ಬಿಜೆಪಿ ಜೊತೆ ಮೈತ್ರಿಗೆ ಯಡಿಯೂರಪ್ಪ ಡೆಡ್ ಲೈನ್
ಬೆಂಗಳೂರು, ನ. 19 : ಎನ್‌ಡಿಎ ಜೊತೆಗಿನ ಮೈತ್ರಿಯ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತಿಳಿಸಲು ಕೆಜೆಪಿ ಅಧ್ಯಕ್ಷ, ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ನಾಯಕರಿಗೆ ಹೊಸ ಡೆಡ್ ಲೈನ್ ನೀಡಿದ್ದಾರೆ. ಬಿಜೆಪಿ ತನ್ನ ನಿರ್ಧಾರ ತಿಳಿಸಿದಿದ್ದರೆ, ಕೆಜೆಪಿ ಎಲ್ಲ 28 ಲೋಕಸಭಾ ಕ್ಷೇತ್ರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬ ಸಂದೇಶ ಸಾರಿದ್ದಾರೆ.
ಶಾದಿಭಾಗ್ಯ ಯೋಜನೆ ವಿಸ್ತರಣೆಗೆ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 19 ದಿನಗಳಿಂದ ಧರಣಿ ನಡೆಸುತ್ತಿರುವ ಬಿ.ಎಸ್.ಯಡಿಯೂರಪ್ಪ ಸೋಮವಾರ ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು, ಕೆಜೆಪಿ ಎನ್‌ಡಿಎಗೆ ಬೆಂಬಲ ನೀಡುತ್ತದೆ ಎಂದು ಎಲ್.ಕೆ.ಅಡ್ವಾಣಿ ಅವರಿಗೆ ಪತ್ರ ಬರೆದಿದೆ. ಎನ್‌ಡಿಎ ಅಂಗ ಪಕ್ಷವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದೇವೆ.

ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಡಿಸೆಂಬರ್ 6 ರವರೆಗೂ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಎನ್‌ಡಿಎಯಿಂದ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮೈತ್ರಿಗೆ ಒಪ್ಪಿಗೆ ನೀಡದಿದ್ದರೆ, ಕೆಜೆಪಿ ಎಲ್ಲಾ ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದರು.
ಕೆಜೆಪಿ ಲೋಕಸಭೆಗೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಆಕಾಂಕ್ಷಿಗಳು ಹೆಸರನ್ನು ಕಳಿಸಲು ಜಿಲ್ಲಾ ಘಟಕಗಳಿಗೆ ಸೂಚಿಸಿದ್ದೇನೆ ಎಂದರು. ಎಲ್ಲಾ ಕ್ಷೇತ್ರದಲ್ಲೂ ಸಮರ್ಥ ಕಾರ್ಯಕರ್ತರಿದ್ದು ಅವರಲ್ಲೊಬ್ಬರನ್ನು ಕಣಕ್ಕೆ ಇಳಿಸಲಿದ್ದೇವೆ. ಚಳಿಗಾಲದ ಅಧಿವೇಶನ ಮುಗಿದ ಬಳಿಕ ಈ ಕುರಿತು ಕಾರ್ಯಪ್ರವೃತ್ತನಾಗುತ್ತೇನೆ ಎಂದು ತಿಳಿಸಿದರು.
ಅ.19ರಂದು ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಪತ್ರ ಬರೆದು, ಎನ್ ಡಿಎ ಮೈತ್ರಿ ಕೂಟದ ಅಂಗಪಕ್ಷವಾಗಿ ಕೆಜೆಪಿಯನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು. (ಮೋದಿ ಬೆಂಬಲಿಸಿ ಅಡ್ವಾಣಿಗೆ ಪತ್ರ ಬರೆದ ಯಡಿಯೂರಪ್ಪ)
ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಗೂ ಪತ್ರವನ್ನು ಕಳಹಿಸಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಕೂಟಕ್ಕೆ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಬೆಂಬಲ ನೀಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.











Click it and Unblock the Notifications