೆಯನ್ನ ಡೈಲಿ ಮೇಲ್ ಪತ್ರಿಕೆ ಸಮೂಹ ಸಂಸ್ಥೆಯು 700 ಕೋಟಿ ರೂಪಾಯಿಗೆ ಖರೀದಿ ಮಾಡಿತಂತೆ.
ನಾನು ಖರೀದಿಸುತ್ತೇನೆ ಎಂದು ಎಲಾನ್ ಮಸ್ಕ್ ಬೆದರಿಕೆ ಹಾಕದರೆ ಹೆದರದಿರಿ. ಅವರು ಎಂದೂ ಖರೀದಿ ಮಾಡಲು ಬರುವುದಿಲ್ಲ. ಅವರ ಆಫರ್ ಅನ್ನು ತಮಾಷೆಯಾಗಿ ಪರಿಗಣಿಸಿ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿ ಎಂದು ಕಾನ್ರಾಡ್ ಕ್ವಿಲ್ಟ್ ಹಾರ್ಪರ್ ಹೇಳುತ್ತಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications