BasavaKalyan Assembly Constituency: ಶರಣರ ನಾಡು ಬಸವ ಕಲ್ಯಾಣದಲ್ಲಿ ಗೆಲ್ಲುವವರು ಯಾರು? ತ್ರಿಪಕ್ಷಗಳಿಗೂ ಸಮಾನ ಅವಕಾಶ!
ಶರಣರ ನಾಡು ಬಸವ ಕಲ್ಯಾಣದಲ್ಲಿ ಈ ಬಾರಿ ಮೂರು ಪಕ್ಷಗಳಿಗೂ ಸಮಾನ ಅವಕಾಶಗಳಿದ್ದು, ಕ್ಷೇತ್ರದ ಕುರಿತ ವರದಿ ಇಲ್ಲಿದೆ.
ಬಸವ ಕಲ್ಯಾಣ.. ಬೀದರ್ ಜಿಲ್ಲೆಯಲ್ಲಿ ಬರುವ ಪ್ರಮುಖ ವಿಧಾನಸಭಾ ಕ್ಷೇತ್ರ. ಸಾಮಾಜಿಕ ಸಮಾನತೆಯ ಜೊತೆಗೆ ಲಿಂಗ ಸಮಾನತೆಯನ್ನು ಎತ್ತಿ ಹಿಡಿದು, ಮಹಿಳೆಯರನ್ನು ಗೌರವದಿಂದ ಕಂಡ ಬಸವಾದಿ ಶರಣ ಕ್ರಾಂತಿಯ ನೆಲ. ಇಲ್ಲಿನ ಮತದಾರರು ಎರಡೆರಡು ಬಾರಿ ಸತತವಾಗಿ ಮಹಿಳೆಯನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದ ಇತಿಹಾಸ ಹೊಂದಿದ್ದಾರೆ. ಅದು ಮೊದಲ ಚುನಾವಣೆಯಲ್ಲಿಯೇ ಎಂದರೇ ನೀವು ನಂಬಲೇಬೇಕು. ಗಡಿ ಜಿಲ್ಲೆ ಬೀದರ್‌ನಲ್ಲಿ ಬರುವ ಈ ಕ್ಷೇತ್ರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯನ್ನು ಹೊಂದಿದೆ.
ಬಸವಕಲ್ಯಾಣದ ಕೈಗಾರಿಕಾ ಪ್ರದೇಶದಲ್ಲಿ ಅತಿ ಹೆಚ್ಚು ಲಾರಿ, ಟ್ರಕ್‌ಗಳನ್ನು ತಯಾರಿಸಲಾಗುತ್ತಿದ್ದು, ಲಾರಿ ಮತ್ತು ಟ್ರಕ್‌ಗಳ ತಯಾರಿಗೆ ಇದು ಫೇಮಸ್ ಆಗಿದೆ. ಬಳೆಯನ್ನು ಕೂಡ ಇಲ್ಲಿ ಹೆಚ್ಚು ತಯಾರಿಸಲಾಗುತ್ತಿದ್ದು, ಸ್ವಂತ ಉದ್ದಿಮೆಯನ್ನು ಸ್ಥಾಪಿಸುವ ಮೂಲಕ ಸ್ವಾವಲಂಭಿ ಜೀವನವನ್ನು ಇಲ್ಲಿನ ಜನ ನಡೆಸುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ನೀರಾವರಿ ಸೌಲಭ್ಯ ಇಲ್ಲದ ಕಾರಣ ಸೋಯಾ, ಉದ್ದು, ಹೆಸರಿನಂತಹ ಬೆಳೆಗಳನ್ನು ಬೆಳೆಯಲಾಗುತ್ತದೆ. ಚೆಂಡು ಹೂ, ಕಬ್ಬನ್ನು ಕೂಡ ಇಲ್ಲಿನ ರೈತರು ಬೆಳೆಯುತ್ತಿದ್ದು, ಪ್ರಮುಖವಾಗಿ ಪಾಲಿಹೌಸ್ ಕೃಷಿ ಮೂಲಕ ಸಸಿ ಬೆಳೆಸಿ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಾಗಿ ಕಾಣುತ್ತದೆ.

