ಕಮಲನಾಥ್ ರಾಜೀನಾಮೆ; ಮಧ್ಯಪ್ರದೇಶದಲ್ಲಿ ಮುಂದೇನು?
ಭೋಪಾಲ್, ಮಾರ್ಚ್ 20 : ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ಬಳಿಕ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ರಾಜ್ಯದಲ್ಲಿನ ಹಲವು ದಿನಗಳ ರಾಜಕೀಯ ಬಿಕ್ಕಟ್ಟು ಕೊನೆಗೊಂಡಿದೆ. ಮುಂದೇನು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸುಪ್ರೀಂಕೋರ್ಟ್ ಗುರುವಾರ ನೀಡಿದ್ದ ಆದೇಶದಂತೆ ಶುಕ್ರವಾರ ಸಂಜೆ 5 ಗಂಟೆಯೊಳಗೆ ಮುಖ್ಯಮಂತ್ರಿ ಕಮಲನಾಥ್ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಬೇಕಿತ್ತು. ಆದರೆ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರು ರಾಜೀನಾಮೆ ನೀಡಿದರು.
ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆಯಿಂದಾಗಿ ಸುಮಾರು 15 ತಿಂಗಳ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. 22 ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿತ್ತು. ಈಗ ಬಿಜೆಪಿ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಬೇಕಾಗುತ್ತದೆ.

ಮಧ್ಯಪ್ರದೇಶ ವಿಧಾನಸಭೆಯ ಒಟ್ಟು ಸದಸ್ಯ ಬಲ 230. ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಪ್ರಸ್ತುತ ಸದಸ್ಯ ಬಲ 206ಕ್ಕೆ ಕುಸಿದಿದೆ. ಸರ್ಕಾರ ರಚನೆ ಮಾಡಲು ಮ್ಯಾಜಿಕ್ ನಂಬರ್ 104. ಕಾಂಗ್ರೆಸ್ ಸದನದಲ್ಲಿ 92 ಶಾಸಕರನ್ನು ಹೊಂದಿದೆ. ಬಿಜೆಪಿ 107 ಸದಸ್ಯ ಬಲವನ್ನು ಹೊಂದಿದೆ. ಯಾರ ಬೆಂಬಲವೂ ಇಲ್ಲದೆ ಬಿಜೆಪಿ ಪ್ರಸ್ತುತ ಸರ್ಕಾರ ರಚಿಸಬಹುದಾಗಿದೆ.
ರಾಜೀನಾಮೆ ಬಳಿಕ ಮಾತನಾಡಿದ ಕಮಲನಾಥ್, "ರಾಜ್ಯಕ್ಕಾಗಿ ಯಾವುದೇ ಹುದ್ದೆ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಮಾರ್ಚ್ 10ರಂದು ಕಾಂಗ್ರೆಸ್ ತೊರೆದಿದ್ದರು. ಅವರ ರಾಜೀನಾಮೆ ಬಳಿಕ ಆರಂಭವಾದ ಬಿಕ್ಕಟ್ಟು ಸರ್ಕಾರವನ್ನು ಬೀಳಿಸಿದೆ. ಸಿಂಧಿಯಾ ಬಿಜೆಪಿ ಸೇರಿದ್ದು, ರಾಜ್ಯಸಭಾ ಚುನಾವಣೆ ಟಿಕೆಟ್ ಪಡೆದಿದ್ದಾರೆ.
ಮೂರು ಬಾರಿ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌವ್ಹಾಣ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕನ್ನು ಮಂಡನೆ ಮಾಡುವ ನಿರೀಕ್ಷೆ ಇದೆ. ರಾಜ್ಯ ಬಿಜೆಪಿ ಘಟಕದಲ್ಲಿ ಈಗಾಗಲೇ ಸಂಭ್ರಮ ಮುಗಿಲು ಮುಟ್ಟಿದೆ.












Click it and Unblock the Notifications