ಬೆಂಗಳೂರಿನ ಟೆಕ್ಕಿಗಳಿಗೆ ಅನುಕೂಲ; ದ್ವಿಪಥವಾಗಲಿದೆ ಈ ರೈಲು ಮಾರ್ಗ
ಬೆಂಗಳೂರು, ಜನವರಿ 19: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ರೈಲ್ವೆ ಮಾರ್ಗವೊಂದನ್ನು ದ್ವಿಪಥಗೊಳಿಸುವ ಕುರಿತು ಕಾರ್ಯ ಸಾಧ್ಯತಾ ಸಮೀಕ್ಷೆಯ ಮೊದಲ ಹಂತವನ್ನು ಆರಂಭಿಸಿದೆ. ಈ ಮಾರ್ಗ ಬೆಂಗಳೂರಿನ ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಿದೆ ಎಂದು ಅಂದಾಜಿಸಲಾಗಿದೆ.
ಯಲಹಂಕ-ಬಂಗಾರಪೇಟೆ ನಡುವಿನ ರೈಲ್ವೆ ಹಳಿಯನ್ನು ದ್ವಿಪಥಗೊಳಿಸಲಾಗುತ್ತದೆ. ದೇವನಹಳ್ಳಿ-ಕೋಲಾರ ಮೂಲಕ ಬಂಗಾರಪೇಟೆಗೆ ತನಕ 125 ಕಿ. ಮೀ. ಮಾರ್ಗವನ್ನು ದ್ವಿಪಥಗೊಳಿಸಲು ಕಾರ್ಯ ಸಾಧ್ಯತಾ ಸಮೀಕ್ಷೆ ನಡೆಯಲಿದೆ. ಇದಕ್ಕೆ 2.5 ಕೋಟಿ ರೂ. ಬಿಡುಗಡೆಯಾಗಿದೆ.

ಬೆಂಗಳೂರು ಸಂಪರ್ಕಿಸುವ ಮಾರ್ಗವನ್ನು ಎರಡು ಹಂತದಲ್ಲಿ ದ್ವಿಪಥಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಯಲಹಂಕ-ದೇವನಹಳ್ಳಿ 23 ಕಿ. ಮೀ. ಮಾರ್ಗ ದ್ವಿಪಥವಾಗಲಿದೆ. ಇದರ ಕಾರ್ಯ ಸಾಧ್ಯತಾ ಸಮೀಕ್ಷೆಗೆ 8 ಕೋಟಿ ರೂ. ಬಿಡುಗಡೆಯಾಗಿದೆ. ಈ ವರದಿ ಕೈ ಸೇರಿದ ಬಳಿಕ ರೈಲ್ವೆ ಇಲಾಖೆ ಯೋಜನೆಗೆ ಅಂತಿಮ ಒಪ್ಪಿಗೆ ನೀಡಲಿದೆ.
2 ಹಂತದಲ್ಲಿ ಕಾಮಗಾರಿಗಳು; ಯಲಹಂಕ-ದೇವನಹಳ್ಳಿ ಮಾರ್ಗ ದ್ವಿಪಥಗೊಂಡರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ರೈಲುಗಳನ್ನು ಓಡಿಸಬಹುದು. ಆಗ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ದೇವನಹಳ್ಳಿ ಹಾಲ್ಟ್ ಸ್ಟೇಷನ್ ಸಹ ಉಪಯೋಗಕ್ಕೆ ಬರುತ್ತದೆ.
2ನೇ ಹಂತದಲ್ಲಿ ದೇವನಹಳ್ಳಿ-ಕೋಲಾರ-ಬಂಗಾರಪೇಟೆ ಮಾರ್ಗವನ್ನು ದ್ವಿಪಥ ಮಾಡಬೇಕಿದೆ. ಇದರ ಸಮೀಕ್ಷೆಗೆ ಹಣ ಮಂಜೂರು ಆಗಿದೆ. ಆದರೆ ಕಾರ್ಯ ಸಾಧ್ಯತಾ ಸಮೀಕ್ಷೆಗೆ ಟೆಂಡರ್ ಕರೆಯುವುದು ಸೇರಿದಂತೆ ಇತರ ಪ್ರಕ್ರಿಯೆ ಇನ್ನೂ ಆರಂಭವಾಗಬೇಕಿದೆ.
ಈಗ ಒಂದೇ ಮಾರ್ಗ ಇರುವ ಕಾರಣ ಯಲಹಂಕದಿಂದ ರೈಲು ಹೊರಟರೆ ದೇವನಹಳ್ಳಿ ಕಡೆಯಿಂದ ಬರುವ ರೈಲು ಕಾಯುವುದು ಅನಿವಾರ್ಯವಾಗಲಿದೆ. ದ್ವಿಪಥ ನಿರ್ಮಾಣವಾದರೆ ರೈಲುಗಳ ಕಾಯುವಿಕೆ ತಪ್ಪಲಿದೆ. ಆಗ ಬೆಂಗಳೂರು ನಗರವನ್ನು ಟೆಕ್ಕಿಗಳು, ವಿದ್ಯಾರ್ಥಿಗಳು, ಏರ್‌ಪೋರ್ಟ್ ಪ್ರಯಾಣಿಕರು ಬೇಗ ತಲುಪಬಹುದು.
ಯಲಹಂಕ-ದೇವನಹಳ್ಳಿ, ದೇವನಹಳ್ಳಿಪ-ಕೋಲಾರ ಮಾರ್ಗ ದ್ವಿಪಥಗೊಳಿಸಲು ಕಾರ್ಯ ಸಾಧ್ಯತಾ ಸಮೀಕ್ಷೆ ವರದಿ ಬಳಿಕ ರೈಲ್ವೆ ಇಲಾಖೆ ತೀರ್ಮಾನ ಮಾಡಲಿದೆ. ದ್ವಿಪಥ ಮಾರ್ಗ ನಿರ್ಮಾಣಗೊಂಡರೆ ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಕೂಡ ಆಗಲಿದೆ. ಆಗ ರೈಲುಗಳ ವೇಗ ಹೆಚ್ಚಲು ಸಹ ಅನುಕೂಲವಾಗಲಿದೆ.
ಹಲವು ರೈಲು ಮಾರ್ಗಗಳು ರಾಜ್ಯದಲ್ಲಿ ದ್ವಿಪಥಗೊಂಡರೂ ಸಹ ಬೆಂಗಳೂರು ನಗರ ಸಂಪರ್ಕಿಸುವ ಈ ರೈಲು ಮಾರ್ಗ ದ್ವಿಪಥಗೊಂಡಿರಲಿಲ್ಲ. ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ. ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ. ಇಂತಹ ಹೊತ್ತಿಗೆ ಈ ಮಾರ್ಗವನ್ನು ಸಹ ಅಭಿವೃದ್ಧಿಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ರೈಲ್ವೆ ಇಲಾಖೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಪ್ರಯಾಣಿಕರು, ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ದೇವನಹಳ್ಳಿಯಲ್ಲಿ ಸುಮಾರು 3 ಕೋಟಿ ಖರ್ಚು ಮಾಡಿ ಏರ್‌ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ ನಿರ್ಮಾಣ ಮಾಡಿದೆ.
ಬೆಂಗಳೂರು ನಗರದ ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣಕ್ಕೆ ರೈಲು ಓಡಿಸಿದರೂ ಸಹ ಜನರನ್ನು ಸೆಳೆಯಲು ರೈಲ್ವೆ ಇಲಾಖೆ ವಿಫಲವಾಗಿದೆ. ಯಲಹಂಕ-ದೇವನಹಳ್ಳಿ ಮಾರ್ಗ ದಿಪಥಗೊಂಡರೆ ಏರ್‌ಪೋರ್ಟ್‌ಗೆ ಹೆಚ್ಚಿನ ರೈಲನ್ನು ಓಡಿಸಲು ರೈಲ್ವೆ ಇಲಾಖೆಗೆ ಅನುಕೂಲವಾಗಲಿದೆ.
ವಿಮಾನ ನಿಲ್ದಾಣಕ್ಕೆ ತಲುಪಲು ಜನರು ಬಸ್, ಕ್ಯಾಬ್‌ಗಳ ಮೊರೆ ಹೋಗಿದ್ದಾರೆ. ರೈಲು ಪ್ರಯಾಣ ದರ ಕಡಿಮೆ ಇದ್ದರೂ ಸಹ ರೈಲನ್ನು ಹತ್ತುತ್ತಿಲ್ಲ. ಆದ್ದರಿಂದ ದ್ವಿಪಥ ರೈಲು ಮಾರ್ಗ ನಿರ್ಮಾಣಗೊಂಡರೆ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ರೈಲು ಓಡಿಸಬಹುದು ಎಂಬುದು ಇಲಾಖೆಯ ಚಿಂತನೆಯಾಗಿದೆ.
ಅಲ್ಲದೇ 2024ರ ಅಂತ್ಯದ ವೇಳೆಗೆ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ರೈಲು ಬರಲಿದೆ. ಅದಕ್ಕೆ ಸರಿಯಾಗಿ ರೈಲು ಮಾರ್ಗವನ್ನು ಅಭಿವೃದ್ದಿಗೊಳಿಸಿದರೆ ವಿಮಾನ ನಿಲ್ದಾಣದ ಪ್ರಯಾಣಿಕರು ಮತ್ತು ಬೆಂಗಳೂರಿಗೆ ಕೋಲಾರ ಭಾಗದಿಂದ ಬರುವ ಜನರನ್ನು ರೈಲ್ವೆಯತ್ತ ಸೆಳೆಯಬಹುದು ಎಂಬುದು ಆಲೋಚನೆ.












Click it and Unblock the Notifications