ನ್ಯಾಯಾಧೀಶೆಗೆ ಗ್ರೀಟಿಂಗ್ಸ್ ಕಳುಹಿಸಿದ ವಕೀಲನ ಮಾನಸಿಕ ಆರೋಗ್ಯ ತಪಾಸಣೆಗೆ ಆದೇಶ
ಭೋಪಾಲ್, ಮಾರ್ಚ್ 29: ಮಹಿಳಾ ನ್ಯಾಯಾಧೀಶರಿಗೆ ಆಕ್ಷೇಪಾರ್ಹ ರೀತಿಯಲ್ಲಿ ಜನ್ಮದಿನದ ಶುಭಾಶಯ ತಿಳಿಸಿದ್ದ ಆರೋಪ ಎದುರಿಸುತ್ತಿರುವ ವಕೀಲರ ಮಾನಸಿಕ ಆರೋಗ್ಯ ತಿಳಿದುಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ.
ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿದ್ದರೂ ವಕೀಲ ವಿಜಯಸಿಂಗ್ ಯಾದವ್ ಅವರು ಮಹಿಳಾ ನ್ಯಾಯಾಧೀಶರಿಗೆ ಮುಜುಗರ ಉಂಟಾಗುವಂತಹ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜೂನಿಯರ್ ಅಧಿಕಾರಿ ಜೊತೆ ಚೆಲ್ಲಾಟ ನ್ಯಾಯಾಧೀಶರಿಗೆ ಒಪ್ಪಿತ ನಡೆಯಲ್ಲ; ಸುಪ್ರೀಂ
'ಅರ್ಜಿದಾರರು ಸುಮಾರು 37 ವರ್ಷದವರಾಗಿದ್ದು, ನಾಲ್ವರು ಮಕ್ಕಳನ್ನು ಹೊಂದಿದ್ದರೂ ಒಬ್ಬ ಮಹಿಳಾ ನ್ಯಾಯಾಧೀಶರಿಗೆ ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣ ಪೋರ್ಟಲ್ ಮೂಲಕ ಮುಜುಗರ ಉಂಟುಮಾಡುವಂತಹ ತೀವ್ರ ಆಕ್ಷೇಪಾರ್ಹ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ' ಎಂದು ನ್ಯಾಯಮೂರ್ತಿ ರೋಹಿತ್ ಆರ್ಯ ಹೇಳಿದರು.
'ಅವರ ಮಾನಸಿಕ ಆರೋಗ್ಯವನ್ನು ಅರ್ಹ ವೈದ್ಯರು ಅಥವಾ ಮನಶಾಸ್ತ್ರಜ್ಞರಿಂದ ತಪಾಸಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು' ಎಂದು ಅವರು ಆದೇಶ ನೀಡಿದರು.
ಜನವರಿ 29ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ಮಿಥಾಲಿ ಪಾಠಕ್ ಅವರಿಗೆ ಇ-ಮೇಲ್ ಮೂಲಕ ಬರ್ತಡೇ ಕಾರ್ಡ್ ರವಾನಿಸಿದ್ದ ಯಾದವ್ ಅವರನ್ನು ಫೆಬ್ರವರಿ 9ರಂದು ಬಂಧಿಸಲಾಗಿತ್ತು. ಪಾಠಕ್ ಅವರ ಫೋಟೊವನ್ನು ಫೇಸ್‌ಬುಕ್‌ನಿಂದ ಡೌನ್‌ಲೋಡ್ ಮಾಡಿದ್ದ ಯಾದವ್, ಅದನ್ನು ತಮ್ಮ ಜನ್ಮದಿನದ ಶುಭಾಶಯ ಇ-ಮೇಲ್‌ನಲ್ಲಿ ಅಟ್ಯಾಚ್ ಮಾಡಿ ಕಳುಹಿಸಿದ್ದರು.
ನ್ಯಾಯಾಧೀಶೆ ಮಿಥಾಲಿ ಪಾಠಕ್ ಅವರಿಗೆ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗದೆ ಇದ್ದರೂ ಅವರ ಖಾತೆಗೆ ಹೋಗಿ ಅನಧಿಕೃತವಾಗಿ ಫೋಟೊ ಡೌನ್‌ಲೌಡ್ ಮಾಡಿದ್ದರು. ಈ ರೀತಿ ಅನಧಿಕೃತವಾಗಿ ಸಾಮಾಜಿಕ ಜಾಲತಾಣ ಖಾತೆ ಪ್ರವೇಶಿಸುವುದು ಅಥವಾ ಅವರ ಫೋಟೊ ಬಳಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗಿದೆ.
ಯಾದವ್ ಅವರನ್ನು ಬಂಧಿಸಿ ಐಪಿಸಿ ಸೆಕ್ಷನ್ 420, 467, 468,469 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 41 ಮತ್ತು 67ರ ಅಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅವರ ಜಾಮೀನು ಅರ್ಜಿಗಳು ಸಹ ತಿರಸ್ಕೃತಗೊಂಡಿವೆ.