ಐಟಿ ಪಿಂಕ್ ಸ್ಲಿಪ್, ಇದು ದುಃಖಕರ ಎಂದ ಇನ್ಫಿ ಮೂರ್ತಿ
ಬೆಂಗಳೂರು, ಮೇ 26 : ಇದು ದುಃಖಕರ ಎಂದಿದ್ದಾರೆ ಇನ್ ಫೋಸಿಸ್ ನ ಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ. ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಐಟಿ ಕಂಪೆನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಕ್ಕೆ ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಗೆ ಇ ಮೇಲ್ ಮೂಲಕ ಪ್ರತಿಕ್ರಿಯಿಸಿರುವ ನಾರಾಯಣ ಮೂರ್ತಿ, ಇಂಥ ಘಟನೆ ದುಃಖಕರ ಎಂದಿದ್ದಾರೆ. ಇನ್ ಫೋಸಿಸ್ ನಲ್ಲಿ ನೂರಾರು ಮಂದಿ ಮಧ್ಯಮ ಹಂತ ಹಾಗೂ ಹಿರಿಯ ಅಧಿಕಾರಿಗಳಿಗೆ ಪಿಂಕ್ ಸ್ಲಿಪ್ ನೀಡುವುದಾಗಿ ಘೋಷಣೆ ಮಾಡಿದೆ.

ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಇತರ ಐಟಿ ಕಂಪೆನಿಗಳಾದ ವಿಪ್ರೋ ಹಾಗೂ ಕಾಗ್ನಿಜಂಟ್ ಕೂಡ ಇದೇ ಹಾದಿಯನ್ನು ತುಳಿದಿವೆ. ಅಮೆರಿಕ ಮೂಲದ ಕಾಗ್ನಿಜಂಟ್ ಕಂಪೆನಿಯು ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಹಿರಿಯ ಉಪಾಧ್ಯಕ್ಷರಿಗೆ ಸ್ವಯಂ ಆಗಿ ಕೆಲಸ ಬಿಡಲು ಆರರಿಂದ ಒಂಬತ್ತು ತಿಂಗಳ ವೇತನ ಪಾವತಿಸುವುದಾಗಿ ಘೋಷಿಸಿದೆ.
ವಾರ್ಷಿಕ ಮೌಲ್ಯಮಾಪನದ ನೆಪದಲ್ಲಿ ಆರುನೂರು ಉದ್ಯೋಗಿಗಳನ್ನು ಕೆಲಸ ಬಿಡುವಂತೆ ವಿಪ್ರೋದಲ್ಲಿ ಸೂಚಿಸಲಾಗಿದೆ. ಈ ಸಂಖ್ಯೆ ಎರಡು ಸಾವಿರದವರೆಗೆ ಏರಿಕೆ ಆಗಬಹುದು ಎಂಬ ಅಂದಾಜಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಉಳಿದಿರುವ ಕಾರಣಕ್ಕೆ ಮುಂದಿನ ಮೂರುವರ್ಷದಲ್ಲಿ ಐಟಿ ವಲಯದಲ್ಲಿ ವರ್ಷಕ್ಕೆ 1.75ರಿಂದ 2 ಲಕ್ಷ ಕೆಲಸ ಕಡಿತವಾಗಲಿದೆ ಎಂದು ಅಂದಾಜಿದೆ.












Click it and Unblock the Notifications