ಬೀದರ್ : ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಲೋಹದ ಹಕ್ಕಿಗಳು
ಬೀದರ್, ಜುಲೈ 25 : ಬೀದರ್ ವಾಯುನೆಯಲ್ಲಿ ನಡೆದ ವೈಮಾನಿಕ ಪ್ರದರ್ಶನ ಜನರ ಕಣ್ಮನ ಸೆಳೆಯಿತು.
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳು ಚಿತ್ತಾರವನ್ನು ಮೂಡಿಸಿದವು.
ಜುಲೈ 24ರಂದು ನಡೆದ ವೈಮಾನಿಕ ಪ್ರದರ್ಶನ ಮೈನವಿರೇಳಿಸುವಂತಿತ್ತು. ವೈಮಾನಿಕ ಪ್ರದರ್ಶನಕ್ಕೆ ಶಾಲಾ ವಿದ್ಯಾರ್ಥಿಗಳು, ಪಾಲಕರು, ವಾಯುನೆಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕ್ಷಿಯಾದರು.

ಬಾನಂಗಳದಲ್ಲಿ ವಿಮಾನಗಳ ಹಾರಾಟ ವೀಕ್ಷಿಸಿದ ವಿದ್ಯಾರ್ಥಿಗಳು ಜಯಘೋಷಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. ವಿಮಾನಗಳ ಹಾರಾಟವನ್ನು ಕಣ್ಣು ಮಿಟುಕಿಸದೇ ನೋಡುತ್ತಾ ಜೈ ಹಿಂದ್, ವಂದೇ ಮಾತರಂ ಎನ್ನುವ ಘೋಷಣೆಗಳನ್ನು ಕೂಗಿದರು.
ಏರ್ ಫೋರ್ಸ್ ಶಾಲೆ, ಕೇಂದ್ರೀಯ ವಿದ್ಯಾಲಯ, ಸಂಸ್ಕಾರ ಸ್ಕೂಲ್, ಗುರುನಾನಕ್, ಗ್ಲೋಬಲ್ ಸೈನಿಕ್ ಪಬ್ಲಿಕ್ ಶಾಲೆಗಳ ಒಟ್ಟು 600 ವಿದ್ಯಾರ್ಥಿಗಳು ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಂಡರು.

ದೊಡ್ಡ ಪರದೆಯಲ್ಲಿ ಕಾರ್ಗಿಲ್ ಯುದ್ದದ ಸನ್ನಿವೇಶಗಳನ್ನು ಬಿತ್ತರಿಸಲಾಗುತ್ತಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಗಿಲ್ ವಿಜಯೋತ್ಸವ : ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಲೇಹ್ ಹೆದ್ದಾರಿ ತನಕ ಬಂದಿದ್ದ ಪಾಕಿಸ್ತಾನದ ಸೇನೆಯನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಯುದ್ಧದಲ್ಲಿ 527 ಭಾರತೀಯ ಯೋಧರ ಬಲಿದಾನವಾಯಿತು.
ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ ಜುಲೈ 26ರಂದು 'ಆಪರೇಷನ್ ವಿಜಯ್' ಯಶಸ್ವಿ ಎಂದು ಘೋಷಣೆ ಮಾಡಿತು. ಅಂದಿನಿಂದ ಕಾರ್ಗಿಲ್ ವಿಜಯೋತ್ಸವ ಆಚರನೆ ಮಾಡಲಾಗುತ್ತಿದೆ.












Click it and Unblock the Notifications