Bidar Lok Sabha Election 2024 Results: ಸಾಗರ್ ಖಂಡ್ರೆಗೆ ಸಿಗುತ್ತಾ ಗೆಲುವು?
ಕಲ್ಯಾಣ ಕರ್ನಾಟಕದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಬೀದರ್ ಕೂಡ ಒಂದಾಗಿದೆ. ಹಲವು ಕಾರಣಗಳಿಂದ ಈ ಬಾರಿ ಬೀದರ್ ಕ್ಷೇತ್ರ ಗಮನ ಸೆಳೆಯುತ್ತಿದೆ.
ಕೇಂದ್ರ ಸಚಿವ ಭಗವಂತ ಖೂಬಾ ಇಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರೆ, ಎದುರಾಳಿಯಾಗಿ ಕಾಂಗ್ರೆಸ್‌ನಿಂದ 26 ವರ್ಷದ ಯುವಕ ಸಾಗರ್ ಖಂಡ್ರೆಗೆ ಟಿಕೆಟ್ ಸಿಕ್ಕಿದೆ. ತಂದೆ ಸಚಿವ ಈಶ್ವರ್ ಖಂಡ್ರೆ ಬಲ ಇರುವ ಕಾರಣ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.

ಸ್ವಾತಂತ್ಯ್ರಾನಂತರ ಹಲವು ದಶಕಗಳ ಕಾಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೀದರ್ 1991ರಲ್ಲಿ ಬಿಜೆಪಿ ತೆಕ್ಕೆಗೆ ಬಂದಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಬೃಹತ್ ಮುನ್ನಡೆಯೊಂದಿಗೆ ಗೆದ್ದಿರುವ ಭಗವಂತ ಖೂಬಾ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದರೆ. ಯುವಕ ಸಾಗರ್ ಖಂಡ್ರೆ ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ.
ಬೀದರ್ ಕ್ಷೇತ್ರ ಪರಿಚಯ
ಬೀದರ್ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ, ಆಳಂದ, ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್, ಬೀದರ್ ದಕ್ಷಿಣ, ಭಾಲ್ಕಿ ಮತ್ತು ಔರಾದ್ ಕ್ಷೇತ್ರಗಳು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಈ 8 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದರೆ, ಉಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿ ಹೆಚ್ಚಿನ ಶಾಸಕರ ಬಲ ಹೊಂದಿರುವ ಕಾರಣ, ಕಾಂಗ್ರೆಸ್‌ಗೆ ಪೈಪೋಟಿ ಕೊಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ಈ ಬಾರಿ ಗೆಲುವು ಯಾರಿಗೆ?
ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ. 1991ರಿಂದ ಇಲ್ಲಿ ಎರಡು ಬಾರಿ ಮಾತ್ರ ಬಿಜೆಪಿ ಸೋತಿದ್ದು, ಉಳಿದಂತೆ ಪ್ರತಿಬಾರಿ ಗೆಲುವು ಸಾಧಿಸಿದೆ. ಇಲ್ಲಿ ಬಿಜೆಪಿ ಸೋಲಿಸುವುದು ಅಷ್ಟು ಸುಲಭವಲ್ಲ, ಆದರೆ ಈ ಬಾರಿ ಕಾಂಗ್ರೆಸ್ ಬಲಿಷ್ಠವಾಗಿರುವ ಕಾರಣ ಬಿಜೆಪಿ ಗೆಲ್ಲುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ.
ಭಗವಂತ್ ಖೂಬಾ ಮತ್ತು ಸಾಗರ್ ಖಂಡ್ರೆ ಇಬ್ಬರೂ ಕೂಡ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿ ಹೆಚ್ಚಾಗಿ ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ದಲಿತ, ಹಿಂದುಳಿದ ಮತ್ತು ಮುಸ್ಲಿಂ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಮೋದಿ ಅಲೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಭಗವಂತ ಖೂಬಾ ವಿಶ್ವಾಸ ಹೊಂದಿದ್ದರೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ನೆಚ್ಚಿಕೊಂಡು ಮತದಾರರ ಮನಗೆಲ್ಲುವ ವಿಶ್ವಾಸದಲ್ಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದ್ದು, ಮತದಾರ ಯಾರಿಗೆ ಮಣೆಹಾಕುತ್ತಾನೆ ಎನ್ನುವುದು ಬಹಿರಂಗವಾಗಲಿದೆ.












Click it and Unblock the Notifications