ಬಸವ ಕಲ್ಯಾಣದ ರಾಜಕೀಯ ಇತಿಹಾಸ!
1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿಯೇ ಈ ಕ್ಷೇತ್ರದಿಂದ ಅನ್ನಪೂರ್ಣಬಾಯಿ ಎಂಬ ಮಹಿಳೆ ವಿಧಾನಸಭೆಗೆ ಆಯ್ಕೆಯಾಗಿದ್ದು ಇತಿಹಾಸ. 1962ರಲ್ಲಿಯೂ ಅನ್ನಪೂರ್ಣಬಾಯಿ ಅವರೇ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. 1989 ರಿಂದ 2013ರವರೆಗೆ ಒಟ್ಟು ಆರು ಬಾರಿ ಜೆಡಿಎಸ್ ಅಭ್ಯರ್ಥಿಗಳು ಇಲ್ಲಿ ಸತತವಾಗಿ ಜಯಗಳಿಸುತ್ತಾ ಬಂದಿದ್ದರು. ಆದರೆ, 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ನಾರಾಯಣ ರಾವ್ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ 2021ರಲ್ಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು.
2021ರಲ್ಲಿ ನಡೆದ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗಾರ್ ಗೆಲುವು ಸಾಧಿಸಿದ್ದರು. 71,012 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಮಾಲಾ ಬಿ ನಾರಾಯಣ ರಾವ್ ವಿರುದ್ಧ 20,629 ಮತಗಳಿಂದ ಗೆಲುವು ಸಾಧಿಸಿದರು. ಅನುಕಂಪದ ಅಲೆ ಇದ್ದರೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ ನಾರಾಯಣರಾವ್ ಅವರ ಪತ್ನಿ ಮಾಲಾ ಅವರು 50,383 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಜೆಡಿಎಸ್‌ನಿಂದ ಸೈಯದ್ ಯಾಸ್ರುಬ್ ಅಲಿ ಕ್ವಾದರಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2018ರ ಸಾರ್ವತ್ರಿಕ ಚುನಾವಣೆಯಲ್ಲಿ ನಾರಾಯಣ ರಾವ್ 61,425 ಮತಗಳನ್ನು ಪಡೆದುಕೊಂಡಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ 44,153 ಮತಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿ ಪಿಜಿಆರ್ ಸಿಂಧ್ಯಾ 31,414 ಮತಗಳನ್ನು ಗಳಿಸಿದ್ದರು. ಈ ಚುನಾವಣೆಯಲ್ಲಿ ನಾರಾಯಣ ರಾವ್ -17,272 ಮತಗಳ ಅಂತರದಿಂದ ಜಯ ಗಳಿಸಿದ್ದರು.
ಯಾರಾರು ಟಿಕೆಟ್ ಆಕಾಂಕ್ಷಿಗಳು?
ಬಿಜೆಪಿಯಿಂದ ಶರಣು ಸಲಗಾರ್‌ಗೆ ಮತ್ತೊಮ್ಮೆ ಬಸವ ಕಲ್ಯಾಣದ ಟಿಕೆಟ್ ಬಹುತೇಕ ಖಚಿತ. ಆದರೆ, ಶಾಸಕ ಶರಣು ಸಲಗಾರ್ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ಅವರ ನಡುವಿನ ಮನಸ್ತಾಪದಿಂದ ಹೊಸ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಆದರೆ, ಟಿಕೆಟ್ ಶರಣು ಸಲಗಾರ್‌ಗೆ ಫಿಕ್ಸ್ ಎಂಬಂತ ವಾತಾವರಣವಿದೆ. ಇನ್ನೂ, ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಧರಂಸಿಂಗ್ ಪುತ್ರ ವಿಜಯ್ ಸಿಂಗ್, ಮಾಜಿ ಶಾಸಕ ನಾರಾಯಣ ರಾವ್ ಅವರ ಪತ್ನಿ ಮಾಲಾ, ಧನರಾಜ್ ತಾಳಂಪಳ್ಳಿ ಹಾಗೂ ಆನಂದ್ ದೇವಪ್ಪ ಅವರು ಟಿಕೆಟ್‌ಗಾಗಿ ಫೈಟ್ ನಡೆಸಿದ್ದಾರೆ. ಜೆಡಿಎಸ್‌ನಿಂದ ಯಸ್ರಬ್ ಅಲಿ ಖಾದ್ರಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾದರೂ ಅಚ್ಚರಿಯಿಲ್ಲ.

ಜಾತಿ ಲೆಕ್ಕಾಚಾರ?
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಜಾತಿ ಲೆಕ್ಕಾಚಾರ ನೋಡುವುದಾದರೆ, ಇಲ್ಲಿ ಲಿಂಗಾಯತ, ಮರಾಠರ ಮತಗಳೇ ಪ್ರಮುಖ ಆಗುತ್ತವೆ. ಲಿಂಗಾಯತರು 62,000 ಇದ್ದರೆ, ಮರಾಠ ಸಮುದಾಯದವರು 40,000ದಷ್ಟು ಇದ್ದಾರೆ. ಮುಸ್ಲಿಮರು 36,000 ಇದ್ದು, ಕುರುಬರು 31,000ದಷ್ಟು ಇದ್ದಾರೆ. ಎಸ್‌ಸಿ-ಎಸ್‌ಟಿ ಸಮುದಾಯ 30,000 ಇದ್ದು, ಲಂಬಾಣಿ ಸಮುದಾಯ 8000, ಕ್ರೈಸ್ತರು - 8,500, ರೆಡ್ಡಿ ಸಮುದಾಯ - 8,000 ಇದ್ದರೆ, ಇತರರು 15,000ದಷ್ಟು ಇದ್ದಾರೆ.











Click it and Unblock the Notifications