ರಫೇಲ್ ಡೀಲ್ ಹಿಂದೆ ಏನೋ ಐಬಿದೆ : ಡಾ. ಎಂಎಂ ಸಿಂಗ್ ಕಿಡಿನುಡಿ
ಇಂದೋರ್, ನವೆಂಬರ್ 21 : ಕಳೆದ ನಾಲ್ಕೂವರೆ ವರ್ಷಗಳಿಂದ ಭಾರತ ಅತ್ಯಂತ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ಯುವಕರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಸದ್ಯದ ಪರಿಸ್ಥಿತಿಯನ್ನು ವ್ಯಾಖ್ಯಾನಿಸಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ ನಲ್ಲಿ ಬುಧವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಮನಮೋಹನ ಸಿಂಗ್ ಅವರು, ದೇಶ ಎದುರಿಸುತ್ತಿರುವ ಉದ್ಯೋಗದ ಸಮಸ್ಯೆ, ಸಿಬಿಐ ಮತ್ತು ಆರ್ಬಿಐ ತಾಕಲಾಟ, ಅಪನಗದೀಕರಣ ಸೃಷ್ಟಿಸಿದ ಏರುಪೇರಿನ ವಿಷಯಗಳನ್ನು ಎತ್ತಿಕೊಂಡು ಕೇಂದ್ರ ಸರಕಾರವನ್ನು ಜಾಲಾಡಿದರು.
ನರೇಂದ್ರ ಮೋದಿ ಅವರ ಸರಕಾರ ಅಪನಗದೀಕರಣವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ, ಕಾಲದಿಂದ ಕಾಲಕ್ಕೆ ಹೊಸಹೊಸ ವಾದ ಮಂಡಿಸುತ್ತ ಸುಳ್ಳಿನ ಕಟ್ಟಡವನ್ನೇ ನಿರ್ಮಿಸುತ್ತಿದೆ. ಆದರೆ ಅಪನಗದೀಕರಣ ದೇಶ ಕಂಡ ಬಹುದೊಡ್ಡ ಸೋಲು. ಅದರ ಯಾವುದೇ ಉದ್ದೇಶ ಸಫಲವಾಗಿಲ್ಲ ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಮಧ್ಯ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನವೆಂಬರ್ 28ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ. ದಶಕದಿಂದ ಅಧಿಕಾರದ ರುಚಿ ಕಳೆದುಕೊಂಡಿರುವ ಕಾಂಗ್ರೆಸ್ ಸರಕಾರ ಮರಳಿ ಅಧಿಕಾರದ ಗದ್ದುಗೆಗೇರಲು ಹರಸಾಹಸ ಮಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈಗಾಗಲೆ ಒಂದು ಸುತ್ತು ಹಾಕಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದೀಗ ಡಾ. ಮನಮೋಹನ ಸಿಂಗ್ ಅವರ ಸರದಿ.

ಪ್ಯೂನ್ ಕೆಲಸಕ್ಕೆ ಎಂಬಿಎ, ಪಿಎಚ್ಡಿ ಮಾಡಿದವರ ಅರ್ಜಿ
2018ರ ಫೆಬ್ರವರಿಯಿಂದೀಚೆಗೆ ಎಂಬಿಎ, ಪಿಎಚ್ಡಿ ಮತ್ತು ಎಲ್ಎಲ್ಬಿ ಪದವಿ ಗಳಿಸಿರುವ 2 ಲಕ್ಷ 81 ಸಾವಿರದಷ್ಟು ಯುವಕ ಮತ್ತು ಯುವತಿಯರು 730 ಜವಾನರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ನಿರುದ್ಯೋಗ ಎಷ್ಟು ತಾಂಡವವಾಡುತ್ತಿದೆ ಎಂಬುದಕ್ಕೆ ಈ ಅಂಕಿಸಂಖ್ಯೆಗಳು ಕನ್ನಡಿ ಹಿಡಿದಿವೆ. ಉದ್ಯೋಗ ಸಿಗದೆ ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಂಡವರು ಬಿಜೆಪಿ ಆಡಳಿತವಿರುವ ಮಧ್ಯ ಪ್ರದೇಶದಲ್ಲಿ ಇದ್ದಾರೆ ಎಂದು, 2004ರಿಂದ 2014ರವರೆಗೆ ಎರಡು ಅವಧಿಗಳ ಕಾಲ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಮನಮೋಹನ ಸಿಂಗ್ ಅವರು ಮಾಹಿತಿಯನ್ನು ಬಿಚ್ಚಿಟ್ಟರು.

