ಬೀದರ್: ಬಸ್ ಸೀಟಿಗಾಗಿ ಚಪ್ಪಲಿಯಲ್ಲೆ ಹೊಡೆದಾಡಿಕೊಂಡ ನಾರಿಯರು!
ಬೀದರ್, ಮೇ. 15: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ತಾನು ಭರವಸೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ರಾಜ್ಯದ ಕೋಟ್ಯಾಂತರ ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.
ಈ ಯೋಜನೆ ಜಾರಿಗೆ ಬಂದ ಬಳಿಕ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುವುದು ಹೆಚ್ಚಾಗಿದೆ. ಹೀಗಾಗಿ ಮಹಿಳೆಯರಿಗಿರುವ ಸೀಟ್‌ಗಳು ಯಾವಾಗಲು ತುಂಬಿರುತ್ತವೆ. ಸೀಟ್‌ಗಾಗಿ ಆಗ್ಗಾಗೆ ಜಗಳ ಕೂಡ ಆಗುತ್ತದೆ. ಇಂತಹದ್ದೆ ಘಟನೆ ಬೀದರ್‌ನಲ್ಲಿ ನಡೆದಿದೆ. ಆದರೆ, ಇದು ಬರಿ ಜಗಳ ಮಾತ್ರವಲ್ಲ.... ಚಪ್ಪಲಿಯಲ್ಲೇ ಹೊಡೆದಾಡಿಕೊಂಡಿದ್ದಾರೆ.

ಚಪ್ಪಲಿಯಲ್ಲಿ ಹೊಡೆದಾಡಿದ ನಾರಿಯರು!
ಬೀದರ್ ಜಿಲ್ಲೆಯಲ್ಲಿ ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಜೊತೆಗೆ ಬಟ್ಟೆ ಎಳೆದು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀದರ್‌ನಿಂದ ಕಲಬುರಗಿಗೆ ಹೋಗುವ ಬಸ್ಸಿನಲ್ಲಿ ಈ ಘಟನೆ ನಡೆದಿದೆ.
ಸರ್ಕಾರದ ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದಿದ್ದ ಇಬ್ಬರು ಮಹಿಳೆಯರು ಜೋರಾಗಿ ಕಿತ್ತಾಡಿದ್ದಾರೆ. ಮಕ್ಕಳು, ಮಹಿಳೆಯರು, ಗಂಡಸರು ತುಂಬಿದ್ದ ಬಸ್‌ನಲ್ಲಿ ಎಲ್ಲರ ಮುಂದೆ ಜೋರಾಗಿ ಕೆಟ್ಟ ಕೆಟ್ಟ ಮಾತುಗಳಲ್ಲಿ ಬೈದಾಡಿಕೊಂಡಿದ್ದಾರೆ. ಮಕ್ಕಳು ಭಯದಿಂದ ಜಗಳ ನೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಒಬ್ಬ ಯುವತಿ ಮೇಲೆ ಮೂರರಿಂದ ನಾಲ್ಕು ಜನ ಹಲ್ಲೆ ಮಾಡುತ್ತಿದ್ದಾರೆ. ಸೀಟಿನ ಮೇಲೆ ಕುಳಿದ್ದ ಯುವತಿ ಬಳಿ ಸೀಟು ನನ್ನದು ಎಂದು ಮತ್ತೊಬ್ಬ ಮಹಿಳೆ ಜಗಳಕ್ಕೆ ನಿಂತಿದ್ದಾರೆ. ನಾನು ಸೀಟು ಬಿಡಲ್ಲ ಎಂಬ ಮಾತಿಗೆ ಮಾತು ಬೆಳೆದು ಜಗಳ ದೊಡ್ಡದಾಗಿದೆ. ಬಳಿಕ ಚಪ್ಪಲಿ ತೆಗೆದುಕೊಂಡು ಹೊಡೆದಾಡುವ ಹಂತಕ್ಕೆ ಹೋಗಿದೆ.
ಬರೀ ಬೀಪ್ ಬೀಪ್ ಮಾತುಗಳ ಮೂಲಕ ಎಲ್ಲರೂ ಹೊಡೆದಾಡಿದ್ದಾರೆ, ನಿಂತಿದ್ದ ಮಹಿಳೆಯರು ಸೀಟಿನ ಮೇಲಿದ್ದ ಯುವತಿಯ ಬಟ್ಟೆ ಹಿಡಿದು ಹರಿದಿದ್ದಾರೆ. ಕೂದಲು ಹಿಡಿದುಕೊಂಡು ಎಲೆದಾಡಿದ್ದಾರೆ. ಬಳಿಕ ಅಲ್ಲೆ ಇದ್ದ ಪುರುಷರೊಬ್ಬರು ಇಬ್ಬರ ಜಗಳ ಬಿಡಿಸಿದ್ದಾರೆ. ವಿಡಿಯೋದಲ್ಲಿ ಯಾವುದೇ ಕಂಡಕ್ಟರ್ ಕಾಣಿಸಿಕೊಂಡಿಲ್ಲ.












Click it and Unblock the Notifications