ಬಸವಣ್ಣನ ಐಕ್ಯಸ್ಥಳದಲ್ಲಿನ ಇಷ್ಟಲಿಂಗದಲ್ಲಿ ಬಿರುಕು
ಬೀದರ್, ಫೆಬ್ರವರಿ 19 : ಕೂಡಲ ಸಂಗಮದಲ್ಲಿರುವ ಬಸವಣ್ಣನ ಐಕ್ಯ ಮಂಟಪದ ಐಕ್ಯಸ್ಥಳದಲ್ಲಿನ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಲಿಂಗದ ಸುತ್ತಲೂ ಗಾಜಿನ ಗೋಡೆಯನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.
ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿ ಬಸವಣ್ಣನ ಐಕ್ಯ ಮಂಟಪವಿದೆ. ಈ ಸ್ಥಳದಲ್ಲಿರುವ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಐಕ್ಯಸ್ಥಳಕ್ಕೆ ಆಗಮಿಸುವ ಜನರು ನಾಣ್ಯಗಳನ್ನು ಎಸೆಯುತ್ತಾರೆ. ಆದ್ದರಿಂದ, ಬಿರುಕು ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಕಾಣಿಕೆಯನ್ನು ಹುಂಡಿಯಲ್ಲಿ ಹಾಕಿ, ನಾಣ್ಯವನ್ನು ಎಸೆಯಬಾರದು ಎಂದು ಫಲಕವನ್ನು ಅಳವಡಿಸಿದೆ. ಆದರೆ, ಕೆಲವು ಭಕ್ತರು ನಾಣ್ಯವನ್ನು ಲಿಂಗದ ಮೇಲೆ ಎಸೆಯುವುದು ಇನ್ನೂ ಕಡಿಮೆಯಾಗಿಲ್ಲ.

'ಐಕ್ಯ ಸ್ಥಳದಲ್ಲಿರುವ ಲಿಂಗವನ್ನು ರಕ್ಷಣೆ ಮಾಡುವ ಕೆಲವನ್ನು ಮಾಡುತ್ತೇವೆ. ಲಿಂಗದ ಸುತ್ತಲೂ ಗಾಜಿನ ಗೋಡೆಯನ್ನು ನಿರ್ಮಿಸಿ ನಾಣ್ಯ ಎಸೆಯದಂತೆ ತಡೆಯಲು ಚಿಂತನೆ ನಡೆಸಲಾಗಿದೆ' ಎಂದು ತಹಶೀಲ್ದಾರ್ ಆರ್.ಎಸ್.ಹಿರೇಮಠ ಹೇಳಿದ್ದಾರೆ.
'ಮುಗ್ಧ ಭಕ್ತರ ಧಾರ್ಮಿಕ ಆಚರಣೆಯಿಂದಾಗಿ ಮೂಲ ಐಕ್ಯಮಂಟಪ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ. ಧಕ್ಕೆ ಆಗದಂತೆ ತಡೆಯುವ ಕೆಲಸ ತುರ್ತಾಗಿ ಆಗಬೇಕು' ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.












Click it and Unblock the Notifications