ಗೌಡರ ಅನುಮತಿ ಪಡೆದು ಪಕ್ಷ ತೊರೆದ ಯತ್ನಾಳ್

ಗುರುವಾರ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಯತ್ನಾಳ್, ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಪಕ್ಷದಲ್ಲಿ ಕೆಲಸ ಮಾಡಿರುವುದು ತೃಪ್ತಿ ತಂದಿದೆ, ರಾಜೀನಾಮೆಯನ್ನು ಅಂಗೀಕರಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಆದ್ದರಿಂದ ನಾನು ದೃಢವಾದ ರಾಜಕೀಯ ತೀರ್ಮಾನ ಕೈಗೊಳ್ಳಬೇಕು. ಆದ್ದರಿಂದ ಜೆಡಿಎಸ್ ತೊರೆಯುತ್ತಿರುವುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಉನ್ನತ ಹುದ್ದೆ ನೀಡಿ ಗೌರವ ಕೊಟ್ಟಿದ್ದೀರಿ. ನಿಮ್ಮ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಅಳಿಲು ಸೇವೆ ಮಾಡಿದ ತೃಪ್ತಿಯಿದೆ. ನಿಮ್ಮ ಬಗ್ಗೆ ಅಪಾರವಾದ ಗೌರವ ಹೊಂದಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ದೇವೇಗೌಡರಿಗೆ ಮನವಿ ಮಾಡಿದ್ದಾರೆ.
ಯತ್ನಾಳ್ ರಾಜೀನಾಮೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ನಷ್ಟ ಉಂಟಾಗಿದೆ. ಲಿಂಗಾಯತ ಸಮುದಾಯದ ಪ್ರಬಲ ಮುಖಂಡರಾಗಿದ್ದ ಬಸನಗೌಡ ಪಾಟೀಲ್ ಅವರನ್ನು ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಕಮಾಡಿತ್ತು.
ಕೆಲವು ದಿನಗಳ ಹಿಂದೆ ಮಾಜಿ ಸ್ಪೀಕರ್ ಕೃಷ್ಣ, ಮಾಜಿ ಸಚಿವ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಶಶಿಲ್ ನಮೋಶಿ ಜೆಡಿಎಸ್ ತೊರೆದಿದ್ದರು. ಸದ್ಯ ಬಸನಗೌಡ ಪಾಟೀಲ್ ಯತ್ನಾಳ್ ಸಹ ಪಕ್ಷ ತೊರೆದಿದ್ದಾರೆ.
ಅ.1ರಂದು ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿ ಎಂದು ಜನರಿಗೆ ಕರೆ ನೀಡಿ ಅಚ್ಚರಿ ಉಂಟು ಮಾಡಿದ್ದರು. (ಮೋದಿ ಬೆಂಬಲಿಸಿ, ಯತ್ನಾಳ್ ಕರೆ)
ಅಂದಿನಿಂದಲೇ ಅವರು ಜೆಡಿಎಸ್ ತೊರೆದು ಮಾತೃಪಕ್ಷ ಬಿಜೆಪಿ ಸೇರಲಿದ್ದಾರೆ ಎಂಬ ಉಹಾಪೋಹಗಳು ಹುಟ್ಟಿಕೊಂಡಿದ್ದವು. ಯತ್ನಾಳ್ ಅವರನ್ನು ಕರೆತರಲು ಬಿಜೆಪಿ ಸಹ ಸಿದ್ದವಾಗಿತ್ತು. ಸದ್ಯ ಜೆಡಿಎಸ್ ತೊರೆದಿರುವ ಯತ್ನಾಳ್ ಬಿಜೆಪಿಗೆ ಮರಳುವುದು ಖಚಿತವಾಗಿದೆ. (ಯತ್ನಾಳ್ ಬಿಜೆಪಿಗೆ ಮರಳಲು ವೇದಿಕೆ ಸಿದ್ಧ)
ಗೌಡರ ಅನುಮತಿ : ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಯತ್ನಾಳ್ ಬಿಜೆಪಿಗೆ ಮರಳಲು ನನ್ನ ಅಭ್ಯಂತರವಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. (ಯತ್ನಾಳ್ ತಡೆಯಲು ನಾನ್ಯಾರು?).












Click it and Unblock the Notifications