ಬಿಎಸ್ವೈ ಪತ್ರ, ಮಂತ್ರಿಗೆ ಲಾಬಿ; ಮೋದಿ, ರಾಜನಾಥ್ ಗರಂ
ಬೆಂಗಳೂರು, ಮೇ 24: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಏನೋ ಮಾಡಲು ಹೋಗಿ ಮತ್ತೇನೋ ಮಾಡಿಕೊ0ಡಂತಿದೆ. ಕೇಂದ್ರದಲ್ಲಿ ಕೃಷಿ ಸಚಿವರಾಗುವ ಕನಸು ಕಂಡು ಮೋದಿಯಿಂದ ಸೂಕ್ತ ಸ್ಪಂದನೆ ದೊರೆಯದಿದ್ದಾಗ 'ನೀವು ಗ್ರೇಟು, ನೀವೇ ಇಂದ್ರ ಚಂದ್ರ' ಎಂದು ಮೋದಿಯನ್ನು ಹೊಗಳುತ್ತಾ 'ನಾನು ನಮ್ಮ ರಾಜ್ಯಕ್ಕಷ್ಟೇ ಸೀಮಿತನಾಗುತ್ತೇನೆ. ಕನಿಷ್ಠ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನವನ್ನಾದರೂ ದಯಪಾಲಿಸಿ' ಎಂಬರ್ಥದಲ್ಲಿ ಪತ್ರ ಬರೆದು ಮೋದಿಗೆ ಮನವಿ ಸಲ್ಲಿಸಿದ್ದರು.
ಯಡಿಯೂರಪ್ಪನವರು ಇದ್ದಕ್ಕಿದ್ದಂತೆ ಹೀಗೆ ಪತ್ರ ಸಲುಗೆ ತೆಗೆದುಕೊಂಡಿರುವುದು ಪಕ್ಷದಲ್ಲಿ ಟೀಕೆಗೆ ಗುರಿಯಾಗಿದೆ. ರಾಜನಾಥ್ ಸಿಂಗ್ ಅವರಂತೂ ಮಂತ್ರಿಗಿರಿಗಾಗಿ ರಾಜ್ಯದ ಸಂಸದರು ಮೋದಿ ಮೇಲೆ ಯಾಕೆ ಒತ್ತಡ ಹಾಕಿದ್ದು ಸರ್ವತಾ ಸಾಧುವಲ್ಲ. ಅದಾದ ನಂತರ ಮತ್ತೆ ಈ ಪತ್ರ ಕ್ಯಾತೆಯೇನು? ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಅಗತ್ಯವಾದರೂ ಏನು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಮಟ್ಟದಲ್ಲಿ ರಾಜ್ಯಾಧ್ಯಕ್ಷನಾದ ನನ್ನ ಬಳಿ ಮಾತನಾಡುವುದನ್ನು ಬಿಟ್ಟು, ಪ್ರಧಾನಿ ಮೇಲೆ ಒತ್ತಡದ ತಂತ್ರವೇಕೆ? ಎಂದು ಗರಂ ಆಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇದೇ ವೇಳೆ, ಮಂತ್ರಿಗಿರಿಗೆ ಯಾರೂ ಯಾವುದೇ ಲಾಬಿ ಮಾಡಬೇಡಿ ಎಂದು ಮೋದಿ ಸಹ ಎಚ್ಚರಿಸಿದ್ದಾರೆ. ಸಚಿವ ಸಂಪುಟ ರಚನೆಗೆ ಇನ್ನು ಕೇವಲ ಒಂದೆರಡು ದಿನ ಬಾಕಿಯಿದ್ದು, ನಿಯೋಜಿತ ಪ್ರಧಾನಿ ತಮ್ಮ ಮಂತ್ರಿಮಂಡಲದ ಬಗ್ಗೆ ತುಟಿಪಿಟಕ್ಕೆಂದಿಲ್ಲ. ಯಾರು ಸಂಪುಟದಲ್ಲಿರುತ್ತಾರೆ, ಪ್ರಮಾಣ ವಚನ ಸ್ವೀಕರಿಸುವವರು ಯಾರು ಎಂಬುದರ ಬಗ್ಗೆ ರಾಷ್ಟ್ರಪತಿಗೂ ಇನ್ನೂ ವಿಷಯ ತಿಳಿಸಿಲ್ಲ.

ಇತ್ತ ತಮ್ಮ ಪತ್ರ ವಿವಾದದಗೂಡಾಗುತ್ತಿರುವುದರಿಂದ ಎಚ್ಚೆತ್ತು ಶಿಕಾರಿಪುರದಲ್ಲಿ ಮಾತನಾಡಿರುವ ಯಡಿಯೂರಪ್ಪನವರು 'ಪತ್ರ ಬರೆದಿರುವುದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಗತ್ಯವಿಲ್ಲ. ತಾನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಪ್ರಭಾವಕ್ಕೆ ಒಳಗಾಗಿ ಹಾಗೆ ಪತ್ರ ಬರೆದಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.
'ನಾನು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ನೀಡಿರುವ ಸಲಹೆ, ಮಾರ್ಗದರ್ಶನವನ್ನು ತಲೆಬಾಗಿ ಸ್ವೀಕರಿಸಿ, ಅವರ ಇಚ್ಛೆಯಂತೆ ನಡೆದುಕೊಳ್ಳುತ್ತೇನೆ. ಈ ಬಗ್ಗೆ ರಾಜನಾಥ್‌ಸಿಂಗ್ ಅವರನ್ನು ಖುದ್ದು ಭೇಟಿಯಾಗಿ ಚರ್ಚಿಸುತ್ತೇವೆ' ಎಂದಿದ್ದಾರೆ.
'ಪತ್ರದಲ್ಲಿ ನಾನು ಸಂಸದನಾಗಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೇನೆಯೇ ವಿನಃ ಪಕ್ಷ ಸಂಘಟನೆಗೆ ಯಾವುದೇ ಹುದ್ದೆ ಬೇಕು ಎಂಬ ಇಚ್ಛೆ ವ್ಯಕ್ತಪಡಿಸಿಲ್ಲ. ದೇಶದ ಸಂಸತ್ತನ್ನು ದೇಗುಲವಿದ್ದಂತೆ ಎನ್ನುವ ಮೋದಿ ಅವರ ಕಲ್ಪನೆ ಮತ್ತು ಅವರು ಹೊಸ್ತಿಲಿಗೆ ತಲೆಬಾಗಿ ನಮಸ್ಕರಿಸಿದ ಘಟನೆ ಐತಿಹಾಸಿಕವಾದದ್ದು. ಇಡೀ ವಿಶ್ವ ಈ ಕುರಿತು ಚರ್ಚಿಸುವಂತಾಗಿದೆ. ಸ್ವಾತಂತ್ರ್ಯಾನಂತರದ ಯಾವ ಪ್ರಧಾನಿಯೂ ಹೀಗೆ ನಡೆದುಕೊಂಡಿರಲಿಲ್ಲ. ಮೋದಿ ಅವರ ಪ್ರತಿಯೊಂದು ನಡವಳಿಕೆಯೂ ಪ್ರಭಾವಿಯಾದದ್ದು' ಎಂದು ವ್ಯಾಖ್ಯಾನಿಸಿದ್ದಾರೆ.












Click it and Unblock the Notifications