Breaking: ಭಾರೀ ಮಳೆ, ಬೀದರ್‌ನಲ್ಲಿ ರಜೆ ಘೋಷಣೆ, ಆರೆಂಜ್ ಅಲರ್ಟ್
ಬೀದರ್, ಸೆಪ್ಟೆಂಬರ್ 02: ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ಸೆಪ್ಟೆಂಬರ್ 2ರ ಸೋಮವಾರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪೊಲೀಸರು ಸಹ ಜಿಲ್ಲೆಯ ಜನರ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು ಎಂದು ಸೂಚನೆ ನೀಡಲಾಗಿದೆ.
ಬೀದರ್ ಸಂಸದ ಸಾಗರ್ ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಅಸ್ನಾ ಚಂಡಮಾರುತದಿಂದ ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರೆದಿರುವುದರಿಂದ, ಬೀದರ್ ಲೋಕಸಭಾ ಕ್ಷೇತ್ರದ ಎಲ್ಲಾ ರೈತರು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿರಬೇಕು ಮತ್ತು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ' ಎಂದು ಹೇಳಿದ್ದಾರೆ.

'ಮಳೆಯಿಂದಾಗಿ ಸಂಭವಿಸಿದ ಬೆಳೆ ನಷ್ಟವನ್ನು ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಬೇಕು. ಅಲ್ಲದೆ, ಕ್ಷೇತ್ರದ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಜನರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದ್ದೇನೆ. ಮಳೆ 2 ಸೆಪ್ಟೆಂಬರ್ ವರೆಗೆ ಮುಂದುವರಿಯುವ ನಿರೀಕ್ಷೆಯಿದ್ದು, ಅದು ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯೂ ಇದೆ' ಎಂದು ಪೋಸ್ಟ್ ಹಾಕಿದ್ದಾರೆ.
ಅಂಗನವಾಡಿಗಳಿಗೆ ರಜೆ: ಭಾರೀ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಅಂಗನವಾಡಿಗಳಿಗೆ ಸೆಪ್ಟೆಂಬರ್ 2ರ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದೆ.
ಸತತವಾಗಿ ಮಳೆ ಸುರಿಯುತ್ತಿರುವುದರಿಂದ ದಿನಾಂಕ 02-09-2024ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದ್ದು, ಜಿಲ್ಲಾಧಿಕಾರಿಗಳು, ಬೀದರ್ ಅವರ ದೂರವಾಣಿ ಆದೇಶವನ್ನು ಉಲ್ಲೇಖ ಮಾಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ. ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮಕ್ಕಳಿಗೆ ಅಂಗನವಾಡಿ ಕೇಂದ್ರಕ್ಕೆ ಹಾಜರಾಗಲು ಅನಾನೂಕುಲವಾಗುತ್ತಿರುವ ಪ್ರಯುಕ್ತ ಮುಂಜಾಗೃತ ಕ್ರಮವಾಗಿ ದಿನಾಂಕ 02-09-2024ರಂದು (ಸೋಮವಾರ) ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ ಎಂದು ಆದೇಶ ಹೇಳಿದೆ.
ಎಚ್ಚರಿಕೆ ನೀಡಿದ ಪೊಲೀಸರು: ಭಾರೀ ಮಳೆ ಹಿನ್ನಲೆಯಲ್ಲಿ ಬೀದರ್ ಜಿಲ್ಲಾ ಪೊಲೀಸರು ಜನರಿಗೆ ಎಚ್ಚರಿಕೆಗಳನ್ನು ನೀಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಸತತವಾಗಿ ಮಳೆ, ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸತತವಾಗಿ ಧಾರಾಕಾರವಾಗಿ ಮಳೆಯಾಗುತ್ತಿದ್ದರಿಂದ, ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಬೀದರ್ ಜಿಲ್ಲಾ ಪೊಲೀಸರಿಂದ ಜಿಲ್ಲೆಯ ನಾಗರೀಕರಲ್ಲಿ ಮನವಿ. ತಾವುಗಳು ಜಾಗೃತರಾಗಿರಿ ಮತ್ತು ಅನಾವಶ್ಯಕವಾಗಿ ಬೇರೆ, ಬೇರೆ ಊರುಗಳಿಗೆ ಓಡಾಡುವುದನ್ನು ಸಾಧ್ಯವಾದಷ್ಟು ಮುಂದೂಡಿ ಎಂದು ತಿಳಿಸಿದ್ದಾರೆ.
ರಸ್ತೆಯ ಮೇಲೆ, ಬ್ರಿಡ್ಜ್‌ಗಳ ಮೇಲಿಂದ ನೀರು ತುಂಬಿ ಹರಿಯುತ್ತಿರುವಾಗ ದಾಟಲು ಪ್ರಯತ್ನಿಸದಿರಿ. ಹೊಲ ಗದ್ದೆಗಳಿಗೆ ಹೋಗುವ ಸಂದರ್ಭದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುವಾಗ ದಾಟಲು ಪ್ರಯತ್ನಿಸದಿರಿ ಎಂದು ತಿಳಿಸಿದ್ದಾರೆ.
ವಿದ್ಯುತ್ ಕಂಬಗಳ ಹತ್ತಿರ ನೀರು ನಿಂತಿದ್ದರೆ ಅಲ್ಲಿಗೆ ಹೋಗಬೇಡಿ. ಮೇಲೆ ಸೂಚಿಸಿದ ನಿಯಮಗಳನ್ನು ತಪ್ಪದೇ ಪ್ರತಿಯೊಬ್ಬರು ಪಾಲಿಸಿ ಹಾಗೆ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಲು ಮನವಿ ಮಾಡಿದ್ದಾರೆ.












Click it and Unblock the Notifications