ಹರಕೆ ತೀರಿಸಲು 180 ಕಿ.ಮೀ. ಸೈಕಲ್ ತುಳಿಯಲಿದ್ದಾರೆ ಬಂಡೆಪ್ಪ ಕಾಶೆಂಪುರ!
ಬೀದರ್, ಅಕ್ಟೋಬರ್ 19 : ಸಹಕಾರ ಮತ್ತು ಎಪಿಎಂಸಿ ಸಚಿವ ಬಂಡೆಪ್ಪ ಖಾಶೆಂಪುರ ಅವರು ದೇವರ ಹರಕೆ ತೀರಿಸಲು ಮುಂದಾಗಿದ್ದಾರೆ. 180 ಕಿ.ಮೀ. ಸೈಕಲ್ ತುಳಿದುಕೊಂಡು ಅವರು ತುಳುಜಾಪುರಕ್ಕೆ ಭೇಟಿ ನೀಡಲಿದ್ದಾರೆ.
ಕರ್ನಾಟಕ ಸರ್ಕಾರದಲ್ಲಿ ಬಂಡೆಪ್ಪ ಖಾಶೆಂಪುರ ಅವರು ಸಚಿವರು. ಸರ್ಕಾರದ ವತಿಯಿಂದ ಅವರಿಗೆ ಕಾರು ನೀಡಲಾಗಿದೆ. ಅವರು ಬಯಸಿದರೆ ಕಾರಿನಲ್ಲಿಯೇ ಹೋಗಬಹುದು. ಆದರೆ, ಹರಕೆ ತೀರಿಸಲು ಅವರು ಸೈಕಲ್ ತುಳಿಯಲಿದ್ದಾರೆ.
ಅಕ್ಟೋಬರ್ 21ರಂದು ಬೀದರ್‌ನಿಂದ ಹೊರಡಲಿರುವ ಬಂಡೆಪ್ಪ ಕಾಶೆಂಪುರ ಅವರು 180 ಕಿ.ಮೀ.ಸೈಕಲ್‌ನಲ್ಲಿ ಪ್ರಯಾಣ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಬೀದರ್‌ನಲ್ಲಿ ಸೈಕಲ್ ತುಳಿದು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.

ಬೀದರ್‌ನಿಂದ ತುಳುಜಾಪುರಕ್ಕೆ ಈಗಾಗಲೇ 2 ಬಾರಿ ಸೈಕಲ್ ಮೇಲೆ ಅವರು ಹೋಗಿ ಬಂದಿದ್ದಾರೆ. ಸಚಿವರಾದ ಬಳಿಕ ಮೊದಲ ಬಾರಿಗೆ ಅವರು ಸೈಕಲ್ ಮೇಲೆ ಯಾತ್ರೆ ಹೊರಟಿದ್ದಾರೆ. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗಲೂ ಅವರು ತುಳುಜಾಪುರಕ್ಕೆ ಸೈಕಲ್ ಮೂಲಕ ಹೋಗಿ ಬರುತ್ತಾರೆ.
ಮೂರು ಹಗಲು, ಮೂರು ರಾತ್ರಿಯನ್ನು ಅವರು ಸೈಕಲ್ ಮೂಲಕ ಕ್ರಮಿಸಿ ತುಳುಜಾಪುರಕ್ಕೆ ತಲುಪಲಿದ್ದಾರೆ. ಬಡವ, ಶ್ರೀಮಂತ ಎಂಬ ಭೇದವಿದಲ್ಲದೇ ಲಕ್ಷಾಂತರ ಭಕ್ತರು ತುಳುಜಾಭವಾನಿ ದೇವಿಯನ್ನು ಆರಾಧಿಸುತ್ತಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, '2004, 2008ರಲ್ಲಿ ಗೆದ್ದಾಗ ಎರಡು ಬಾರಿ ಸೈಕಲ್ ಮೂಲಕ ಹೋಗಿ ದೇವಿಯ ದರ್ಶನ ಪಡೆದಿದ್ದೆ. 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಈಗ ಹೋಗುತ್ತಿದ್ದೇನೆ. ಅಕ್ಟೋಬರ್ 21ರಂದು ಹೊರಡಲಿದ್ದೇನೆ' ಎಂದು ಹೇಳಿದ್ದಾರೆ.












Click it and Unblock the Notifications