Narendra Modi: ಅಂಬೇಡ್ಕರ್‌ರನ್ನು ರಾಷ್ಟ್ರದ್ರೋಹಿ ಎಂದಿದ್ದ ಕಾಂಗ್ರೆಸ್, ಇನ್ನು ನನ್ನ ಬಿಟ್ಟೀತೆ?; ನರೇಂದ್ರ ಮೋದಿ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗಿದ್ದು, ಮೇ 10ರಂದು ನಡೆಯಲಿರುವ ಮತದಾನಕ್ಕೂ ಮುನ್ನ ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಇದೀಗ ಕರ್ನಾಟಕ ಚುನಾವಣಾ ಕುರುಕ್ಷೇತ್ರದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವೇಶಿಸಿದ್ದು, ಇಂದಿನಿಂದ (ಏಪ್ರಿಲ್ 29) ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಬೀದರ್‌ನ ಹುಮ್ನಾಬಾದ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಈ ವೇಳೆ ವಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನರೇಂದ್ರ ಮೋದಿ, "ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ನವರು ನನ್ನನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಈವರೆಗೆ ನನಗೆ ವೈಯಕ್ತಿಕವಾಗಿ 91 ಬಾರಿ ನಿಂದಿಸಿದ್ದಾರೆ. ಒಳ್ಳೆಯ ಕೆಲಸ ಮಾಡುವವರಿಗೆ ನಿಂದನೆ ಮಾಡುವುದು ಕಾಂಗ್ರೆಸ್‌ನ ಚಾಳಿಯಾಗಿದೆ," ಎಂದು ವಾಗ್ದಾಳಿ ನಡೆಸಿದರು.
ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ನಾಯಕರ ಹೆಸರೇಳದೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು. ವಿಪಕ್ಷ ನಾಯಕರ ವಿವಾದಾತ್ಮಕ ಹೇಳಿಕೆಗಳನ್ನೇ ತಮ್ಮ ಅಸ್ತ್ರಗಳನ್ನಾಗಿ ಮಾಡಿಕೊಳ್ಳುವ ಚಾಕಚಕ್ಯತೆ ನರೇಂದ್ರ ಮೋದಿ ಅವರಿಗಿದೆ. ಇದೀಗ ಇತ್ತೀಚಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ "ವಿಷದ ಹಾವು' ಎಂಬ ಹೇಳಿಕೆಗೂ ಪ್ರಧಾನಿ ಮೋದಿ ತಮ್ಮದೇ ಧಾಟಿಯ ಮೂಲಕ ಟಾಂಗ್ ನೀಡಿದರು.

"ಮೊದಲು ನನ್ನನ್ನು ಚೌಕೀದಾರ್ ಚೋರ್ ಎಂದರು. ನನಗೆ ನಿಂದಿಸಿದಾಗಲೆಲ್ಲ ಕಾಂಗ್ರೆಸ್‌ಗೆ ಜನ ಶಿಕ್ಷೆ ನೀಡಿದ್ದಾರೆ. ಮಹಾಪುರುಷ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೂಡ ಕಾಂಗ್ರೆಸ್‌ನವರು ನಿಂದಿಸಿದ್ದಾರೆ. ಅಂಬೇಡ್ಕರ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ, ದಗಾಕೋರ ಎಂದೆಲ್ಲಾ ನಿಂದಿಸಿದ್ದಾರೆ. ಅವರಂತ ಮಹಾನ್ ಪುರುಷರನ್ನೇ ಬಿಟ್ಟಿಲ್ಲ, ಇನ್ನು ನನ್ನನ್ನು ಬಿಡ್ತಾರಾ," ಎಂದು ಪ್ರಧಾನಿ ಮೋದಿ ಆರೋಪಿಸಿದರು.
"ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರ್ಕಾರವಿದ್ದಾಗ ಏನೂ ಮಾಡಿರಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಹಿಂದುಳಿದ ಸಮುದಾಯಗಳಿಗೆ ಭೂಮಿ ಹಕ್ಕು, ಮೀಸಲಾತಿ ನೀಡಿದ್ದೇವೆ. ನಮ್ಮ ಬಿಜೆಪಿ ಸರ್ಕಾರ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಿದೆ. ಕಾಂಗ್ರೆಸ್ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಸಮಾಜದಲ್ಲಿ ಕಂದಕ ಸೃಷ್ಟಿಸುವ ಕೆಲಸದಲ್ಲಿ ಕಾಂಗ್ರೆಸ್ ನಿರತವಾಗಿದೆ," ಎಂದು ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರೈತರಿಗೆ ಕಾಂಗ್ರೆಸ್‌ನಿಂದ ಅನ್ಯಾಯ
"ಕೇಂದ್ರ ಸರ್ಕಾರ ಪ್ರತಿ ರೈತರ ಖಾತೆಗೆ 6 ಸಾವಿರ ರೂ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಪ್ರಾರಂಭಿಸಿತು. ಬಳಿಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರವೂ 4 ಸಾವಿರ ರೂ. ಸೇರಿಸಿ ನೀಡಿತು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ಮಾಡುವುದಾಗಿ ಸುಳ್ಳು ಹೇಳಿ ರೈತರಿಗೆ ವಂಚಿಸಿದೆ. ಇದು ಕಾಂಗ್ರೆಸ್‌ನ ಅಸಲೀ ಮುಖವಾಗಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕ ನಂ.1
"ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ಧಿಗೆ ವೇಗ ಸಿಗಲಿದೆ. ಡಬಲ್ ಎಂಜಿನ್ ಸರ್ಕಾರದ ಶಕ್ತಿಯಿಂದ ಕರ್ನಾಟಕವನ್ನು ನಂಬರ್ 1 ಮಾಡುವುದನ್ನು ಯಾರೂ ತಡೆಯಲಾಗುವುದಿಲ್ಲ. ಡಬಲ್ ಎಂಜಿನ್ ಸರ್ಕಾರದ ಪ್ರಯೋಜನವೆಂದರೆ, ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿಯೂ ವಿದೇಶಿ ಹೂಡಿಕೆ ಹೆಚ್ಚಾಗಿದೆ," ಎಂದು ಪ್ರಧಾನಿ ಮೋದಿಯವರು ಹೇಳಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications