Bidar atm robbery: ಬೀದರ್ ಎಟಿಎಂ ದರೋಡೆಕೋರರ ತಲೆಗೆ 5 ಲಕ್ಷ ರೂ. ಬಹುಮಾನ
ಬೀದರ್, ಫೆಬ್ರವರಿ 17: ಬೀದರ್ ನಗರದಲ್ಲಿ ಹಾಡಹಗಲೇ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ ಎಟಿಎಂಗೆ ಹಣ ತುಂಬುವ ವಾಹನದಿಂದ ಸುಮಾರು 93 ಲಕ್ಷ ರೂ. ಹಣವನ್ನು ದರೋಡೆ ಮಾಡಲಾಗಿದೆ. ಈ ದಾಳಿಯಲ್ಲಿ ಒಬ್ಬರು ಭದ್ರತಾ ಸಿಬ್ಭಂದಿ ಮೃತಪಟ್ಟಿದ್ದಾರೆ. ಈ ಪ್ರಕರಣದ ಇಬ್ಬರು ಆರೋಪಿಗಳು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.
ಪೊಲೀಸರ ಮಾಹಿತಿ ಪ್ರಕಾರ ತಲೆಮರೆಸಿಕೊಂಡಿರುವ ಇಬ್ಬರೂ ಆರೋಪಿಗಳು ಬಿಹಾರ ರಾಜ್ಯದವರು. ಅಮನ್ ಕುಮಾರ್, ಅಲೋಕ್ ಕುಮಾರ್ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಆದ್ದರಿಂದ ಈ ಇಬ್ಬರ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಕರ್ನಾಟಕ ಪೊಲೀಸರು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಅಮನ್ ಕುಮಾರ್, ಅಲೋಕ್ ಕುಮಾರ್ ಫೋಟೋವನ್ನು ಹಾಕಿ, ಈ ಇಬ್ಬರ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ಇಬ್ಬರು ಆರೋಪಿಗಳು ಬೀದರ್‌ನ ಎಟಿಎಂ ದರೋಡೆ ಪ್ರಕರಣ ಮಾತ್ರವಲ್ಲ, ಉತ್ತರ ಪ್ರದೇಶದಲ್ಲಿ ದರೋಡೆ ಪ್ರಕರಣವೊಂದರಲ್ಲಿಯೂ ಪೊಲೀಸರಿಗೆ ಬೇಕಾಗಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಅಮನ್ ಕುಮಾರ್, ಅಲೋಕ್ ಕುಮಾರ್ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹ ಮಾಡಿ, ಅವರನ್ನು ಬಂಧಿಸಲು ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಅಮನ್ ಕುಮಾರ್, ಅಲೋಕ್ ಕುಮಾರ್ ಬಗ್ಗೆ ಮಾಹಿತಿ ಇದ್ದರೆ ಕಲಬುರಗಿ 9480800030, ಬೀದರ್ 9480803401, ಬೀದರ್ ಡಿಎಸ್‌ಪಿ 9480803420 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಜನವರಿ 16ರಂದು ದರೋಡೆ: ಬೀದರ್ ನಗರದ ಹೃದಯ ಭಾಗದಲ್ಲಿ ಜನವರಿ 16ರಂದು ದರೋಡೆ ನಡೆದಿತ್ತು. ಎಸ್‌ಬಿಐ ಬ್ಯಾಂಕ್ ಎಟಿಎಂಗೆ ಹಣ ಹಾಕಲು ಬಂದಿದ್ದ ವಾಹನದ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ವಾಹನದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಮೃತಪಟ್ಟಿದ್ದರು. ಶಿವಕುಮಾರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ನಡೆದು ಒಂದು ತಿಂಗಳು ಕಳೆದಿದೆ. ಆರೋಪಿಗಳು ಹಣದೊಂದಿಗೆ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಬೇರೆ ಕಡೆಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಆದ್ದರಿಂದ ಪೊಲೀಸರು ಅಮನ್ ಕುಮಾರ್, ಅಲೋಕ್ ಕುಮಾರ್ ಹುಡುಕಾಟಕ್ಕೆ ಜನರ ಸಹಕಾರ ಕೇಳಿದ್ದಾರೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ದರೋಡೆ ಮಾಡಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ತನಿಖೆಯನ್ನು ಆಧರಿಸಿ ಅಮನ್ ಕುಮಾರ್, ಅಲೋಕ್ ಕುಮಾರ್ ಫೋಟೋವನ್ನು ಪತ್ತೆ ಹಚ್ಚಿ ಅವರ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಬೀದರ್‌ನಿಂದ ಪರಾರಿಯಾದ ದರೋಡೆಕೋರರು ಹೈದರಾಬಾದ್‌ನಲ್ಲಿಯೂ ತಮ್ಮನ್ನು ಹಿಡಿಯಲು ಬಂದ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ಬೇರೆ ರಾಜ್ಯದಲ್ಲಿ ಅವರು ಅಡಗಿರಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications