ರಾಹುಲ್ ಗಾಂಧಿಗೆ ಶಿಸ್ತು, ಶಿಷ್ಟಾಚಾರ ಕಲಿಸಿ: ಸೋನಿಯಾಗೆ ಸಲಹೆ
ಇಂದೋರ್, ಫೆಬ್ರವರಿ 10: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮಗ ರಾಹುಲ್ ಗಾಂಧಿಯನ್ನು 'ರಾಜಕೀಯದ ಆಟದ ಶಾಲೆ'ಗೆ ಸೇರಿಸಲಿ. ಅಲ್ಲಿ ಅವರು ಸ್ವಲ್ಪ ಶಿಸ್ತು ಮತ್ತು ಭಾಷೆಯ ಶಿಷ್ಟಾಚಾರ ಕಲಿಯಬಹುದು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಭಾನುವಾರ ವ್ಯಂಗ್ಯವಾಗಿ ಹೇಳಿದರು.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ದೇಶದಲ್ಲಿನ ನಿರುದ್ಯೋಗ ಪರಿಸ್ಥಿತಿಯನ್ನು ಸರಿಪಡಿಸಲು ಮುಂದಾಗದೆ ಹೋದರೆ ಮುಂದಿನ ಆರು ತಿಂಗಳಲ್ಲಿ ಯುವಜನರು ಬಡಿಗೆಗಳಿಂದ ಮೋದಿಯನ್ನು ಥಳಿಸುತ್ತಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
'ಕಾಂಗ್ರೆಸ್ ಮುಖಂಡರು ಯಾವಾಗಲೂ ಕೈಯಲ್ಲಿ ಕೊಡಲಿ ಹಿಡಿದು ಸುತ್ತಾಡುತ್ತಿರುತ್ತಾರೆ. ಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಕಾಲಿಗೆ ತಾವೇ ಹೊಡೆದುಕೊಳ್ಳುತ್ತಾರೆ. ನಾನು ಕಾಂಗ್ರೆಸ್ ನಾಯಕರಿಗೆ, ಮುಖ್ಯವಾಗಿ ಸೋನಿಯಾ ಗಾಂಧಿ ಅವರಿಗೆ ಸಲಹೆ ನೀಡಲು ಬಯಸುತ್ತೇನೆ, ಅವರು ತಮ್ಮ 'ಪಪ್ಪುಜಿ'ಯನ್ನು ರಾಜಕೀಯದ ಆಟದ ಶಾಲೆಗೆ ಕಳಹಿಸಲಿ. ಅವರು ಅಲ್ಲಿ ರಾಜಕೀಯದ ಎಬಿಸಿಡಿ, ಘನತೆ, ಶಿಸ್ತು ಮತ್ತು ಭಾಷೆಯ ಶಿಷ್ಟಾಚಾರಗಳನ್ನು ಕಲಿಯಬಹುದು' ಎಂದು ಚಾಟಿ ಬೀಸಿದರು.

ರಾಹುಲ್ ಗಾಂಧಿಯನ್ನು ಟೀಕಿಸಿದ ನಕ್ವಿ, ಸಾರ್ವಜನಿಕರಿಂದ ಆಯ್ಕೆಯಾದ ಪ್ರಧಾನಿಯನ್ನು ಹೊಡೆಯುತ್ತಾರೆ ಎಂದು ಮಾನಸಿಕ ಸ್ಥಿಮಿತತೆ ಸರಿಯಾಗಿರುವ ಯಾರೂ ಹೇಳುವುದಿಲ್ಲ ಎಂದು ಟೀಕಿಸಿದರು.












Click it and Unblock the Notifications