ಮದುವೆಯಾಗಿ 18 ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ; ಪ್ರೇಮಿ ಜೊತೆ ಜೂಟ್!
ಭೋಪಾಲ್, ಜನವರಿ.13: ಮದುವೆಯಾಗಿ 18ನೇ ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ ಪ್ರಿಯಕರನ ಜೊತೆಗೆ ಪರಾರಿ ಆಗಿರುವ ಘಟನೆ ಮಧ್ಯಪ್ರದೇಶದ ಛತ್ತರಪುರ್ ಜಿಲ್ಲೆಯಲ್ಲಿ ನಡೆದಿದೆ. ಈ ವೇಳೆ ವಧು ಒಂದು ಲಕ್ಷಾಂತರ ರೂಪಾಯಿ ಬೆಲೆ ಬಾಳು ಒಡವೆ ಮತ್ತು ಹಣವನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.
ಕಳೆದ ಡಿಸೆಂಬರ್.06ರಂದು ಉತ್ತರ ಪ್ರದೇಶದ ಜಲೌನ್ ಪ್ರದೇಶದ ರಾಹುಲ್ ಎಂಬುವವರ ಜೊತೆಗೆ 20 ವರ್ಷದ ಮೂರ್ತಿ ರೈಕ್ವಾರ್ ಮದುವೆ ಆಗಿದ್ದರು. ಮದುವೆ ನಂತರದ ಸಂಪ್ರದಾಯದ ಪ್ರಕಾರ ವಧುವನ್ನು ತವರು ಮನೆಗೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿಂದ ವಾಪಸ್ ಗಂಡನ ಮನೆಗೆ ವಾಪಸ್ ತೆರಳುವುದಾಗಿ ಹೇಳಿ ಹೊರಟ ಮೂರ್ತಿ ರೈಕ್ವಾರ್ ತನ್ನ ಪ್ರಿಯಕರನ ಜೊತೆಗೆ ಪರಾರಿ ಆಗಿದ್ದಾರೆ. 2020ರ ಡಿಸೆಂಬರ್.24ರಂದು ಭಜ್ಜು ಯಾದವ್ ಎಂಬ ಪ್ರಿಯಕರನ ಜೊತೆಗೆ ಮೂರ್ತಿ ರೈಕ್ವಾರ್ ಓಡಿ ಹೋಗಿರುವುದಾಗಿ ತಿಳಿದು ಬಂದಿದೆ.
ಮಧ್ಯಪ್ರದೇಶದ ಛತ್ತರಪುರ್ ಜಿಲ್ಲೆ ಅಲಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಛಿರವಾರಿ ಗ್ರಾಮದಲ್ಲಿ ಇಡೀ ಘಟನೆ ನಡೆದಿದೆ. ಮಗಳು ಕಾಣೆಯಾಗಿರುವ ಬಗ್ಗೆ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆ ಇಡೀ ಘಟನೆ ಬೆಳಕಿಗೆ ಬಂದಿದೆ.

5 ಲಕ್ಷ ಬೆಲೆ ಬಾಳುವ ಒಡವೆಗಳೊಂದಿಗೆ ಪರಾರಿ:
ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ ಆಗದಿರುವುದನ್ನು ಕಂಡ ಪತಿ ರಾಹುಲ್, ಛಿರವಾರಿ ಗ್ರಾಮಕ್ಕೆ ತೆರಳುತ್ತಾರೆ. ಈ ವೇಳೆ ಮಗಳು ಸುಳ್ಳು ಹೇಳಿ ಅದೇ ಗ್ರಾಮದಲ್ಲಿದ್ದ ಪ್ರೇಮಿಯ ಜೊತೆಗೆ ಓಡಿ ಹೋಗಿರುವುದು ಗೊತ್ತಾಗುತ್ತದೆ. ಮೂರ್ತಿ ರೈಕ್ವಾರ್ ಪ್ರಿಯಕರ ಜೊತೆಗೆ ಹೋಗುವಾಗ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 20 ಸಾವಿರ ರೂ. ನಗದು ತೆಗೆದುಕೊಂಡು ಹೋಗಿರುವ ಬಗ್ಗೆಯೂ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications