ಕಿಕ್ ಬ್ಯಾಕ್ ಆರೋಪಕ್ಕೆ ಹೆದರಿ ಸ್ಟೀಲ್ ಬಿಡ್ಜ್ ಕೈಬಿಟ್ಟ ಸಿಎಂ: ಬಿಎಸ್ ವೈ
ಗೋವಿಂದರಾಜು ಡೈರಿಯ ಪ್ರಸ್ತಾವ ಮಾಡಿ, ಕಿಕ್ ಬ್ಯಾಕ್ ಬಗ್ಗೆ ಧ್ವನಿ ಎತ್ತಿದ್ದರಿಂದ ಹೆದರಿದ ರಾಜ್ಯ ಸರಕಾರ ಬೆಂಗಳೂರಿನಲ್ಲಿ ಸ್ಟೀಲ್ ಫ್ಲೈ ಓವರ್ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಹೇಳಿದ್ದಾರೆ
ಬೆಂಗಳೂರು, ಮಾರ್ಚ್ 2: ಬೆಂಗಳೂರಿನಲ್ಲಿ 1600 ಕೋಟಿ ವೆಚ್ಚದ ಉಕ್ಕಿನ ಸೇತುವೆ ನಿರ್ಮಾಣದ ನಿರ್ಧಾರವನ್ನು ರಾಜ್ಯ ಸರಕಾರ ಕೈ ಬಿಟ್ಟಿರಬಹುದು. ಅದರೆ ಇದರಲ್ಲಿ 65 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗುರುವಾರ ಆಗ್ರಹಿಸಿದ್ದಾರೆ.
ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ಈ ಯೋಜನೆ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಂಥವರು ವಿರೋಧ ವ್ಯಕ್ತಪಡಿಸಿದ್ದರು. ಇಡೀ ಬೆಂಗಳೂರಿನ ಜನ ಯೋಜನೆಗೆ ವಿರುದ್ಧವಾಗಿದ್ದರು. ಆದರೂ ಈ ಬಗ್ಗೆ ನಿರ್ಧಾರದಿಂದ ಹಿಂದೆ ಸರಿಯದ ಸಿದ್ದರಾಮಯ್ಯ ಅವರ ಸರಕಾರ, ಡೈರಿ ಬಗ್ಗೆ ನಾನು ಪ್ರಸ್ತಾಪಿಸಿದ ಮೇಲೆ ಹೆದರಿ ಉಕ್ಕಿನ ಸೇತುವೆ ನಿರ್ಮಾಣದ ನಿರ್ಧಾರ ಕೈ ಬಿಟ್ಟಿದ್ದಾರೆ.[ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ಮುನ್ನವೇ ಕುಸಿತ, 65 ಕೋಟಿ ಕಥೆ ಏನಾಯ್ತು?]

ಸಿಬಿಐ ತನಿಖೆ ಆಗಿ, ಆರೋಪ ಸಾಬೀತಾದರೆ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಏಕೆಂದರೆ ಲಂಚದ ಹಣ ಮುಖ್ಯಮಂತ್ರಿಗಳ ಕುಟುಂಬಕ್ಕೆ ತಲುಪಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಸೇತುವೆ ಯೋಜನೆಯಲ್ಲಿ ಗುತ್ತಿಗೆದಾರರು ಇನ್ನಷ್ಟು ಹಣ ಕೊಡಲು ಬಾಕಿಯಿತ್ತು. ಈಗ ಕೊಟ್ಟಿರುವ ಹಣ ಹೇಗೆ ವಾಪಸ್ ಪಡೆಯುವುದು ಎಂಬ ಚಿಂತೆ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.[ಭ್ರಷ್ಟತನದ ತುಕ್ಕು ಹಿಡಿದಿದ್ದ ಉಕ್ಕಿನ ಸೇತುವೆ ಯೋಜನೆ ರದ್ದು]
ಈ ಯೋಜನೆಯನ್ನು ರಾಜ್ಯ ಸರಕಾರವೇನೋ ಕೈಬಿಟ್ಟಿರಬಹುದು. ಆದರೆ ನಮ್ಮ ಹೋರಾಟ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಸಿಬಿಐ ತನಿಖೆಗೆ ವಹಿಸುವವರೆಗೆ ನಾವು ಸುಮ್ಮನೆ ಇರುವುದಿಲ್ಲ ಎಂದು ಅವರು ಹೇಳಿದರು.












Click it and Unblock the Notifications