ಸಿಬಿಐ, ಆರ್ಬಿಐ ನಂಬಿಕಾರ್ಹತೆ ಕಳೆದುಕೊಳ್ಳುತ್ತಿವೆ
ಇತ್ತೀಚೆಗೆ ಚರ್ಚೆಯಾಗುತ್ತಿರುವ ಇತರ ಸಮಸ್ಯೆಗಳತ್ತ ಬೆಳಕು ಚೆಲ್ಲಿದ ಅವರು, ಕೇಂದ್ರ ಸರಕಾರದ ಅಡಿಯಲ್ಲಿ ಸಂಸತ್ತು, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಂಥ ಸಂಸ್ಥೆಗಳು ಅತ್ಯಂತ ವ್ಯವಸ್ಥಿತವಾಗಿ ನಂಬಿಕಾರ್ಹತೆಯನ್ನು ಕಳೆದುಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಧಿಕಾರವನ್ನು ಬಳಸಿ ಆ ಸಂಸ್ಥೆಗಳನ್ನು ದುರ್ಬಲಗೊಳಿಸಲು ಅತ್ಯಂತ ಜಾಗರೂಕತೆಯ, ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಪ್ರಧಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಫೇಲ್ ಡೀಲ್ ನಲ್ಲಿ ಏನೋ ಐಬಿದೆ
ನಮ್ಮ ದೇಶದ ಜನತೆಗೆ ಬಹುಕೋಟಿ ರಫೇಲ್ ಡೀಲ್ ಬಗ್ಗೆ ಸಂಶಯವಿದ್ದೇ ಇದೆ. ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿರುವುದರಿಂದ ವಿರೋಧ ಪಕ್ಷ ಮತ್ತು ಇತರ ರಾಜಕೀಯ ಪಕ್ಷಗಳು ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಆಗ್ರಹಿಸುತ್ತಲೇ ಇವೆ. ಆದರೆ, ನರೇಂದ್ರ ಮೋದಿಯವರು ಆ ಬೇಡಿಕೆ ಪೂರೈಸಲು ಸಿದ್ಧವಿಲ್ಲ. ಇದರಿಂದ ಗೊತ್ತಾಗುವುದೇನೆಂದರೆ, ಇದರ ಹಿಂದೆ ಏನೋ ಐಬಿದೆ ಎಂಬುದು ವೇದ್ಯವಾಗುತ್ತದೆ ಎಂದು ಡಾ. ಮನಮೋಹನ ಸಿಂಗ್ ಅವರು ವ್ಯಂಗ್ಯವಾಡಿದರು.

ಒಂದನೇ ಹುಟ್ಟುಹಬ್ಬವನ್ನೇ ನೋಡುತ್ತಿಲ್ಲ
ಇವೆಲ್ಲ ಸಮಸ್ಯೆಗಳಲ್ಲದೆ, ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-4ರ ಪ್ರಕಾರ, ದೇಶದಲ್ಲಿ 48 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನು ಮಧ್ಯ ಪ್ರದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಮಕ್ಕಳು ತಮ್ಮ ಮೊದಲನೇ ಹುಟ್ಟುಹಬ್ಬವನ್ನೇ ನೋಡುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಇಲ್ಲಿನ ಆದಿವಾಸಿ ಸಹೋದರರು ಮತ್ತು ಸಹೋದರಿಯಲು ತೀವ್ರ ಒತ್ತಡದಲ್ಲಿದ್ದಾರೆ. ಬಿಜೆಪಿ ಸರಕಾರ 3,63,424 ಆದಿವಾಸಿ ಪಟ್ಟಾ ಆಗ್ರಹವನ್ನು ತಿರಸ್ಕರಿಸಿದೆ ಎಂದು 86 ವರ್ಷದ ಸಿಂಗ್ ಅವರು ಮಾತಿನ ಕಿಡಿ ಸಿಡಿಸಿದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications