ಕಾಂಗ್ರೆಸ್ ವಿಸರ್ಜಿಸಿ, ಗಾಂಧೀಜಿ ಬಯಕೆ ಈಡೇರಿಸಿ : ಯೋಗಿ ಆದಿತ್ಯನಾಥ್
ಭೋಪಾಲ್, ನವೆಂಬರ್ 22: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಧ್ಯಪ್ರದೇಶದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಂಡರು.
ಮಧ್ಯಪ್ರದೇಶ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ನಗರ ನಕ್ಸಲ್ಗಳ ಜತೆ ನಂಟಿದೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷ್ಯವನ್ನು ಇಂದು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಯೋಗಿ ಅವರು, "ಕಾಂಗ್ರೆಸ್ನ ದೊಡ್ಡ ನಾಯಕನ ಹೆಸರು ನಕ್ಸಲರ ಜತೆಗೆ ತಳುಕು ಹಾಕಿಕೊಂಡಿದೆ.
ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ, ಕಾಂಗ್ರೆಸ್ ಸಹಾನುಭೂತಿ ತೋರುತ್ತಿರುವುದು ಖಂಡನೀಯ. ಕಾಂಗ್ರೆಸ್ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಹೀಗಾಗಿ, ಮಹಾತ್ಮ ಗಾಂಧೀಜಿಯವರ ಬಯಕೆಯಂತೆ ಅದನ್ನು ವಿಸರ್ಜಿಸಬೇಕು. ಅದು ನಿಮ್ಮ ಜವಾಬ್ದಾರಿ," ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಭೀಮಾ ಕೋರೆಗಾಂವ್ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಬಳಿ ದಿಗ್ವಿಜಯ್ ಸಿಂಗ್ ಅವರ ಫೋನ್ ನಂಬರ್ ಇರುವುದು ಪತ್ತೆಯಾಗಿದೆ ಈ ಕುರಿತು ತನಿಖೆ ನಡೆಸುತ್ತಿರುವ ಪುಣೆ ಪೊಲೀಸರಿಗೆ ಪತ್ರವೊಂದು ಲಭಿಸಿತ್ತು. ಅದರಲ್ಲಿ ದಿಗ್ವಿಜಯ್ ಸಿಂಗ್ ಅವರ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಅವರಿಗೆ ನಗರ ನಕ್ಸಲರ ನಂಟಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ದಿಗ್ವಿಜಯ್ ಸಿಂಗ್, ತಾಕತ್ ಇದ್ದರೆ ನನ್ನನ್ನು ಬಂಧಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದರು.
ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲಿ ಯೋಗಿ ಆದಿತ್ಯನಾಥ್ ಅವರ ಭಾಷಣಕ್ಕೆ ಭಾರಿ ಬೇಡಿಕೆ ಹುಟ್ಟುಕೊಂಡಿದೆ. ವಿಶೇಷವಾಗಿ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಹೆಚ್ಚೆಚ್ಚು ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಯೋಗಿ ಅವರು ಪಾಲ್ಗೊಳ್ಳುತ್ತಿದ್ದಾರೆ.












Click it and Unblock the Notifications