ಕರಡಿ ದಾಳಿಗೆ ದಂಪತಿ ಸಾವು; ಮನುಷ್ಯರ ಮಾಂಸ ತಿಂದ ಕರಡಿ ಸೆರೆ
ಭೋಪಾಲ್, ಜೂನ್ 6: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಭಾನುವಾರ ಕರಡಿಯೊಂದು ದಂಪತಿ ಮೇಲೆ ದಾಳಿ ಮಾಡಿ ಕೊಂದಿದೆ. ಇಷ್ಟಕ್ಕೇ ಸುಮ್ಮನಾಗದ ಕರಡಿ ಐದು ಗಂಟೆಗಳಿಗೂ ಹೆಚ್ಚು ಕಾಲ ಶವಗಳನ್ನು ಬಿಡದೆ, ಕೆಲವು ಭಾಗಗಳನ್ನು ತಿಂದು ಹಾಕಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪನ್ನಾ ಜಿಲ್ಲಾ ಕೇಂದ್ರದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಖೇರ್ಮೈ ಪ್ರದೇಶದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಕರಡಿ ದಾಳಿ ಮಾಡಿದೆ. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದ ರಾಣಿಗಂಜ್ ಪ್ರದೇಶದ ಮುಖೇಶ್ ಠಾಕೂರ್ (50) ಮತ್ತು ಇಂದಿರಾ ಠಾಕೂರ್ (45) ದಂಪತಿಗಳ ಮೇಲೆ ಕರಡಿ ಏಕಾಏಕಿ ದಾಳಿ ಮಾಡಿದೆ.
ಕರಡಿ ದಾಳಿಯಲ್ಲಿ ಇಬ್ಬರೂ ದಂಪತಿಗಳು ಸಾವನ್ನಪ್ಪಿದ್ದಾರೆ. ಆದರೂ ಕರಡಿ ಆಕ್ರೋಶ ಕಡಿಮೆಯಾಗಿಲ್ಲ, ಸುಮಾರು 5 ಗಂಟೆಗಳ ಕಾಲ ಶವಗಳ ಕೆಲವು ಭಾಗಗಳನ್ನು ತಿಂದುಹಾಕಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಗೌರವ್ ಶರ್ಮಾ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಕರಡಿಯನ್ನು ಓಡಿಸುವ ಯತ್ನ ಮಾಡಿದ್ದು ವ್ಯರ್ಥವಾಗಿದೆ. ನಂತರ ಕರಡಿಗೆ ಅರವಳಿಕೆ ನೀಡಿ ಹಿಡಿಯಲಾಗಿದೆ.
"ನಾವು ಪನ್ನಾ ಟೈಗರ್ ರಿಸರ್ವ್ ತಂಡಗಳಿಗೂ ಮಾಹಿತಿ ನೀಡಿದ್ದೇವೆ. ಕರಡಿಗೆ ಅರವಳಿಕೆ ನೀಡಿದ ನಂತರ ಸೆರೆ ಹಿಡಿಯಲಾಗಿದೆ ಮತ್ತು ದಂಪತಿಗಳ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಮಾಡಿದ ಕರಡಿಯನ್ನು ಮತ್ತೆ ಕಾಡಿನಲ್ಲಿ ಬಿಡುವುದಿಲ್ಲ, ಅದನ್ನು ಬೇರೆ ನಗರದ ಯಾವುದಾದರೂ ಮೃಗಾಲಯಕ್ಕೆ ಕಳುಹಿಸಲು ಯೋಜನೆ ಮಾಡಲಾಗಿದೆ" ಎಂದು ಗೌರವ್ ಶರ್ಮಾ ಹೇಳಿದ್ದಾರೆ.
ಅರಣ್ಯ ಇಲಾಖೆ ವತಿಯಿಂದ ಮೃತ ದಂಪತಿಯ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಲಾಗಿದೆ. ಘಟನೆ ನಡೆದ ಎರಡರಿಂದ ಮೂರು ಗಂಟೆಗಳ ನಂತರ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದರು ಎಂದು ದಂಪತಿಯ ಸಂಬಂಧಿಕರು ಆರೋಪಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಲು ವಿಫಲಾಗದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications